ಬೆಂಗಳೂರಿನ, ಫೆ.26 www.bengaluruwire.com : ಸಿಲಿಕಾನ್ ಸಿಟಿ ಹೊರವಲಯದಲ್ಲಿರುವ 5678.32 ಎಕರೆ ವಿಸ್ತೀರ್ಣದ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು “ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” (Greater Hesaraghatta Grassland Conservation Reserve) ಎಂದು ರಾಜ್ಯ ಸರ್ಕಾರ ಫೆ.24ರಂದು ಅಧಿಸೂಚನೆ ಹೊರಡಿಸಿದೆ. ಈ ಪ್ರದೇಶದಲ್ಲಿ ಯಾವುದೇ ಖಾಸಗಿ ಜಮೀನು ಅಥವಾ ಪಟ್ಟಾ ಜಮೀನು ಸೇರಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇದು ಬೆಂಗಳೂರಿನ ಪ್ರಮುಖ ನೀರಿನ ಜಲಾನಯನ ಪ್ರದೇಶವಾಗಿ ಕಾರ್ಯನಿರ್ವಹಿಸುವ ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿರುವ ವಿಶಿಷ್ಟ ಹುಲ್ಲುಗಾವಲನ್ನು ರಕ್ಷಿಸುವಲ್ಲಿ ಹಾಗೂ ಆಗಾಗ್ಗೆ ತೀವ್ರ ನೀರಿನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿದೆ.

ಹೆಸರಘಟ್ಟದ ಹುಲ್ಲುಗಾವಲುಗಳು ಯುರೋಪ್, ಮಧ್ಯ ಏಷ್ಯಾ ಮತ್ತು ಹಿಮಾಲಯದಿಂದ ವಲಸೆ ಬರುವ ಪಕ್ಷಿ ಪ್ರಭೇದಗಳಿಗೆ ಚಳಿಗಾಲದ ಸ್ಥಳಗಳಾಗಿವೆ. ಇದರಲ್ಲಿ ಹಲವಾರು ಜಾತಿಯ ಬೇಟೆಯಾಡುವ ಪಕ್ಷಿಗಳು (Raptors) ಸೇರಿವೆ. ಪಕ್ಷಿ ಪ್ರಿಯರ ಪ್ರಕಾರ, 2011 ರಲ್ಲಿ ಹೆಸರಘಟ್ಟದಲ್ಲಿ ತೀವ್ರವಾಗಿ ಅಳಿವಿನಂಚಿನಲ್ಲಿರುವ ಸ್ಥಳೀಯ ಕಾಡುಕೋಳಿ (bustard) ಜಾತಿಯ ಹಕ್ಕಿಯನ್ನು 100 ವರ್ಷಗಳ ನಂತರ ಪತ್ತೆಯಾಗಿತ್ತು.


ರಾಜ್ಯ ಸರ್ಕಾರದ ಈ ಅಧಿಸೂಚನೆಯು ಹುಲ್ಲುಗಾವಲುಗಳಿಗೆ ಆಗಾಗ್ಗೆ ಭೇಟಿ ನೀಡುವ ಪರಿಸರವಾದಿಗಳು, ವನ್ಯಜೀವಿ ಛಾಯಾಚಿತ್ರಗಾರರು ಮತ್ತು ಪಕ್ಷಿ ವೀಕ್ಷಕರಿಗೆ ಅತೀವ ಸಂತಸ ಉಂಟು ಮಾಡಿದೆ. ಬೆಂಗಳೂರು ಮೂಲದ ಉಪಕ್ರಮವಾದ ಕನ್ಸರ್ವೇಷನ್ ಇಂಡಿಯಾ (Conservation India), 2013 ರಲ್ಲಿ ಇಲ್ಲಿನ ಹುಲ್ಲುಗಾವಲುಗಳಲ್ಲಿ ಸಸಿ ನೆಡುವಿಕೆ ಕಾರ್ಯ ಕೈಗೊಳ್ಳಲು ಅಭಿಯಾನವನ್ನು ನಡೆಸಿತ್ತು.
