ನವದೆಹಲಿ, ಮಾ.12 www.bengaluruwire.com : ವಿಶ್ವದಲ್ಲೇ ಅತ್ಯಂತ ಹೆಚ್ಚಿನ ವಾಯುಮಾಲಿನ್ಯ 20 ನಗರಗಳ ಪಟ್ಟಿಯಲ್ಲಿ ಮೇಘಾಲಯದ ಬೈನಿರ್ಹತ್ ಮೊದಲ ಸ್ಥಾನದಲ್ಲಿದೆ. ಇದರಿಂದಾಗಿ ನೈಸರ್ಗಿಕ ಸೌಂದರ್ಯದಿಂದ ಗಮನ ಸೆಳೆದ ಈಶಾನ್ಯ ರಾಜ್ಯಗಳ ಪಾಲಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ.
ಸ್ವಿಜರ್ ಲ್ಯಾಂಡಿ (Switzerland)ನ ವಾಯು ಗುಣಮಟ್ಟ ತಂತ್ರಜ್ಞಾನ ಕಂಪನಿ ಐಕ್ಯೂಏರ್ (IQAir) ನ ವಿಶ್ವ ವಾಯು ಗುಣಮಟ್ಟ ವರದಿ 2024 (World Air Quality Report 2024)ರಲ್ಲಿ ಭಾರತದ ವಾಯು ಮಾಲಿನ್ಯದ ಗುಣಮಟ್ಟವನ್ನು ಎತ್ತಿ ತೋರಿಸಿದೆ. ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪೈಕಿ 13 ನಗರಗಳು ಭಾರತದಲ್ಲಿವೆ ಎಂದು ವರದಿ ಬಹಿರಂಗಪಡಿಸಿದೆ. ಮೇಘಾಲಯದ ಬೈನಿರ್ಹತ್ ಜಾಗತಿಕವಾಗಿ ಅತ್ಯಂತ ಕಲುಷಿತ ನಗರವಾಗಿದೆ ಎಂದು ರಿಪೋರ್ಟ್ ಹೊರಗೆಡವಿದೆ.
ಭಾರತದ 13 ಅತ್ಯಂತ ಕಲುಷಿತ ನಗರಗಳು :
ಬೈನಿರ್ಹತ್, ಮೇಘಾಲಯ : ಜಾಗತಿಕವಾಗಿ ಅತ್ಯಂತ ಕಲುಷಿತ ನಗರವೆಂದು ಶ್ರೇಣೀಕರಿಸಲ್ಪಟ್ಟಿದೆ, ವಾರ್ಷಿಕ ಸರಾಸರಿ ಪಿಎಮ್ 2.5 ಮೈಕ್ರೋಗ್ರಾಮ್ ಸಾಂದ್ರತೆಯು 128.2 ಮೈಕ್ರೋಗ್ರಾಮ್ ಆಗಿದೆ.
ದೆಹಲಿ: ಸತತ ಆರನೇ ವರ್ಷವೂ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ನಗರವಾಗಿ ಸ್ಥಾನ ಪಡೆದಿದೆ. ಪಿಎಮ್ 2.5 ಮಟ್ಟವು 2023 ರಲ್ಲಿ 102.4 ಮೈಕ್ರೋಗ್ರಾಮ್ ನಿಂದ 2024 ರಲ್ಲಿ 108.3 ಮೈಕ್ರೋಗ್ರಾಮ್ ಗೆ ಏರಿಕೆಯಾಗಿದೆ.

ಇತರ ನಗರಗಳು: ಭಿವಾಡಿ (ರಾಜಸ್ತಾನ), ಗಂಗಾನಗರ(ರಾಜಸ್ತಾನ), ಹನುಮಾನ್‌ಗಢ (ರಾಜಸ್ತಾನ), ಮುಲ್ಲನ್‌ಪುರ (ಪಂಜಾಬ್), ಫರಿದಾಬಾದ್ (ಹರಿಯಾಣ), ಗುರುಗ್ರಾಮ್(ಹರಿಯಾಣ), ಲೋಣಿ (ಉತ್ತರಪ್ರದೇಶ), ಮುಜಫರ್‌ನಗರ(ಉತ್ತರಪ್ರದೇಶ), ನೋಯ್ಡಾ(ಉತ್ತರಪ್ರದೇಶ) ಮತ್ತು ಗ್ರೇಟರ್ ನೋಯ್ಡಾ(ಉತ್ತರಪ್ರದೇಶ).
