ಬೆಂಗಳೂರು, ಮಾ.02 www.bengaluruwire.com : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯಾಗಿ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ (KIMS- ಕಿಮ್ಸ್) ಪ್ರಾಂಶುಪಾಲ ಡಾ.ಭಗವಾನ್ ಬಿ.ಸಿ. ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಆದೇಶ ಹೊರಡಿಸಿದ್ದಾರೆ.
ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆ ಆದಾಗಿನಿಂದ ಇಲ್ಲಿಯ ತನಕ, ಸರ್ಕಾರಿ ವೈದ್ಯ ಕಾಲೇಜು ಅಥವಾ ಸರ್ಕಾರಿ ಕರ್ತವ್ಯದಲ್ಲಿರುವ ವೈದ್ಯರನ್ನೇ ಈ ಹುದ್ದೆಗೆ ನೇಮಕ ಮಾಡಲಾಗುತ್ತಿತ್ತು. ಇದೇ ಪ್ರಥಮ ಬಾರಿಗೆ ಖಾಸಗಿ ಕಾಲೇಜಿನ ವೈದ್ಯರೊಬ್ಬರನ್ನು ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ.
‘ಕುಲಪತಿ ಆಯ್ಕೆ ಸಂಬಂಧ ರಚಿಸಲಾಗಿದ್ದ ಪ್ರೊ. ಎಂ. ರಾಮಚಂದ್ರಗೌಡ ಅಧ್ಯಕ್ಷತೆಯ ಶೋಧನಾ ಸಮಿತಿಯು ಹಾಸನ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ರವಿಕುಮಾರ್ ಬಿ.ಸಿ ಹಾಗೂ ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ. ನಳಿನಿ ಜಿ.ಕೆ. ಹಾಗೂ ಡಾ.ಭಗವಾನ್ ಹೆಸರನ್ನು ಶಿಫಾರಸು ಮಾಡಿತ್ತು.
ಡಾ.ಭಗವಾನ್ ಅವರು ಮಾ.1ರಂದೇ ಈ ಹಿಂದಿನ ಕುಲಪತಿ ಡಾ.ಎಂ.ಕೆ.ರಮೇಶ್ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ. ಇವರ ಅಧಿಕಾರ ಅವಧಿಯು ಮುಂದಿನ ಮೂರು ವರ್ಷಗಳ ತನಕ ಅಥವಾ ಅವರ 65ನೇ ವಯಸ್ಸಿನ ತನಕ ಅಥವಾ ಮುಂದಿನ ಆದೇಶದ ತನಕ ಇದರಲ್ಲಿ ಯಾವುದು ಮೊದಲೋ ಅಲ್ಲಿಯ ತನಕವೆಂದು ರಾಜ್ಯಪಾಲರ ಆದೇಶದಲ್ಲಿ ತಿಳಿಸಲಾಗಿದೆ.