ಬೆಂಗಳೂರು, ಮಾ.17 www.bengaluruwire.com : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅಕ್ಷರಶಃ ಅರ್ಥಶಾಸ್ತ್ರಜ್ಞರಂತೆ ಗ್ಯಾರಂಟಿ ಯೋಜನೆಗಳು, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಅಂಕಿಸಂಖ್ಯೆಗಳನ್ನು ಸದನದ ಮುಂದಿಡುತ್ತಾ ಗ್ಯಾರಂಟಿ ಯೋಜನೆಗಳಿಂದ ನಾಡಿನ ಜನತೆಗೆ ಆದ ಅನುಕೂಲಗಳ ಬಗ್ಗೆ ಮಾತನಾಡುತ್ತಾ, ಬಿಜೆಪಿ ವಿರುದ್ಧ ಸಿಡಿದೆದ್ದರು.
ವಿಧಾನಸಭೆಯಲ್ಲಿ ಸೋಮವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರಿಸುತ್ತಾ, ಗ್ಯಾರಂಟಿ ಯೋಜನೆಗಳಿಗೆ ಫೆಬ್ರವರಿವರೆಗೆ ನಾವು, ನಮ್ಮ ಸರ್ಕಾರ ಬರೋಬ್ಬರಿ 76,509 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದು ಸತ್ಯ ಎನ್ನುವುದು ಸದನದಲ್ಲಿರುವ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಗೊತ್ತಿದೆ. ನಮ್ಮ ಸರ್ಕಾರ ದಿವಾಳಿಯಾಗಿದ್ದರೆ 76509 ಕೋಟಿ ಕೊಡಲು ಸಾಧ್ಯವಿತ್ತೆ. ಕಾಂಗ್ರೆಸ್ ಸರ್ಕಾರ 2024-25 ಕ್ಕೆ 52,0009 ಕೋಟಿ ರೂ. ಇಟ್ಟು, 41509 ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಖಜಾನೆ ಖಾಲಿ ಯಾಗಿದೆ ಎಂಬ ಮಾತು ಸತ್ಯಕ್ಕೆ ದೂರ ತಾನೇ ಎಂದು ಅಂಕಿ ಅಂಶಗಳನ್ನು ಮುಂದಿಟ್ಟು ಸಿಎಂ ಪ್ರಶ್ನಿಸಿದರು.
1.26 ಕೋಟಿ ಕುಟುಂಬಗಳಿಗೆ ಯೋಜನೆಗಳು ತಲುಪುತ್ತಿದ್ದು, ಕೊಟ್ಟ ಮಾತಿನಂತೆ ನಡೆದಿದ್ದೇವೆ. ಯಾವ ಕಾರಣಕ್ಕೂ ಯಾವ ಕಾರ್ಯಕ್ರಮವನ್ನೂ ನಿಲ್ಲಿಸುವುದಿಲ್ಲ. ಸಾಲಮನ್ನಾ ಮಾಡಿ ಅಂದರೆ ಹಣ ಎಲ್ಲಿಂದ ತರುವುದು ಎಂದು ಹೇಳಿದ ಬಿಜೆಪಿ, ಅದಾನಿ ಯವರಿಗೆ 17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಇದು ನ್ಯಾಯವೇ? ಎಂದು ಪ್ರಶ್ನಿಸಿದರು.
