ಬೆಂಗಳೂರು, ಮಾ.12 www.bengaluruwire.com : ಒಂಬತ್ತು ಹೊಸ ವಿಶ್ವವಿದ್ಯಾಲಯಗಳ (Nine new universities) ಭವಿಷ್ಯದ ವಿಚಾರವಾಗಿ ಸಂಪುಟದ ಉಪ ಸಮಿತಿಯಲ್ಲಿ ಸಮಗ್ರವಾಗಿ ಚರ್ಚೆಯಾಗಿದೆ. ಉನ್ನತ ಶಿಕ್ಷಣ ಇಲಾಖೆ ಮತ್ತು ಆರ್ಥಿಕ ಇಲಾಖೆಗಳು ಒಟ್ಟಾರೆ ಸೇರಿ ವಿಸ್ತೃತ ವರದಿಯನ್ನು ಸಚಿವ ಸಂಪುಟಕ್ಕೆ ಮಂಡಿಸಿ, ಮುಖ್ಯಮಂತ್ರಿಗಳು ಮತ್ತು ಸಚಿವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ (Higher Education Minister Dr. M.C. Sudhakar) ತಿಳಿಸಿದ್ದಾರೆ.
ವಿಧಾನ ಪರಿಷತ್ (Legislative Council)ನಲ್ಲಿ ಮಂಗಳವಾರ ಗಮನ ಸೆಳೆಯುವ ಸೂಚನೆ ವೇಳೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಾದ ಭೋಜೇಗೌಡ, ಎಸ್.ವಿ.ಸಂಕನೂರು, ನವೀನ್, ಸುಶೀಲ್ ನಮೋಶಿ ಸೇರಿದಂತೆ ಸದಸ್ಯರು ಮಾನತಾಡಿ ಈ ವಿವಿಗಳನ್ನು ಸರ್ಕಾರ ಮುಚ್ಚಬಾರದು ಎಂದು ಆಗ್ರಹಿಸಿದರು. ಆಡಳಿತ ಪಕ್ಷದಿಂದ ಪುಟ್ಟಣ್ಣ, ನಾಗರಾಜ್ ಯಾದವ್ ಕೂಡ ಅವರ ಅಭಿಪ್ರಾಯ ಮಂಡಿಸಿದರು.
ಈ ಸಂದರ್ಭದಲ್ಲಿ ಸದನಲ್ಲಿ ಸುದೀರ್ಘ ಉತ್ತರ ನೀಡಿದ ಸಚಿವರು, ಪ್ರತಿಪಕ್ಷದಂತೆ ಆಡಳಿತ ಪಕ್ಷದ ಸದಸ್ಯರಿಂದಲೂ ತಮ್ಮದೇ ಆದ ಅಭಿಪ್ರಾಯಗಳು ಬಂದಿವೆ. ಪ್ರತಿಪಕ್ಷದವರು ರಾಜಕೀಯ ಕಾರಣಕ್ಕಾಗಿ ಈ ಒಂಬತ್ತು ಹೊಸ ವಿವಿಗಳನ್ನು ಮುಚ್ಚುವ ನಿರ್ಧಾರ ಮಾಡಲಾಗಿದೆ ಎಂದು ಬೀದಿಯಲ್ಲಿ ನಿಂತು ಬೊಬ್ಬೆ ಹೊಡೆಯುತ್ತಿದ್ದಾರೆ. ಅಂತಹ ಯಾವುದೇ ನಿರ್ಧಾರ ಆಗಿಲ್ಲ.
ಸರ್ಕಾರದ ಮುಂದೆ ಕೆಲವೊಂದು ಆಯ್ಕೆಗಳಿವೆ. ಈ ಬಗ್ಗೆ ಸಂಪುಟದ ಉಪ ಸಮಿತಿ ಮುಂದೆ ಸಮಗ್ರವಾದ ಚರ್ಚೆಯ ಹಂತದಲ್ಲಿದೆ. ಸಭೆಯಲ್ಲಿ ಸ್ವೀಕೃತವಾದ ಸಲಹೆಗಳನ್ನು ಪರಾಮರ್ಶಿಸಿ ಕೆಲವು ವಿವಿಗಳ ವಿಲೀನ, ಹೆಚ್ಚಿನ ಅನುದಾನದ ಅಗತ್ಯತೆ ಮತ್ತು ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ವಿವಿಗಳ ಬಲವರ್ಧನೆಗಾಗಿ ಉನ್ನತ ಶಿಕ್ಷಣ ಇಲಾಖೆ ಮತ್ತು ಆರ್ಥಿಕ ಇಲಾಖೆಯು ಒಟ್ಟಾರೆ ಸೇರಿ ವಿಸ್ತೃತವಾದ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಪರಿಶೀಲಿಸಲಗುತ್ತಿದೆ ಎಂದು ತಿಳಿಸಿದರು.
