ಬೆಂಗಳೂರು: ಮಾ.06 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಹಕ್ಕಿಜ್ವರ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಪಾಲಿಕೆ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಎಲ್ಲಾ ವಲಯಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.

ಹಕ್ಕಿಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್5ಎನ್1 ವೈರಸ್ (H5N1 Virus)ನಿಂದ ಹರಡುವ ರೋಗವಾಗಿದ್ದು, ಇದು ಟರ್ಕಿ ಕೋಳಿ, ಗಿಣಿ ಕೋಳಿ, ಬಾತು ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಖಾಯಿಲೆ (Infectious disease)ಯಾಗಿದೆ. ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡಲಿದ್ದು, ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್ ಗಳಲ್ಲಿಯೂ ಹಕ್ಕಿಜ್ವರ ನಿಯಂತ್ರಣ (Bird Flu Control)ದ ಅರಿವು ಮೂಡಿಸುವ ಹಾಗೂ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಜರುಗಿಸಲು ಸೂಚಿಸಿದರು.
ಹಕ್ಕಿಜ್ವರ ನಿಯಂತ್ರಣದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು :
ಹಕ್ಕಿಜ್ವರ ಪೀಡಿತ ಪ್ರದೇಶ (Bird flu-affected area)ಗಳಲ್ಲಿ ನಾಗರಿಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಹಕ್ಕಿಜ್ವರದ ತಡೆಯಬಹುದಾಗಿರುತ್ತದೆ. ಶಂಕಿತ ಹಕ್ಕಿಜ್ವರ ಪೀಡಿತ ಹಕ್ಕಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸುವುದು ಹಾಗೂ ಫಾರಂಗಳಿಗೆ ಬೇಟಿ ನೀಡಬಾರದು. ಸೊಂಕಿತ ಪ್ರದೇಶಗಳಿಗೆ ಭೇಟಿ ನೀಡಿ ಯಾವುದೇ ವಸ್ತುಗಳನ್ನು ಮುಟ್ಟಿದಲ್ಲಿ ಸಾಬೂನಿನಿಂದ ಕೈಕಾಲು ಮುಖ ತೊಳೆದು ಬಟ್ಟೆ ಬದಲಿಸುವುದು ಮತ್ತು ಮುಂದಿನ 04 ದಿನದವರೆಗೂ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಬೇಕು. ಜ್ವರ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಲು ಅರಿವು ಮೂಡಿಸಬೇಕು. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70°C ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವೇ ಸೇವಿಸಬೇಕು, ಸೋಂಕಿತ ಹಸಿ ಮೊಟ್ಟೆಯನ್ನು ಸೇವಿಸದಂತೆ ಜಾಗೃತಿ ಮೂಡಿಸಲು ಸೂಚಿಸಿದರು.
ಹಕ್ಕಿಜ್ವರ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷಾ ಕಾರ್ಯ ನಡೆಸಿ:
ಪಾಲಿಕೆಯ ಪಶುಸಂಗೋಪನಾ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ತಂಡಗಳನ್ನು ರಚಿಸಿಕೊಂಡು ಹಕ್ಕಿಜ್ವರ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಸೈಯದ್ ಸಿರಾಜುದ್ದೀನ್ ಮದನಿ, ಪಶುಸಂಗೋಪನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ.ಚಂದ್ರಯ್ಯ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.