ಬೆಂಗಳೂರು, ಮಾ.08 www.bengaluruwire.com : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 59.54 ಕೋಟಿ ರೂ ಮೌಲ್ಯದ 10 ಎಕರೆ 29 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಗದೀಶ್ ಉಪಸ್ಥಿತಿಯಲ್ಲಿ ಮಾ.07ರಂದು ತೆರವುಗೊಳಿಸಲಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು, ಆನೇಕಲ್, ಪೂರ್ವ ತಾಲೂಕಿನ ವಿವಿಧ ಕಡೆಗಳಲ್ಲಿನ ಸರ್ಕಾರಿ ಗೋಮಾಳ, ರಾಜಕಾಲುವೆ, ಗುಂಡುತೋಪು ಮತ್ತು ಸ್ಮಶಾನದ ಜಾಗಗಳನ್ನು ವಶಕ್ಕೆ ಪಡೆಯಲಾಗಿದೆ.

ತೆರವುಗೊಳಿಸಿದ ಸರ್ಕಾರಿ ಸ್ವತ್ತುಗಳ ವಿವರ :
ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿಯ ಹೋಬಳಿಯ ವಡ್ಡರಪಾಳ್ಯ ಗ್ರಾಮದ ಸ.ನಂ 175 ಸರ್ಕಾರಿ ಗೋಮಾಳ ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆ ಆಗಿದ್ದು, ಅದರ ಅಂದಾಜು ಮೌಲ್ಯ 2 ಕೋಟಿ ರೂ. ಗಳಾಗಿರುತ್ತದೆ.
ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಹಾರಗದ್ದೆ ಗ್ರಾಮದ ಸ.ನಂ 145, 146 ಮತ್ತು 258 ರ ಮಧ್ಯೆ ಇರುವ ರಸ್ತೆ ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 3 ಗುಂಟೆಗಳಾಗಿದ್ದು,ಅಂದಾಜು ಮೌಲ್ಯ 30 ಲಕ್ಷ ರೂ. ಗಳಾಗಿರುತ್ತದೆ. ಸರ್ಜಾಪುರ ಹೋಬಳಿಯ ತಿಗಳಚೌಡೇನಹಳ್ಳಿ ಗ್ರಾಮದ ಸ.ನಂ 69 ಮತ್ತು 70 ರ ಮಧ್ಯ ಇರುವ ರಾಜಕಾಲುವೆ ಮತ್ತು ಸೋಂಪುರ ಗ್ರಾಮದ ಸ.ನಂ 44, 45, 46 ಹಾಗೂ 49ರ ಮಧ್ಯ ಹಾದು ಹೋಗುವ ರಾಜಕಾಲುವೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 35 ಗುಂಟೆಗಳಾಗಿದ್ದು, ಅದರ ಅಂದಾಜು ಮೌಲ್ಯ 3.50 ಕೋಟಿ ರೂ. ಗಳಾಗಿರುತ್ತದೆ.

ಅತ್ತಿಬೆಲೆ ಹೋಬಳಿಯ ಹೆಬ್ಬಗೋಡಿ ಗ್ರಾಮದ ಸ.ನಂ 159 ಮತ್ತು ರಾಮಸಾಗರ ಗ್ರಾಮದ ಸ.ನಂ 111ರ ಸರ್ಕಾರಿ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 7.14 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ 24.34 ಕೋಟಿ ರೂ. ಗಳಾಗಿರುತ್ತದೆ. ಕಸಬಾ ಹೋಬಳಿಯ ಮರಸೂರು ಅಗ್ರಹಾರ ಗ್ರಾಮದ ಸ.ನಂ 14, 15 ಹಾಗೂ 17 ಮತ್ತು ಚಿಕ್ಕನಹಳ್ಳಿ ಗ್ರಾಮದ ಸ.ನಂ 5 ರ ಕಾಲುದಾರಿ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 31 ಗುಂಟೆಗಳಾಗಿದ್ದು, ಅದರ ಅಂದಾಜು ಮೌಲ್ಯ 90 ಲಕ್ಷ ರೂ. ಗಳಾಗಿರುತ್ತದೆ.
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ದೊಡ್ಡಗುಬ್ಬಿ ಗ್ರಾಮದ ಸ.ನಂ 50ರ ಗುಂಡುತೋಪು ಮತ್ತು 38 & 61 ರಮಧ್ಯೆ ಹಾದುಹೋಗುವ ಕಾಲುವೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 07 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 3.25 ಕೋಟಿ ರೂ. ಗಳಾಗಿರುತ್ತದೆ. ಬಿದರಹಳ್ಳಿ ಹೋಬಳಿಯ ಮಂಡೂರು ಗ್ರಾಮದ ಸ.ನಂ 71ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.03 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.25 ಕೋಟಿಗಳಾಗಿರುತ್ತದೆ. ಕೆ.ಆರ್ ಪುರ ಹೋಬಳಿಯ ಥಣಿಸಂದ್ರ ಗ್ರಾಮದ ಸ.ನಂ 75ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.16 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 25.00 ಕೋಟಿಗಳಾಗಿರುತ್ತದೆ.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾದ ಜಗದೀಶ್ ಕೆ ನಾಯಕ್, ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಪ್ರಶಾಂತ್ ಗೌಡ ಪಾಟೀಲ್ ಹಾಗೂ ತಾಲ್ಲೂಕಿನ ತಹಶೀಲ್ದಾರ್ ಗಳು, ಯೋಜನಾ ನಿರ್ದೇಶಕರು ಸೇರಿದಂತೆ ಮತ್ತಿತರ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.