ನೂತನ ವಿವಿ ವಿಚಾರದಲ್ಲಿ ವಾಸ್ತವವಾಗಿ ಏನಾಗಿದೆ?:
ಆರ್ಥಿಕ ಇಲಾಖೆ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಈ ವಿವಿಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವಿವಿಗೆ 20 ಕೋಟಿ ರು. ಕೊಡಬೇಕೆಂಬ ಹೇಮಂತ್ ಕುಮಾರ್ ಕಮಿಟಿ ವರದಿಯನ್ನು ಹಿಂದಿನ ಸರ್ಕಾರ ಕಸದ ಬುಟ್ಟಿಗೆ ಹಾಕಿದೆ. ಕೇವಲ ವಿವಿಯ ನಾಮಫಲಕ, ಅದಕ್ಕೊಬ್ಬ ಕುಲಪತಿ, ಇಬ್ಬರು ಕುಲಸಚಿವರನ್ನು ನೇಮಿಸಿದರೆ ಸಾಕಾ? ಕಟ್ಟಡ, ಬೋಧಕ ಸಿಬ್ಬಂದಿ, ವಾಹನ, ಜಾಗ ಬೇರೆ ಯಾವ ಮೂಲಭೂತ ಸೌಲಭ್ಯ, ಅನುದಾನ ಏನೂ ಕೊಡದೆ ವಿಶ್ವವಿದ್ಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತದೆ? ನಿಮ್ಮ ಬೇಜವಾಬ್ದಾರಿ, ಸ್ವಾರ್ಥ, ಸ್ವಹಿತಾಸಕ್ತಿಗಾಗಿ ಈ ವಿವಿಗಳ ಸ್ಥಾಪನೆ ಮಾಡಿದ್ದೀರಿ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
ವಿವಿಗಳ ನಾಮಫಲಕ ಇದ್ದರೆ ಮಾತ್ರ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತೇವೆ ಎಂದು ಯಾವ ವಿದ್ಯಾರ್ಥಿಗಳೂ ಹೇಳಿಲ್ಲ. ವಿಶ್ವವಿದ್ಯಾಲಯ ಎಲ್ಲೇ ಇರಲಿ ಹತ್ತಿರದ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ವಿವಿಗಳಲ್ಲಿ ಇದುವರೆಗೆ ಹೆಣ್ಣು ಮಕ್ಕಳು, ಎಸ್ಸಿಎಸ್ಟಿ ವಿದ್ಯಾರ್ಥಿಗಳು, ಹಿಂದುಳಿದವರು ವ್ಯಾಸಂಗ ಮಾಡಿಲ್ಲವಾ? ಪ್ರತಿಷ್ಠಿತ ವಿವಿಗಳಿಂದ ಪದವಿ ಪ್ರಮಾಣ ಪತ್ರಗಳನ್ನು ಪಡೆದಾಗ ನಮ್ಮ ವಿದ್ಯಾರ್ಥಿಗಳು ಉದ್ಯೋಗಾವಕಾಶಗಳು, ಉನ್ನತ ಶಿಕ್ಷಣಕ್ಕೆ ವಿದೇಶಗಳಿಗೆ ಹೋದಾಗ ಅವಕಾಶಗಳೂ ಹೆಚ್ಚಾಗುತ್ತವೆ.
ಹೊಸ ಕೋರ್ಸ್ ಗಳಿಂದ ಹೊಸ ವಿವಿಗಳಲ್ಲಿ ದಾಖಲಾತಿ ಹೆಚ್ಚಳವಾಗಿದೆ :
ಹೊಸ ವಿವಿಗಳಲ್ಲಿ ದಾಖಲಾತಿ ಹೆಚ್ಚಾಗಿರುವುದು ಉನ್ನತ ಶಿಕ್ಷಣ ಇಲಾಖೆಯು ತಂದಿರುವ ಹೊಸ ಕೋರ್ಸುಗಳಿಂದ. ನಮ್ಮ ಸರ್ಕಾರ ಬಂದ ಮೇಲೆ 17,000 ಹಳೆಯ ಬೇಡಿಕೆ ಇಲ್ಲದ ಕೋರ್ಸುಗಳನ್ನು ಬಂದ್ ಮಾಡಿ 20 ಸಾವಿರಕ್ಕೂ ಹೆಚ್ಚು ಹೊಸ ಕೋರ್ಸುಗಳನ್ನು ಎಲ್ಲ ವಿವಿಗಳಲ್ಲೂ ಪರಿಚಯಿಸಿದೆ. ಇದನ್ನು ಹಿಂದಿನ ಸರ್ಕಾರವೇ ಮಾಡಿದ್ದರೆ ನಮ್ಮ ಮಕ್ಕಳು ಖಾಸಗಿ ವಿವಿಗಳಿಗೆ ದುಬಾರಿ ಶುಲ್ಕ ಕೊಟ್ಟು ಹೋಗಬೇಕಿರಲಿಲ್ಲ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