ಭಾರತದ ವಾಯುವ್ಯ ಪ್ರದೇಶದ ಈ ನಗರಗಳು, ವಿಶೇಷವಾಗಿ ರಾಜಸ್ಥಾನ ಮತ್ತು ಉತ್ತರ ಪ್ರದೇಶ ಹಾಗೂ ದೇಶದ ಅತ್ಯಂತ ಕಲುಷಿತ ನಗರಗಳಲ್ಲಿ ಸೇರಿವೆ.
ಇನ್ನು ಬೆಂಗಳೂರಿನ ವಾಯು ಮಾಲಿನ್ಯದ ಪ್ರಮಾಣ 2023ರ ಇಸವಿಯಲ್ಲಿ 28.6 ಮೈಕ್ರೋಗ್ರಾಮ್ ನಷ್ಟಿತ್ತುಮ ಅದು 2024ರ ಇಸವಿಯಲ್ಲಿ 30 ಮೈಕ್ರೋಗ್ರಾಮ್, ಅಂದರೆ ಶೇ.4ರಷ್ಟು ಏರಿಕೆಯಾಗಿದೆ ಎಂದು ಐಕ್ಯೂಏರ್ ವರದಿಯಲ್ಲಿ ತಿಳಿಸಿದೆ.
ಪ್ರಮುಖ ಅಂಶಗಳು:
* ರಾಷ್ಟ್ರೀಯ ಶ್ರೇಯಾಂಕ: 2024 ರಲ್ಲಿ ಭಾರತವು ವಿಶ್ವದ ಐದನೇ ಅತ್ಯಂತ ಕಲುಷಿತ ದೇಶವಾಗಿದೆ. 2023 ರಲ್ಲಿ ಮೂರನೇ ಸ್ಥಾನದಿಂದ ಸ್ವಲ್ಪ ಸುಧಾರಣೆಯಾಗಿದೆ.
* ದೆಹಲಿಯ ಮಾಲಿನ್ಯ: ದೆಹಲಿಯು ವಿಶ್ವದ ಅತ್ಯಂತ ಮಾಲಿನ್ಯ ಹೊಂದಿರುವ ರಾಷ್ಟ್ರ ರಾಜಧಾನಿಗಳ ಪೈಕಿ ಮೊದಲ ಸ್ಥಾನದಲ್ಲಿದೆ. ನಗರದ ವಾರ್ಷಿಕ ಸರಾಸರಿ PM2.5 ಸಾಂದ್ರತೆಯು ಪ್ರತಿ ಘನ ಮೀಟರ್ ಗಾಳಿಗೆ 108.3 ಮೈಕ್ರೋಗ್ರಾಮ್ ನಷ್ಟಿದೆ. ಕಳೆದ ವರ್ಷ 102.4 ಮೈಕ್ರೋಗ್ರಾಂಗಳಷ್ಟಿದ್ದು, ಹಿಂದಿನ ವರ್ಷಕ್ಕಿಂತ ಶೇ.6ರಷ್ಟು ಏರಿಕೆಯಾಗಿದೆ.
* PM2.5 ಮಟ್ಟ ಭಾರತದಲ್ಲಿ ಶೇ.7ರಷ್ಟು ಕಡಿಮೆಯಾಗಿದೆ :
ಭಾರತದಲ್ಲಿ 2024 ರಲ್ಲಿ PM2.5 ಸಾಂದ್ರತೆಯು ಶೇ.7 ರಷ್ಟು ಕಡಿಮೆಯಾಗಿದೆ. ಪ್ರತಿ ಘನ ಮೀಟರ್‌ಗೆ ಸರಾಸರಿ 50.6 ಮೈಕ್ರೋಗ್ರಾಂನಷ್ಟಿದೆ. 2023 ರಲ್ಲಿ ಪ್ರತಿ ಘನ ಮೀಟರ್‌ಗೆ 54.4 ಮೈಕ್ರೋಗ್ರಾಂಗಳಿಗೆ ಹೋಲಿಸಿದರೆ, ಶೇ.7ರಷ್ಟು ಇಳಿಕೆಯಾಗಿದೆ. ಆದಾಗ್ಯೂ, ಭಾರತದ 35% ನಗರಗಳು ಇನ್ನೂ PM2.5 ಮಟ್ಟವನ್ನು ಹೊಂದಿವೆ. ಇದು ವಿಶ್ವ ಆರೋಗ್ಯ ಸಂಸ್ಥೆ (World Health Organization -WHO) ಮಾರ್ಗಸೂಚಿಗಳಿಗಿಂತ ಹತ್ತು ಪಟ್ಟು ಹೆಚ್ಚಾಗಿದೆ.