ರಾಜಕೀಯ ದುರುದ್ದೇಶ ಬಿಟ್ಟು ಮಾತನಾಡಬೇಕೆಂದು ವಿರೋಧ ಪಕ್ಷದವರಿಗೆ ಮನವಿ ಮಾಡಿದ ಸಿಎಂ,

ದೇಶದ 100 ಕೋಟಿ ಜನರಿಗೆ ಕೊಳ್ಳುವ ಆಯ್ಕೆಗಳೇ ಇಲ್ಲ ಎಂದು ವರದಿ ಬಂದಿತ್ತು. 20.5 ಕೋಟಿ ಕುಟುಂಬಗಳು ಅಂದರೆ ನೂರು ಕೋಟಿ ಜನರ ವಾರ್ಷಿಕ ಆದಾಯ 87000 ರೂಪಾಯಿಗಿಂತ ಕಡಿಮೆ ಇದೆ ಎನ್ನುವ ವರದಿ ಬಂದಿದೆ. ಅಸಮಾನತೆ ಅಷ್ಟರ ಮಟ್ಟಿಗೆ ಇದೆ. ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇರುವವರೆಗೆ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ . ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡುವ ಸಾರ್ವತ್ರಿಕ ಮೂಲ ಆದಾಯ ತತ್ವ ಅಗತ್ಯ. ಆರ್ಥಿಕ, ಸಾಮಾಜಿಕ ಶಕ್ತಿಯನ್ನು ಜನರಲ್ಲಿ ತುಂಬಿದರೆ ಜನರ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯ. ನಾವು ಸಮಾಜದ ಶೇ.90 ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದ್ದೇವೆ. ನೀವು ಸಮಾಜದ ಶೇ.10 ಜನರಿಗೆ ಶಕ್ತಿ ತುಂಬುತ್ತಿದ್ದೀರಿ ಅಷ್ಟೇ.

1994ನೇ ಇಸವಿಯಲ್ಲಿ ಶೇ.34ರಷ್ಟು ಇದ್ದ ಶ್ರೀಮಂತರ ಸಂಖ್ಯೆ ಈಗ ಶೇ.57ಕ್ಕೆ ಹೆಚ್ಚಾಗಿದೆ. ಶೇ.50 ಜನರಿಗೆ ಇರುವ ಆರ್ಥಿಕ ಶಕ್ತಿ ಶೇ.15ಕ್ಕೆ ಕುಸಿದಿದೆ. ಇದು ಆತಂಕಕಾರಿ ಸಂಗತಿ ಅಲ್ಲವೇ? ಶ್ರೀಮಂತರು ಶ್ರೀಮಂತರಾದರೆ, ಬಡವರು ಬಡವರಾಗುತ್ತಿದ್ದಾರೆ. ಈ ಅಸಮಾನತೆಯನ್ನು ತೊಡೆದು ಹಾಕಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದರು. ಗ್ಯಾರಂಟಿ ಯೋಜನೆಗಳಿಂದ ಬಡವರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು ಮಾತ್ರವಲ್ಲ, ಸ್ವಾಭಿಮಾನ ಹೆಚ್ಚುತ್ತಿದೆ. ಜನರು ಸಾಮಾಜಿಕವಾಗಿ, ಆರ್ಥಿಕವಾಗಿ, ನಿರ್ಭಯವಾಗಿ, ಅವರ ಬದುಕುತ್ತಿದ್ದು, ಅವರ ಜೀವನ ಸುಧಾರಣೆಯಾಗಿದೆ. ಸಮಾನತೆಯ ಭಾವ ಉಂಟಾಗುತ್ತಿದೆ ಎಂದರು.
ವೈರುಧ್ಯತೆ ಇರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದು, ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು, ನಮಗೆ ಆರ್ಥಿಕ ಸಾಮಾಜಿಕ ಸ್ವಾತಂತ್ಯ ಸಿಕ್ಕಿಲ್ಲ. ಅದು ಸಿಗಬೇಕಾದರೆ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವ ಕೆಲಸವಾಗಬೇಕು ಎಂದು ಅಂಬೇಡ್ಕರ್ ಹೇಳಿದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಬಿಜೆಪಿಯವರಂತೆ ನಾವು ಕೇವಲ ಶೇ.10 ರಷ್ಟು ಜನರ ಕೈಹಿಡಿದು ಶೇ.90 ರಷ್ಟು ಜನರ ಕೈ ಬಿಟ್ಟಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನ ಆರ್ಥಿಕ ನೀತಿ, ನಿಲುವುಗಳು ಯಾರ ಪರವಾಗಿವೆ ಎನ್ನುವ ವ್ಯತ್ಯಾಸವನ್ನು ವಿವರಿಸಿದರು.
