ಆನೇಕಲ್, ಮಾ.09 www.bengaluruwire.com : ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta Biological Park)ದ ಎರಡು ಹುಲಿಗಳು ಕಳೆದ ತಿಂಗಳು ಎರಡು ದಿನಗಳ ಅಂತರದಲ್ಲಿ ಆರು ಮರಿಗಳಿಗೆ ಜನ್ಮ ನೀಡಿವೆ. ಜೈವಿಕ ಉದ್ಯಾನವನಕ್ಕೆ ಒಟ್ಟು ಆರು ಮರಿಗಳು ಸೇರ್ಪಡೆಯಾಗಿದ್ದು, ಇದರಿಂದ ಪಾರ್ಕಿನಲ್ಲಿ ಈಗ 19 ಹುಲಿಗಳಾದಂತಾಗಿದೆ.
ಆರು ವರ್ಷದ ‘ಹಿಮಾ’ ಫೆಬ್ರುವರಿ 14ರಂದು ನಾಲ್ಕು ಮರಿಗಳಿಗೆ ಹಾಗೂ ಎಂಟು ವರ್ಷದ ‘ಅರುಣ್ಯ’ ಎಂಬ ಮತ್ತೊಂದು ಹುಲಿ ಫೆ.16ರಂದು ಇದೇ ಪ್ರಥಮ ಬಾರಿಗೆ ಎರಡು ಮರಿಗಳಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ. ಹಿಮಾ ಜೂನ್ 2024 ರಲ್ಲಿ ತನ್ನ ಮೊದಲ ಮರಿಗಳಿಗೆ ಜನ್ಮ ನೀಡಿತ್ತು. ಇದೀಗ ಎರಡನೇ ಬಾರಿಯದ್ದಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಹೇಳಿದ್ದಾರೆ.


ಅರುಣ್ಯ ಹೆಣ್ಣು ಹುಲಿಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ತಮಿಳುನಾಡಿನ ಚೆನ್ನೈನ ಅರಿಗ್ನಾರ್ ಅನ್ನಾ ಜೂಲಾಜಿಕಲ್ ಪಾರ್ಕ್ ನಿಂದ ತಂದಿರುವ ಬಿಳಿ ಹುಲಿ “ವೀರ್” ಗೆ ಜೊತೆ ಮಾಡಲಾಗಿತ್ತು. ಅರುಣ್ಯ ತನ್ನ ಎರಡು ಮರಿಗಳಿಗೆ ಹಾಲುಣಿಸುತ್ತಿದೆ. ಆದರೆ ಹಿಮಾ ಹುಲಿ ತನ್ನ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಂತರ ಹಾಲುಣಿಸಿ ಆನಂತರ ಹಾಲುಣಿಸದೆ ದೂರ ಉಳಿದ ಕಾರಣ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಆ ನಾಲ್ಕು ಮರಿಗಳನ್ನು ಪಾರ್ಕಿಗೆ ಸೇರಿದ ಆಸ್ಪತ್ರೆಯಲ್ಲಿ ಆರೈಕೆ ಮಾಡುತ್ತಾ ಬಾಟಲಿಯಲ್ಲಿ ಮೇಕೆಯ ಹಾಲನ್ನು ಹಾಕಿ ಕುಡಿಸುತ್ತಿದ್ದಾರೆ.
ಚಿರತೆ – ಕರಡಿ ಸಾವು :
ಬನ್ನೇರುಘಟ್ಟ ಉದ್ಯಾನದ ಶ್ಯಾಡೊ ಎಂಬ 16 ವರ್ಷದ ಗಂಡು ಚಿರತೆ ಮಾರ್ಚ್ 4ರಂದು ಮೃತಪಟ್ಟಿದೆ. 2011ರಲ್ಲಿ ಬಂಡಿಪುರ ಅರಣ್ಯದಲ್ಲಿ ಈ ಚಿರತೆಯನ್ನು ಸಂರಕ್ಷಿಸಿ ಆರೈಕೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ ಪುನರ್ ವಸತಿ ಕೇಂದ್ರಕ್ಕೆ ಕಳಿಸಲಾಗಿತ್ತು. ಈ ಚಿರತೆ ಬಳಿಕ ಇದೀಗ ಕರಡಿ ಕೂಡ ಸಾವನ್ನಪ್ಪಿದೆ.
ಕಳೆದ ತಿಂಗಳು 28ನೇ ತಾರೀಖು ತುಮಕೂರಿನ ಮೈದಾಳು ಬಳಿ ಉರುಳಿಗೆ ಸಿಲುಕಿದ್ದ ಕರಡಿಯನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಚಿಕಿತ್ಸೆಗಾಗಿ ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಈ ಕರಡಿ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹೃದಯ ಮಯೋಕಾರ್ಡಿಯಲ್ ಇನ್ಫ್ರಾಕ್ಷನ್ ಮತ್ತು ಯಕೃತ್ತಿನ ಸೆಪ್ಟಿಸೆಮಿಯಾ (myocardial infarction of heart and liver septicemia) ಆಗಿರುವುದು ತಿಳಿದುಬಂದಿದೆ ಎಂದು ಉದ್ಯಾನವನದ ವೈದ್ಯರು ತಿಳಿಸಿದ್ದಾರೆ.