ಇದನ್ನೂ ಓದಿ : ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಮಸೂದೆ ಅಂಗೀಕಾರ : ಸಾಮಾನ್ಯ ಜನರಿಗೆ ಹೇಗೆ ಅನುಕೂಲ?
ಭಾರತದಲ್ಲಿ ವಾಯು ಮಾಲಿನ್ಯದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು:
ಭಾರತದಲ್ಲಿ ವಾಯು ಮಾಲಿನ್ಯವು ದೀರ್ಘಾವಧಿಯ PM2.5 ಗೆ ಒಡ್ಡಿಕೊಳ್ಳುವುದರೊಂದಿಗೆ ವರ್ಷಕ್ಕೆ ಅಂದಾಜು 1.5 ದಶಲಕ್ಷ ಜನರ ಸಾವುಗಳಿಗೆ ಸಂಬಂಧಿಸಿದೆ ಎಂದು ವರದಿಯು ಭಾರತದಲ್ಲಿ ವಾಯು ಮಾಲಿನ್ಯದ ತೀವ್ರ ಆರೋಗ್ಯದ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿನ ವಾಯು ಮಾಲಿನ್ಯ ಬಿಕ್ಕಟ್ಟು ಜೀವಿತಾವಧಿಯನ್ನು ಸರಾಸರಿ 5.2 ವರ್ಷಗಳಷ್ಟು ಕಡಿಮೆ ಮಾಡುತ್ತದೆ. ವಾಯು ಮಾಲಿನ್ಯವು ಪ್ರತಿ ವರ್ಷ ವಿಶ್ವಾದ್ಯಂತ ಏಳು ದಶಲಕ್ಷ ಜನರ ಸಾವುಗಳಿಗೆ ಕಾರಣವಾಗುತ್ತದೆ ಎಂದು WHO ಅಂದಾಜಿಸಿದೆ.
ಮಾಲಿನ್ಯದ ಕಾರಣಗಳು: ಒಣಹುಲ್ಲನ್ನು ಸುಡುವುದು, ಕೈಗಾರಿಕಾ ಹೊರಸೂಸುವಿಕೆ ಮತ್ತು ಸಾರಿಗೆ ಭಾರತದ ವಾಯು ಮಾಲಿನ್ಯಕ್ಕೆ ಪ್ರಮುಖ ಕೊಡುಗೆ ನೀಡುತ್ತದೆ. ಗರಿಷ್ಠ ಅವಧಿಯಲ್ಲಿ ಬೆಳೆಯ ನಂತರ ಒಣಹುಲ್ಲನ್ನು ಸುಡುವುದು ಶೇ.60ರಷ್ಟು ಮಾಲಿನ್ಯಕ್ಕೆ ಕಾರಣವಾಗಬಹುದು.
ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳು:
ಒಂದು ಘನಮೀಟರ್ ನಷ್ಟು ಗಾಳಿಯಲ್ಲಿ 2.5 ಮೈಕ್ತಾನ್ ಗಾತ್ರದ 5 ಮೈಕ್ರೋ ಗ್ರಾಮ್ ನಷ್ಟು ಮಾಲಿನ್ಯಕಾರಕ ಕಣಗಳು ಇದ್ದರೆ, ಅದು ಸುರಕ್ಷಿತ ಮಟ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದೆ.
ಮೇಲ್ವಿಚಾರಣೆ: IQAir ನ ವರದಿಯು 138 ದೇಶಗಳಲ್ಲಿ 40,000 ಕ್ಕೂ ಹೆಚ್ಚು ವಾಯು ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರಗಳಿಂದ ಪಡೆದ ದತ್ತಾಂಶವನ್ನು ವಿಶ್ಲೇಷಿಸಿ ಈ ವರದಿ ಮಾಡಿದೆ.
ತಜ್ಞರ ಶಿಫಾರಸುಗಳು:
ಜೀವರಾಶಿ ದಹನವನ್ನು ಕಡಿಮೆ ಮಾಡಲು LPG ಸಬ್ಸಿಡಿಗಳನ್ನು ವಿಸ್ತರಿಸುವುದು, ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುವುದು ಮತ್ತು ಹೊರಸೂಸುವಿಕೆ ಕಾನೂನುಗಳನ್ನು ಜಾರಿಗೊಳಿಸುವುದು ಸೇರಿದಂತೆ ವಾಯು ಮಾಲಿನ್ಯ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ತಜ್ಞರು ಶಿಫಾರಸು ಮಾಡುತ್ತಾರೆ. (ಚಿತ್ರ & ಮಾಹಿತಿ ಕೃಪೆ : ಡಬ್ಲ್ಯುಎಚ್ ಒ & ಐಕ್ಯೂಏರ್)
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.