ನಮ್ಮ ಗ್ಯಾರಂಟಿಗಳನ್ನು ಟೀಕಿಸಿ, ನಮ್ಮ ಗ್ಯಾರಂಟಿಗಳನ್ನೇ ಕದ್ದು “ಮೋದಿ ಗ್ಯಾರಂಟಿ” ಎಂದು ಹೆಸರು ಬದಲಾಯಿಸಿ ಬಿಜೆಪಿ ಘೋಷಿಸಿದ್ದನ್ನು ವಿವರಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಮೋದಿ ಗ್ಯಾರಂಟಿ” ಜಾಹಿರಾತು ಪ್ರದರ್ಶಿಸಿದರು.
410 ಕೋಟಿ ಜನ ಶಕ್ತಿ ಯೋಜನೆಯಡಿ ಬಸ್ ನಲ್ಲಿ ಪ್ರಯಾಣ :
ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದಿರಿ. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ. ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿದೆ. ಜೂನ್ 11, 2023 ರಿಂದ 410 ಕೋಟಿ ಜನ ಶಕ್ತಿ ಯೋಜನೆಯಡಿ ಓಡಾಡಿದ್ದಾರೆ. ನೀವು ಎಷ್ಟೇ ಸುಳ್ಳು ಹೇಳಿದರೂ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಸೋತಿದ್ದೀರಿ.
ಗ್ಯಾರಂಟಿ ಯೋಜನೆ ಫಲವೇ ಉಪಚುನಾವಣೆಗಳಲ್ಲಿ ನಮ್ಮ ಗೆಲವಿಗೆ ಸಾಕ್ಷಿ :
ನಿಮ್ಮ ಟೀಕೆ, ಆಪಾದನೆಗಳು ಮಾಡಿದ ನಂತರ ಉಪಚುನಾವಣೆಗಳು ನಡೆದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಗೆದ್ದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದೇವೆ. ಶಿಗ್ಗಾಂವಿ ಕ್ಷೇತ್ರದಲ್ಲಿ13 ಸಾವಿರ ಅಂತರದಿಂದ ಹಾಗೂ ಸಂಡೂರು ಕ್ಷೇತ್ರದಲ್ಲಿ 9 ಸಾವಿರ ಅಂತರದಲ್ಲಿ ಗೆದ್ದಿದ್ದೇವೆ. ಮೂರೂ ಕಡೆ ಮಕಾಡೆ ಮಲಗಿದಿರಿ ನೀವು. ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದರೆ ಸಾಧ್ಯವಿಲ್ಲ. ಎರಡು ಬಾರಿ ಅಧಿಕಾರ ಮಾಡಿರುವ ನೀವು ಜನರ ಆಶೀರ್ವಾದದಿಂದ ಗೆದ್ದಿದ್ದೀರೇ? ಆಪರೇಶನ್ ಕಮಲ ಮಾಡಿ 18 ಕ್ಷೇತ್ರಗಳನ್ನು ಗೆದ್ದಿರಿ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಟೀಕಿಸಿದರು.
ಬಸವರಾಜ ಬೊಮ್ಮಾಯಿ ಅವರ ಮಗನ ವಿರುದ್ಧ ಗೆಲ್ಲಬೇಕಾದರೆ ಎಲ್ಲಾ ಜಾತಿ ಜನರು ಮತ ನೀಡಿದ್ದರಿಂದ ನಾವು ಗೆದ್ದಿದ್ದೇವೆ. ನಾವು ಅಪರೇಶನ್ ಕಾಂಗ್ರೆಸ್ ಮಾಡಿಲ್ಲ. ನಾವು ಗ್ಯಾರಂಟಿ ಕೊಡದೇ ಹೋಗಿದ್ದರೆ ಬಡವರು ಮತ ಹಾಕುತ್ತಿರಲಿಲ್ಲ . ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುವ ಈ ಯೋಜನೆಗಳು ಬಡವರ ಬದುಕಿಗೆ ಭರವಸೆ ನೀಡಿವೆ ಎಂದರು.
