ಬೆಂಗಳೂರು, ಮಾ.17 www.bengaluruwire.com : ಸಿಲಿಕಾನ್ ಸಿಟಿಯಲ್ಲಿ ಮನೆಗೆ ಬಂದು ಚಿನ್ನಾಭರಣ, ಪಾತ್ರೆ-ಪಗಡೆ, ಚಪ್ಪಲಿ ಕದ್ದೊಯ್ದ ಕಳ್ಳತನ ಪ್ರಕರಣಗಳ ಬಗ್ಗೆ ಕೇಳುತ್ತಿದ್ದೆವು. ಇದೀಗ ಉಲ್ಲಾಳ ವಾರ್ಡ್ ನಲ್ಲಿ ಹಗಲು ಹೊತ್ತಿನಲ್ಲೇ ಕಳ್ಳನೊಬ್ಬ ಸಿಲಿಂಡರ್ ಹೊತ್ತಯ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ 6ನೇ ಬ್ಲಾಕ್ ನಲ್ಲಿನ ಉಲ್ಲಾಳ ಉಪನಗರ ಪೋಸ್ಟ್ ಆಫ್ ಹತ್ತಿರದ ಮನೆಯೊಂದರಲ್ಲಿ ಮಾ.14ರಂದು ಈ ಘಟನೆ ನಡೆದಿದೆ. ಮೊದಲಿಗೆ ಮನೆಯೊಂದರ ಮುಂದೆ ದ್ವಿಚಕ್ರ ವಾಹನ ನಿಲ್ಲಿಸುವ ಕಳ್ಳ, ಮನೆಯ ಗೇಟ್ ಹೊರಗಿನಿಂದ ಯಾರಾದರೂ ಮನೆಯಲ್ಲಿದ್ದಾರಾ ಎಂದು ಪರಿಶೀಲಿಸಿ ನಂತರ ತನ್ನ ದ್ವಿಚಕ್ರ ವಾಹನವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸುತ್ತಾನೆ. ತದನಂತರ ಗೇಟ್ ತೆಗೆದು ಒಳಗೆ ಬಂದ ಆ ಆಸಾಮಿ, ಮನೆಯ ಮೆಟ್ಟಿಲುಗಳ ಕೆಳಗ್ಗೆ ಇಟ್ಟ ಸಿಲಿಂಡರ್ ಅನ್ನು ಅನಾಯಾಸವಾಗಿ ಹೊತ್ತೊಯ್ಯುವ ದೃಶ್ಯ ಎರಡು ಸಿಸಿ ಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ.
ಈ ಕುರಿತು ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ಕ್ಷಮಾಭಿವೃದ್ಧಿ ಸಂಘದಲ್ಲಿನ ಲೇಔಟ್ ನಿವಾಸಿಯೊಬ್ಬರು ಗಮನಕ್ಕೆ ತಂದಿದ್ದು, ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಂಘದ ಅಧ್ಯಕ್ಷ ಡಿ.ಎಸ್.ಗೌಡ ಆ ಮನೆಯ ಮಾಲೀಕರಿಗೆ ಸಲಹೆ ನೀಡಿದ್ದಾರೆ.
“ಇದೇ ಮೊದಲ ಬಾರಿಗೆ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ 1 ರಿಂದ 9ನೇ ಬ್ಲಾಕ್ ಬಡಾವಣೆಯಲ್ಲಿ ಇಂತಹ ಪ್ರಕರಣ ಗಮನಕ್ಕೆ ಬಂದಿರುವುದು” ಎಂದು ಬೆಂಗಳೂರು ವೈರ್ ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮನೆಯ ಹೊರಗೆ ಗ್ಯಾಸ್ ಸಿಲೆಂಡರ್, ಬೆಲೆ ಬಾಳುವ ವಸ್ತುಗಳನ್ನು ಇಡುವ ಸಾರ್ವಜನಿಕರಿಗೆ ಈ ಗ್ಯಾಸ್ ಸಿಲೆಂಡರ್ ಕಳ್ಳತನ ಪ್ರಕರಣ ಒಂದು ಪಾಠವಾಗಲಿ. ನಿಮ್ಮ ಹಾಗೂ ನಿಮ್ಮ ಮನೆಯವರು ಹಾಗೂ ವಸ್ತುಗಳ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸಿ ಎಂಬುದು ಬೆಂಗಳೂರು ವೈರ್ ಕಾಳಜಿ ಕೂಡ.