2800 ಹುದ್ದೆಗಳ ಭರ್ತಿಗೆ ಸಿಎಂ ಒಪ್ಪಿಗೆ :
ಇವತ್ತು ಎಲ್ಲ ವಿವಿಗಳ ಖಾಯಂ ನೌಕರರಿಗೆ ವಾರ್ಷಿಕ 950 ಕೋಟಿ ರು. ವೇತನವನ್ನು ಸರ್ಕಾರ ನೀಡುತ್ತಿದೆ. ಶೇ.50ರಷ್ಟು ಪಿಂಚಿಣಿಯನ್ನೂ ಸರ್ಕಾರವೇ ಭರಿಸುತ್ತಿದೆ. 32 ವಿವಿಗಳಲ್ಲಿ 2800 ಹುದ್ದೆಗಳು ಖಾಲಿ ಇವೆ ನಿಜ. ಇದಕ್ಕೆ ನಮ್ಮ ಸರ್ಕಾರ ಮಾತ್ರ ಕಾರಣವಾ? ನಮ್ಮ ಮುಖ್ಯಮಂತ್ರಿಯವರು ಅನಗತ್ಯ ಹುದ್ದೆಗಳನ್ನು ಕೈಬಿಟ್ಟು ಉಳಿದ ಹುದ್ದೆಗಳ ಭರ್ತಿ ಮಾಡಲು ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಒಟ್ಟು ಪ್ರವೇಶಾತಿ ಅನುಪಾತಕ್ಕೂ ವಿವಿಗಳಿಗೂ ಸಂಬಂಧ ಇಲ್ಲ:
ಹೆಚ್ಚು ವಿವಿ ಸ್ಥಾಪಿಸಿದಾಕ್ಷಣ ಉನ್ನತ ಶಿಕ್ಷಣದ ಒಟ್ಟಾರೆ ದಾಖಲಾತಿ ಪ್ರಮಾಣ ಹೆಚ್ಚಾಗುವುದಾಗಿದ್ದರೆ, ಮಹಾರಾಣಿ ಕ್ಲಸ್ಟರ್ ವಿವಿ ಸ್ಥಾಪನೆಗೂ ಮೊದಲು 6000 ವಿದ್ಯಾರ್ಥಿಗಳ ಸಂಖ್ಯೆ ಈಗ ಸುಮಾರು 4130ಕ್ಕೆ ಏಕೆ ಕುಸಿದಿದೆ.
ತಮಿಳುನಾಡಲ್ಲಿ 14 ವಿವಿಗಳು, 2800 ಕಾಲೇಜುಗಳಿವೆ ಅಲ್ಲಿ ವಿದ್ಯಾರ್ಥಿಗಳ ಒಟ್ಟು ಪ್ರವೇಶಾತಿ ಅನುಪಾತ (Gross Enrolment Ratio – GER) ಶೇ.47., ತೆಲಂಗಾಣದಲ್ಲಿ 11 ವಿವಿ, 1200 ಕಾಲೇಜುಗಳಿದ್ದು ಜಿಇಆರ್ ಶೇ.40ರಷ್ಟಿದೆ, ಆಂಧ್ರ ಪ್ರದೇಶದಲ್ಲಿ 12 ವಿವಿಗಳು, 1200 ಕಾಲೇಜುಗಳಿದ್ದು ಜಿಇಆರ್ ಶೇ.36, ಕೇರಳದಲ್ಲಿ 5 ವಿವಿಗಳಿದ್ದು, 1250 ಕಾಲೇಜುಗಳಿವೆ ಅಲ್ಲಿ ಶೇ.41ರಷ್ಟು ಜಿಇಆರ್ ಇದೆ. ಮಹಾರಾಷ್ಟ್ರದಲ್ಲಿ 12 ವಿವಿ 3400 ಕಾಲೇಜುಗಳಿದ್ದು ಜಿಇಆರ್ ಶೇ.33ರಷ್ಟಿದೆ.
ನಮ್ಮ ರಾಜ್ಯದಲ್ಲಿ 32 ವಿಶ್ವವಿದ್ಯಾಲಯಗಳು 3600 ಕಾಲೇಜುಗಳಿವೆ. ಇವುಗಳಲ್ಲಿ ಶೇ.36ರಷ್ಟು ಜಿಇಆರ್ ಇದೆ. ಹಾಗಾಗಿ ವಿಶ್ವವಿದ್ಯಾಲಯಗಳನ್ನು ಹೆಚ್ಚು ಸ್ಥಾಪಿಸಿದಾಕ್ಷಣ ಜಿಇಆರ್ ಹೆಚ್ಚಾಗುವುದಿಲ್ಲ. ಗುಣಮಟ್ಟದ ಶಿಕ್ಷಣ ಕೊಟ್ಟರೆ ಜಿಇಆರ್ ಹೆಚ್ಚಾಗುತ್ತದೆ. ಇವತ್ತು ನಮ್ಮ ಮಕ್ಕಳು, ಪೋಷಕರು ಗುಣಮಟ್ಟದ ಶಿಕ್ಷಣಕ್ಕಾಗಿ ಸಾಲ ಮಾಡಿಯಾದರೂ ಸರಿ ಖಾಸಗಿ ಕಾಲೇಜುಗಳಿಗೆ ಸೇರಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.