ಬೆಂಗಳೂರು, ಮಾ.10 www.bengaluruwire.com : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ವತಿಯಿಂದ ಒಂದು ದಿನದ ಇಶಾ ಫೌಂಡೇಶನ್ ಟೂರ್ ಪ್ಯಾಕೇಜ್ (ISHA Foundation Tour Package) ಪ್ರಾರಂಭಿಸಿ ಒಂದು ವರ್ಷವಾಗಿದೆ. ಈ ಒಂದು ವರ್ಷ ಯಶಸ್ವಿಯಾಗಿ ಕಾರ್ಯಾಚರಣೆಯಲ್ಲಿ 50 ಸಾವಿರಕ್ಕೂ ಅಧಿಕ ಪ್ರಯಾಣಿಕರು ಇದರ ಲಾಭ ಪಡೆದುಕೊಂಡಿದ್ದಾರೆ.
ಕೇವಲ ಪ್ರಯಾಣಿಕರಷ್ಟೇ ಅಲ್ಲ. ಬಿಎಂಟಿಸಿಗೂ ಈ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಆದಾಯ ಹರಿದುಬಂದಿದೆ.
ಇಶಾ ಟೂರ್ ಪ್ಯಾಕೇಜ್ ಹೆಸರಿನಲ್ಲಿ ಬಿಎಂಟಿಸಿಯು ಕಳೆದ ಒಂದು ವರ್ಷದ ಹಿಂದೆ ಅಂದರೆ 2024ರ ಮಾರ್ಚ್ 08 ರಂದು ಪ್ಯಾಕೇಜ್ ಆರಂಭಿಸಿದೆ. ಅಲ್ಲಿಂದ ಈವರೆಗಿನ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 50000 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಇದರಿಂದ ನಿಗಮಕ್ಕೆ ಒಟ್ಟು 2.55 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಬಿಎಂಟಿಸಿ ಸಂಸ್ಥೆಯ ಕೇಂದ್ರೀಯ ವಲಯದ ಡಿಪೋ ಸಂಖ್ಯೆ 7ರ ವತಿಯಿಂದ ಪ್ರಾರಂಭಿಸಲಾದ ಬೆಂಗಳೂರು-ಇಶಾ ಫೌಂಡೇಶನ್ ವಿಶೇಷ ಪ್ಯಾಕೇಜ್ ಟೂರು ಒಂದು ವರ್ಷ ಪೂರ್ಣಗೊಳಿಸಿದೆ. ಈ ಸೇವೆಗೆ ಸಾರ್ವಜನಿಕರಿಂದ ಅಪಾರ ಪ್ರತಿಕ್ರಿಯೆ ಲಭಿಸಿದ್ದು, ಈ ಅವಧಿಯಲ್ಲಿ 1271 ಬಸ್ ಕಾರ್ಯಾಚರಣೆ ನಡೆಸಿ 2.13 ಲಕ್ಷ ಕಿ.ಮೀ ಸಂಚಾರ ಕೈಗೊಂಡು 50,128 ಮಂದಿ ಪ್ರಯಾಣಿಕರನ್ನು ಕೊಂಡೊಯ್ದಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ಹೇಳಿದೆ.

ಇಶಾ ಪ್ರವಾಸ ಪ್ಯಾಕೇಜ್ ಎಲ್ಲಿಂದ ಪ್ರಾರಂಭ?:
ಬಿಎಂಟಿಸಿ ಇಶಾ ಪ್ಯಾಕೇಜ್ ಪ್ರವಾಸವು ಬೆಂಗಳೂರಿನಿಂದ ಚಿಕ್ಕಬಳ್ಳಾಪುರದಲ್ಲಿರುವ ಇಶಾ ಫೌಂಡೇಶನ್‌ಗೆ ಒಂದು ದಿನದ ಸುತ್ತಿನ ಪ್ರವಾಸವಾಗಿದೆ. ಈ ಪ್ರವಾಸವು ಇತರ ದೇವಾಲಯಗಳು ಮತ್ತು ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿದೆ. ಸಾರ್ವತ್ರಿಕ ರಜಾ ದಿನ ಹಾಗೂ ವಾರಾಂತ್ಯಗಳಂದು ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 12ಗಂಟೆಯಿಂದ ಹವಾನಿಯಂತ್ರಿತ ವೋಲ್ವೋ ಬಸ್‌ನಲ್ಲಿ ಪ್ರವಾಸ ಪ್ರಾರಂಭವಾಗುತ್ತದೆ. ಪುನಃ ಪ್ರವಾಸ ಮುಗಿಸಿ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರವಾಸವು ರಾತ್ರಿ 9.30 ಕ್ಕೆ ಕೊನೆಗೊಳ್ಳುತ್ತದೆ. ಜಿಎಸ್‌ಟಿ ಸೇರಿದಂತೆ ದರವು ಪ್ರತಿ ವ್ಯಕ್ತಿಗೆ 550 ರೂ. ಆಗಿರುತ್ತದೆ. ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಈಶಾ ಫೌಂಡೇಶನ್ ಟೂರ್ ಪ್ಯಾಕೇಜ್ ಏನೇನಿದೆ?:
ಮೊದಲಿಗೆ ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ದೇವಸ್ಥಾನ, ಸರ್ ಎಂ. ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಮತ್ತು ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ನಂತರ ಇಶಾ ಫೌಂಡೇಶನ್‌ಗೆ ಭೇಟಿಯನ್ನು ಒಳಗೊಂಡಿದೆ.
ಏನು ನೋಡಬೇಕು ?:
ನಂದಿ ಬೆಟ್ಟಗಳ ರಮಣೀಯ ನೋಟ, ಆದಿಯೋಗಿಯ ಮುಂದೆ ಯೋಗೇಶ್ವರ ಲಿಂಗ, ಆದಿಯೋಗಿ ಪ್ರತಿಮೆಯ ಬೆಳಕು ಮತ್ತು ಧ್ವನಿ ಪ್ರದರ್ಶನವು ನಿಮ್ಮನ್ನು ಆಕರ್ಷಿಸಲಿದೆ.
ಹೆಚ್ಚಿನ ಮಾಹಿತಿಗೆ : https://awatar4.ksrtc.in/ ವೆಬ್ ಸೈಟಿಗೆ ಭೇಟಿ ನೀಡಬಹುದು.