ಬೆಂಗಳೂರು, ಮಾ.09 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ವಿಶ್ವ ಪ್ರಸಿದ್ಧ ಐತಿಹಾಸಿಕ ಕರಗ (Bengaluru Karaga 2025)ಮಹೋತ್ಸವ ಏ.4ರಿಂದ ಏ.14ರವರೆಗೆ ನಡೆಯಲಿದೆ. ಬಿಬಿಎಂಪಿ ಈ ಭಾಗದಲ್ಲಿ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯಿಂದ ಕರಗ ಶಕ್ತ್ಯೋತ್ಸವ ಕಾರ್ಯಕ್ರಮಕ್ಕೆ ತೊಡಕಾಗುತ್ತದೆ ಎಂಬ ಆತಂಕ ಎದುರಾಗಿದೆ.
ಕಳೆದ ನವೆಂಬರ್ ನಿಂದ ಎಸ್ ಪಿ ರಸ್ತೆ, ಧರ್ಮರಾಯಸ್ವಾಮಿ ದೇವಸ್ಥಾನ(Dharmaraya swamy Temple)ದ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್, ಒಳಚರಂಡಿ ಪೈಪ್, ವಿದ್ಯುತ್ ಕೇಬಲ್ ಸೇರಿದಂತೆ ವಿವಿಧ ಕೊಳವೆಗಳನ್ನು ಸ್ಥಳಾಂತರಿಸುವ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ನಗರದ ಕೇಂದ್ರ ವಾಣಿಜ್ಯ ಸ್ಥಳವಾದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಈ ಭಾಗದಲ್ಲಿ ರಸ್ತೆ ಅಗೆತದಿಂದ ಧೂಳು, ಮೋರಿ ವಾಸನೆಯಿಂದ ಇಲ್ಲಿನ ವ್ಯಾಪಾರಸ್ಥರು, ನಾಗರೀಕರು ಹೈರಾಣಾಗಿದ್ದಾರೆ.
ಯುಟಿಲಿಟಿ ಪೈಪ್ ಸ್ಥಳಾಂತರದ ನಂತರ ವೈಟ್ ಟಾಪಿಂಗ್ ಕಾಮಗಾರಿ ನಡೆಯಬೇಕಾಗಿರುವ ಕಾರಣ ಕರಗ ಶಕ್ತ್ಯೋತ್ಸವ ರಥ ಹಾಗೂ ಕರಗದ ಮೆರವಣಿಗೆ ನಢಯುವ ಮಾರ್ಗಕ್ಕೆ ಅಡ್ಡಿಯಾಗುವ ಬಗ್ಗೆ ಧರ್ಮರಾಯ ಸ್ವಾಮಿ ದೇವಸ್ಥಾನ ಮಂಡಳಿ, ಪಾಲಿಕೆ ಕಾರ್ಯವೈಖರಿ ಬಗ್ಗೆ ಬೇಸರ ಹೊರಹಾಕಿದೆ.
“ಬೆಂಗಳೂರಿನ ಪುರಾಣ ಪ್ರಸಿದ್ಧ ಐತಿಹಾಸಿಕ ಕರಗ ಮಹೋತ್ಸವಕ್ಕೆ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿಯಿಂದ ತೊಂದರೆಯಾಗದಂತೆ ಕ್ರಮವಹಿಸಲು ಈ ಭಾಗದ ಶಾಸಕ ಉದಯ್ ಗರುಡಾಚಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಕಳೆದ ಫೆಬ್ರವರಿಯಲ್ಲಿ ಶಾಸಕರು ಇದೇ ಮಾರ್ಚ್ ತಿಂಗಳ ಒಳಗಾಗಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣವಾಗಲಿದೆ ಎಂದಿದ್ದರು. ಆದರೆ ವಾಸ್ತವದಲ್ಲಿ ಕಾಮಗಾರಿ ಕುಂಟುತ್ತಾ ಸಾಗಿದೆ” ಎಂದು ಧರ್ಮರಾಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸತೀಶ್ ಬೆಂಗಳೂರು ವೈರ್ ಜೊತೆ ಮಾತನಾಡುತ್ತಾ, ತಮ್ಮ ಅಸಮಾಧಾನ ಹೊರಹಾಕಿದರು.
