ಬೆಂಗಳೂರು, ಮಾ.13 www.bengaluruwire.com : ರಾಜ್ಯದಲ್ಲಿ ಔಷಧಿಗಳ ಕೊರತೆಯನ್ನ ಸರಿಪಡಿಸುವ ನಿಟ್ಟಿನಲ್ಲಿ ಹಾಗೂ ಉತ್ತಮ ವೈದ್ಯಕೀಯ ಸೇವೆ ನೀಡಲು ಆರೋಗ್ಯ ಇಲಾಖೆ ಹಲವು ಕ್ರಮಗಳನ್ನ ಕೈಗೊಂಡಿದೆ. ಈಗಾಗಲೇ ಬೇಡಿಕೆಗೆ ಅನುಗುಣವಾಗಿ ಈ ಹಿಂದೆ ಇದ್ದ 732 ಔಷಧಿಗಳ ಪಟ್ಟಿಯನ್ನು 1032 ಕ್ಕೆ ಹೆಚ್ಚಿಸಲಾಗಿದೆ. ಇವುಗಳನ್ನು ಶೀಘ್ರವೇ ಖರೀದಿಸಿ ಉಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಅಶ್ವಥ್ ನಾರಾಯಣ ಅವರು ಪ್ರಶ್ನೆ ಕೇಳಿ, ರಾಜ್ಯಸರ್ಕಾರ ನಿಯಮಾನುಸಾರ 761 ಔಷಧಿಗಳು ಲಭ್ಯವಿರಬೇಕಿತ್ತು. ಆದರೆ ವಾಸ್ತವವಾಗಿ 231 ಮಾತ್ರ ಇದೆ.
ನಾಲ್ಕು ವರ್ಷಗಳಿಂದಲೂ ಔಷಧಿ ಖರೀದಿಗೆ ಟೆಂಡರ್ ಆಗಿಲ್ಲ. ರಾಷ್ಟ್ರೀಯ ಆರೋಗ್ಯ ಕಾರ್ಯ ಯೋಜನೆಯಡಿ 2024-25ನೇ ಸಾಲಿಗೆ 157 ಕೋಟಿ ರೂ.ಗಳನ್ನು ಉಚಿತ ಔಷಧಿಗಳ ಸರಬರಾಜಿಗಾಗಿ ಮೀಸಲಿಡಲಾಗಿದೆ. ಅದರಲ್ಲಿ ಡಿಸೆಂಬರ್‌ವರೆಗೆ 5.5 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿದ್ದು, ಇದು ಶೇ.3.5 ರಷ್ಟು ಸಾಧನೆಯಾಗಿದೆ ಎಂದು ಹೇಳಿದರು.
ಸರ್ಕಾರವು ಔಷಧಿಗಳನ್ನು ಪೂರೈಸುತ್ತಿಲ್ಲ. ಕೇಂದ್ರದಿಂದ ಬಿಡುಗಡೆಯಾಗಿರುವ ಅನುದಾನವೂ ಖರ್ಚಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಔಷಧಿಗಳ ಸರಬರಾಜಿನಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಜೀವನಾವಶ್ಯಕ ಮತ್ತು ಅಪಕ್ಷೇಣೀಯ ಎಂಬ 2 ವಿಧಗಳಲ್ಲಿ ಔಷಧಿಗಳನ್ನು ಖರೀದಿಸಲಾಗುತ್ತಿದೆ. ಈ ಬಾರಿಯ ಟೆಂಡರ್ ನಲ್ಲಿ ಈ 1032 ಔಷಧಿಗಳನ್ನು ಖರೀದಿಸಿ ಉಚಿತವಾಗಿ ವಿತರಿಸಲಾಗುತ್ತದೆ. ಈ ಮೂಲಕ ಸರ್ಕಾರ ತನ್ನ ಮೂಲಭೂತ ಕರ್ತವ್ಯಕ್ಕೆ ಬದ್ಧವಾಗಿರಲಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ಕೆಲವೊಂದು ಔಷಧಿಗಳ ಕೊರತೆಗೆ ಕಾರಣ ಟೆಂಡರುಗಳಲ್ಲಿ ಯಾರೂ ಭಾಗವಹಿಸದೇ ಇರುವುದಾಗಿದೆ. ಈ ಔಷಧಿಗಳ ಮೌಲ್ಯ ಮತ್ತು ಪ್ರಮಾಣ ಕಡಿಮೆ ಇರುವುದರಿಂದ ಹಲವಾರು ಬಾರಿ ಟೆಂಡರ್ ಆಹ್ವಾನಿಸದರೂ ಯಾರೂ ಸ್ಪಂದಿಸಿಲ್ಲ. ಹೀಗಾಗಿ ಔಷಧಿ ಸರಬರಾಜು, ಖರೀದಿ ಪ್ರಕ್ರಿಯೆಯ ಟೆಂಡರ್ ಷರತ್ತುಗಳನ್ನು ಸರಳೀಕರಣ ಮಾಡಿ ಔಷಧಿಗಳನ್ನು ಸರಬರಾಜು ಮಾಡಲು ಹೆಚ್ಚಿನ ಬಿಡ್ ದಾರರು ಭಾಗವಹಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ತುರ್ತು ಸಂದರ್ಭದಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧಗಳನ್ನು ತಮ್ಮ ಮಟ್ಟದಲ್ಲಿ ಸೂಕ್ತ ಪ್ರಾಧಿಕಾರದ ಅನುಮೋದನೆಯೊಂದಿಗೆ ರಾಷ್ಟ್ರೀಯ ಉಚಿತ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ, ಆರೋಗ್ಯ ಸಂಸ್ಥೆಗಳು ಕೊರತೆ ಔಷಧಿಗಳನ್ನು ಸ್ಥಳೀಯವಾಗಿ ಅಗತ್ಯ ಪ್ರಮಾಣದಲ್ಲಿ ಖರೀದಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆ.