“ಸದನಕ್ಕೆ ಸುಳ್ಳು ಮಾಹಿತಿ ನೀಡಿದ ಬಸವನಗೌಡ ಪಾಟೀಲ್ ಯತ್ನಾಳ್” :
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ದೊಡ್ಡ ಸುಳ್ಳು ಹೇಳಿದ್ದಾರೆ. ಆರ್.ಎಸ್.ಎಸ್ ಬೈಠಕ್ ನಲ್ಲಿದ್ದಾರೋ, ಸದನದಲ್ಲಿದ್ದಾರೋ ಗೊತ್ತಿಲ್ಲ. ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಕೇಂದ್ರ ಸರ್ಕಾರ 2 ಸಾವಿರ ಕೋಟಿ ರೂ. ಕೊಟ್ಟಿದೆ. ಕರ್ನಾಟಕ ನೀರಾವರಿ ನಿಗಮಕ್ಕೆ 3300 ಕೋಟಿ ರೂ., ವಿಶ್ವೇಶ್ವರ ಜಲನಿಗಮ ಸೇರಿ ಕರ್ನಾಟಕ ನೀರಾವರಿಗೆ ಒಟ್ಟು 10 ಸಾವಿರ ಕೋಟಿ ರೂಪಾಯಿ ರಾಜ್ಯದ ನೀರಾವರಿ ನಿಗಮಕ್ಕೆ ಕೊಟ್ಟಿದೆ ಎಂದು ಹೇಳಿದ್ದಾರೆ. ಮಾಹಿತಿ ಕೊರತೆಯೋ ಉದ್ದೇಶಪೂರ್ವಕ, ಟೀಕೆಗಾಗಿ ಹೇಳಿದ್ದಾರೋ ಗೊತ್ತಿಲ್ಲ.
ವಾಸ್ತವ ಏನೆಂದರೆ 24-1-2025 ರಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಯೋಜನೆಗಳಿಗೆ ವಿಶೇಷ ಸಹಾಯ ನೀಡಿದ್ದು, 50 ವರ್ಷಗಳ ಕಾಲ ಬಡ್ಡಿ ರಹಿತವಾಗಿ ವಿಶೇಷ ನೆರವು ನೀಡಿದೆ. ಮುಳವಾಡ ಏತ ನೀರಾವರಿಗೆ 200 ಕೋಟಿ ರೂ., ಮಹಾಲಕ್ಷ್ಮಿ ಮಲಪ್ರಭಾ ಯೋಜನೆಗೆ 200, ಭದ್ರಾ ಮೇಲ್ದಂಡೆ ಯೋಜನೆಗೆ 300 ಕೋಟಿ ರೂ. ಸೇರಿದಂತೆ ಒಟ್ಟು 1030 ಕೋಟಿ ಕೊಟ್ಟಿದ್ದಾರೆ. ಮಾಹಿತಿ ಕೊರತೆಯಿದ್ದರೆ ಸರಿಯಾಗಿ ಮಾಹಿತಿ ಪಡೆದು ಮಾತನಾಡಿ ಎಂದು ಮುಖ್ಯಮಂತ್ರಿಗಳು ಬಸವನಗೌಡ ಪಾಟೀಲ್ ಯಾತ್ನಾಳ್ ಸದನಕ್ಕೆ ನೀಡಿದ ಮಾಹಿತಿಯ ಬಗ್ಗೆ ಸದನಕ್ಕೆ ವಾಸ್ತವಾಂಶ ವಿವರಿಸಿದರು.