“ನವೆಂಬರ್ ನಲ್ಲಿ ಕಾಮಗಾರಿ ಆರಂಭವಾದಾಗ ಎರಡು ತಿಂಗಳಲ್ಲಿ ಕೆಲಸ ಮುಗಿಸುವುದಾಗಿ ಬಿಬಿಎಂಪಿ ತಿಳಿಸಿತ್ತು. ಕೊಟ್ಟ ಗಡುವಿನ ಒಳಗೆ ಕಾಮಗಾರಿ ಮುಗಿಯದಿದ್ದರೆ ಕರಗ ಶಕ್ತ್ಯೋತ್ಸವ ಕಾರ್ಯಕ್ರಮಕ್ಕೆ ಸಮಸ್ಯೆ ಆಗಲಿದೆ. ಹಿಂದೆ ಎಂದೂ ಹೀಗೆ ಆಗಿರಲಿಲ್ಲ. ಆ ರೀತಿ ಆಗದಂತೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಈ ಬಾರಿ ಕರಗ ಮಹೋತ್ಸವ ಸಂದರ್ಭದಲ್ಲಿ ನಾಲ್ಕು ದಿನ ರಜೆಯೂ ಬಂದಿರುವುದರಿಂದ ಹೆಚ್ಚಿನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಈಗಿನಿಂದಲೇ ಭರದಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.
ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಈ ಬಾರಿಯೂ ಕರಗದ ಪೂಜಾರಿ ಎ.ಜ್ಞಾನೇಂದ್ರ (A Jnanendra) ಕರಗ ಹೊರಲಿದ್ದಾರೆ. ಸತತ 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿರುವ ಎ.ಜ್ಞಾನೇಂದ್ರ, ಈ ಬಾರಿ 15ನೇ ಬಾರಿಗೆ ಕರಗ ಹೊರಲಿದ್ದಾರೆ. ಈ ಸಂಬಂಧ ಕರಗದ ಕಾರ್ಯಕ್ರಮದ ಪೋಸ್ಟರ್ ಅನ್ನು ದೇವಸ್ಥಾನ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ.
ಕಳೆದ ಬಾರಿಯ ಕರಗ ಮಹೋತ್ಸವದಲ್ಲಿ 14 ರಿಂದ 17 ಲಕ್ಷ ಜನ ಭಾಗಿಯಾಗಿದ್ದರು. ಈ ಬಾರಿಯ ಕರಗದಲ್ಲಿ 20 ಲಕ್ಷ ಜನ ಭಾಗಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಏ.4ರಂದು ರಥೋತ್ಸವ ಹಾಗೂ ಧ್ವಜಾರೋಹಣ ನಡೆಯಲಿದ್ದು, ಏ.5ರಿಂದ ಏ.8ರ ತನಕ ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಏ.9ರಂದು ಆರತಿ ದೀಪಗಳು, ಏ.10ರ ಗುರುವಾರ ಹಸಿಕರಗ, ಏ.11ರಂದು ಪೊಂಗಲು ಸೇವೆ, ಏ.12ರ ಶನಿವಾರದಂದು ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ರಥೋತ್ಸವ, ಏ.13ರಂದು ಪುರಾಣ ಪ್ರವಚನ ಮತ್ತು ದೇವಸ್ಥಾನದಲ್ಲಿ ಗಾವು ಶಾಂತಿ ಮತ್ತು ಏ.14ರ ಸೋಮವಾರ ವಸಂತೋತ್ಸವ ಧ್ವಜಾವರೋಹಣ ನೆರವೇರಲಿದೆ.