ತ್ವರಿತವಾಗಿ ಅವಶ್ಯವಿರುವ ಔಷಧಿಗಳನ್ನು ಖರೀದಿಸಲು ಕೆಎಸ್‍ಎಂಎಸ್‍ಸಿಎಲ್ (KSMSCL) ನ ಹಿಂದಿನ ಸರಬರಾಜುದಾರರಿಂದ ಶೇ.25 ಹೆಚ್ಚುವರಿ ಪ್ರಮಾಣದಲ್ಲಿ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ 23 ಔಷಧಿಗಳನ್ನು 4G Excemption ಮೂಲಕ ಕೆಎಪಿಎಲ್ (Karnataka Antibiotic and Pharmceuticals Limited – KAPL) ನಿಂದ ಒಟ್ಟು 9.50 ಕೋಟಿ ರೂ. ಮೌಲ್ಯದ ಔಷಧಿಗಳನ್ನು ಖರೀದಿಸಲು ಪ್ರಸ್ತಾವನೆ ಪರಿಶೀಲನೆಯಲ್ಲಿರುತ್ತದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
ನಕಲಿ ಔಷಧ ಮಾರಾಟ ಜಾಲ ಹತ್ತಿಕ್ಕಲು ಕಠಿಣ ಕ್ರಮ :
ಇನ್ನು ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಜಾಲವನ್ನು ಹತ್ತಿಕ್ಕಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಔಷಧ ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸಿ 2023-24ನೇ ಸಾಲಿನಲ್ಲಿ 10 ಮೊಕದ್ದಮೆಗಳನ್ನು ಹಾಗೂ 2024-25ನೇ ಸಾಲಿನಲ್ಲಿ 5 ಮೊಕದ್ದಮೆಗಳನ್ನು ಔಷಧ ಮತ್ತು ಕಾಂತಿವರ್ಧಕ ನಿಯಮಾವಳಿಗಳ ಅಡಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. 87 ಫಾರ್ಮಸಿಗಳನ್ನು ಅಮನತಿನಲ್ಲಿಟ್ಟು, 3 ಫಾರ್ಮಸಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಶೇಷವಾಗಿ ಕಳಪೆ ಗುಣಮಟ್ಟದ ಔಷಧಿಗಳ ವಿರುದ್ಧ ಆರೋಗ್ಯ ಇಲಾಖೆ ಸತತವಾಗಿ ಕ್ರಮ ಕೈಗೊಳ್ಳುತ್ತಿದೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಖಂಡಗಳಲ್ಲಿ ಈ ಔಷಧ ತಯಾರಿಕ ಘಟಕಗಳು ಇವೆ. ಕಳಪೆ ಗುಣಮಟ್ಟದ ಔಷಧಿ ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು, ಇದನ್ನು ಮಟ್ಟಹಾಕಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೂಡ ಪತ್ರ ಬರೆಯಲಾಗಿದೆ ಎಂದು ಸದನಕ್ಕೆ ಉತ್ತರಿಸಿದರು.
104 ಔಷಧ ಪರಿವೀಕ್ಷಕರ ಖಾಲಿ ಹುದ್ದೆ ಭರ್ತಿ ವಿಷಯ ಕೋರ್ಟ್ ನಲ್ಲಿದೆ :
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಗೆ ಒಟ್ಟು 112 ಔಷಧ ಪರಿವೀಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 08 ಔಷಧ ಪರಿವೀಕ್ಷಕರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಉಳಿದ 104 ಹುದ್ದೆಗಳು ಖಾಲಿ ಇರುತ್ತವೆ. 2018ರಲ್ಲಿ 83 ಪರಿವೀಕ್ಷಕರ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದ ಮೇರೆಗೆ 67 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ 2021ರ ಜೂ.23ರಂದು ಇಲಾಖೆಗೆ ಆಯ್ಕೆಪಟ್ಟಿಯನ್ನು ಕಳುಹಿಸಲಾಗಿದೆ.
ಈ ಆಯ್ಕೆಪಟ್ಟಿಯನ್ನು ವಿವಿಧ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಪ್ರಸ್ತುತ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು ವಿಚಾರಣಾ ಹಂತದಲ್ಲಿರುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ವಿವರಿಸಿದರು.