ಬೆಂಗಳೂರು, ಮಾ.06 www.bengaluruwire.com : ಮಹತ್ವದ ಬೆಳವಣಿಗೆಯೊಂದರಲ್ಲಿ ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು, ಬೆಂಗಳೂರಿನ ಜಿಮ್ ಮತ್ತು ಫಿಟ್ಸ್ನ್ ಕೇಂದ್ರದ ಮಾಲೀಕರೊಬ್ಬರು ಗ್ರಾಹಕರಿಂದ 30 ಕೋಟಿ ರೂ.ಗೂ ಮಿಗಿಲಾದ ಶುಲ್ಕ ಮತ್ತು ಅದರ ಮೇಲೆ ಜಿ.ಎನ್.ಟಿ ತೆರಿಗೆಯನ್ನು ಸಂಗ್ರಹಿಸಿದ್ದರೂ ಅದನ್ನು ಸರ್ಕಾರಕ್ಕೆ ಪಾವತಿಸದ ಪ್ರಕರಣವೊಂದರ ಜಾಡು ಹಿಡಿದು ಜಿಮ್ ಮಾಲೀಕರನ್ನು ಬಂಧಿಸಿದೆ.
ಜಿಮ್ ಮಾಲೀಕರು ನಗರದಲ್ಲಿ ಹಲವು ಶಾಖೆಗಳನ್ನು ಹೊಂದಿದ್ದು, ಏಕಕಾಲದಲ್ಲಿ ಎಲ್ಲಾ ಜಿಮ್ ಶಾಖೆಗಳಲ್ಲಿ ತಪಾಸಣೆ ನಡೆಸಿದಾಗ, ಗ್ರಾಹಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಿದ್ದು, ಆ ವಹಿವಾಟನ್ನು ಸರ್ಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ಘೋಷಿಸಿಕೊಳ್ಳದೇ ತೆರಿಗೆ ವಂಚನೆಯನ್ನು ಮಾಡಿರುವುದು ವಿಚಾರಣೆಯಿಂದ ಕಂಡುಬಂದಿರುತ್ತದೆ. ಗ್ರಾಹಕರನ್ನು ಆನ್ ಲೈನ್ ಪಾವತಿಗಳ ಬದಲಾಗಿ ನಗದು ನೀಡುವಂತೆ ಒತ್ತಾಯಪಡಿಸುತ್ತಿದ್ದ ಮಾಲೀಕರು ಸದರಿ ವಹಿವಾಟನ್ನು ಸರ್ಕಾರಕ್ಕೆ ಘೋಷಿಸಿಕೊಳ್ಳದೇ ತೆರಿಗೆ ತಪ್ಪಿಸುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿರುತ್ತದೆ ಎಂದು ಕರ್ನಾಟಕ ವಾಣಿಜ್ಯ ತೆರಿಗೆಗಳ ಆಯುಕ್ತ ವಿಪುಲ್ ಬನ್ಸಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಪಾನಾಣೆಯ ವೇಳೆ ಜಾರಿ ವಿಭಾಗದ ಅಧಿಕಾರಿಗಳು ಲೆಕ್ಕ ಪುಸ್ತಕಗಳು, ಎಲೆಕ್ಟ್ರಾನಿಕ್ ದಾಖಲೆಗಳು ಹಾಗೂ ತೆರಿಗೆ ವಂಚನೆಯನ್ನು ಸಾಬೀತು ಮಾಡುವ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಯುತ್ತಿದ್ದಂತೆ ವಂಚನೆಯ ವಹಿವಾಟು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಜಿ.ಎಸ್.ಟಿ ಕಾಯ್ದೆ (GST ACT)ಯು ಸ್ವಯಂ ಘೋಷಿತ ವಹಿವಾಟು ಮತ್ತು ತೆರಿಗೆ ಪಾವತಿ (Self-declared transactions and tax payments)ಯನ್ನು ಪ್ರೋತ್ಸಾಹಿಸುತ್ತದೆ ವರ್ತಕರು ಜಿ.ಎಸ್.ಟಿ ಕಾಯ್ದೆಯ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಿ ಪಾರದರ್ಶಕವಾಗಿ ವಹಿವಾಟನ್ನು ಘೋಷಿಸಿಕೊಂಡು ಗ್ರಾಹಕರಿಂದ ಸಂಗ್ರಹಿಸಿದ ತೆರಿಗೆಯನ್ನು ನಿಯಮಿತವಾಗಿ ಸರ್ಕಾರಕ್ಕೆ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೆರಿಗೆ ವಂಚನೆಯಲ್ಲಿ ಭಾಗಿಯಾದವರ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.