“ರಾಜ್ಯ ಸರ್ಕಾರವು ಕೆಳಗಿನ ಪಟ್ಟಿಯಲ್ಲಿ ನಿರ್ದಿಷ್ಟಪಡಿಸಲಾದ ಪ್ರದೇಶ, ಪರಿಸ್ಥಿತಿ, ಮಿತಿಗಳು ಮತ್ತು ವ್ಯಾಪ್ತಿಯನ್ನು ಅದರ ಪರಿಸರ, ಪ್ರಾಣಿ, ಹೂವಿನ ಮತ್ತು ಭೌಗೋಳಿಕ ಪ್ರಾಮುಖ್ಯತೆಗಾಗಿ ಮತ್ತು ಅದರಲ್ಲಿರುವ ಹುಲ್ಲುಗಾವಲು ಮತ್ತು ವನ್ಯಜೀವಿಗಳನ್ನು ಅಥವಾ ಅದರ ಪರಿಸರವನ್ನು ರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಮತ್ತು ಬೆಂಗಳೂರು ನಗರಕ್ಕೆ ನೀರಿನ ಮೂಲಗಳಲ್ಲಿ ಒಂದಾದ ಹೆಸರಘಟ್ಟದ ಸುತ್ತಮುತ್ತಲಿನ ಪ್ರಮುಖ ಜಲಾನಯನ ಪ್ರದೇಶವನ್ನು ರಕ್ಷಿಸುವ ಉದ್ದೇಶಕ್ಕಾಗಿ “ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” ಎಂದು ಘೋಷಿಸುವುದು ಅಪೇಕ್ಷಣೀಯವಾಗಿದೆ ಎಂದು ಪರಿಗಣಿಸುತ್ತದೆ” ಎಂದು ಫೆಬ್ರವರಿ 24 ರ ತನ್ನಅಧಿಸೂಚನೆಯಲ್ಲಿ ಹೇಳಿದೆ.
ಅಕ್ಟೋಬರ್ 7, 2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ 18 ನೇ ಸಭೆಯಲ್ಲಿ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಬ್ಯಾತ, ಕೋಡಿಹಳ್ಳಿ, ಕಾಕೋಳು, ಮಟ್ಟುಕೋರು, ಚನ್ನಸಂದ್ರ, ಸೊನ್ನೇನಹಳ್ಳಿ, ದಾಸೇನಹಳ್ಳಿ, ಹೆಸರಘಟ್ಟ, ಐವರಕೊಂಡಪುರ, ಹೆಸರಘಟ್ಟ ಹುಲ್ಲುಗಾವಲು ಫಾರ್ಮ್ 1 ಮತ್ತು 2 ಗ್ರಾಮಗಳಲ್ಲಿನ ಸರ್ಕಾರಕ್ಕೆ ಸೇರಿದ ಭೂಮಿಯನ್ನು ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸಲು ನಿರ್ಧರಿಸಲಾಯಿತು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇಲ್ಲಿನ ಹುಲ್ಲುಗಾವಲುಗಳಲ್ಲಿ ಸುಮಾರು 133 ಪಕ್ಷಿ ಪ್ರಭೇದಗಳು ಕಂಡುಬಂದಿವೆ.
ಹೆಸರಘಟ್ಟ ಹುಲ್ಲುಗಾವಲುಗಳು ಅಂತರ್ಜಲ ಮಟ್ಟವನ್ನು ಪುನರುಜ್ಜೀವನಗೊಳಿಸುವ ಪ್ರಮುಖ ಜಲಾನಯನ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತವೆ. ಇದು ಅಂತರ್ಜಲ ಮರುಪೂರಣಕ್ಕೆ ಅನುಕೂಲವಾಗಿದೆ ಹಾಗೂ ಅಂತರ್ಜಲ ಮಟ್ಟವನ್ನು ಸುಧಾರಿಸುತ್ತದೆ. ಅಲ್ಲದೆ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಕಾವತಿ ನದಿ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದ ದೊಡ್ಡ ಜಲಾನಯನ ಪ್ರದೇಶವಾಗಿದ್ದು, ಹತ್ತಿರದ ಹೆಸರಘಟ್ಟ ಸರೋವರ ಮತ್ತು ಜಲಾಶಯಕ್ಕೆ ಪ್ರಮುಖ ಜಲಾನಯನ ಪ್ರದೇಶವಾಗಿಯೂ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನ ನೀರಿನ ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಅನೇಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಅಧೀಸೂಚನೆಯಲ್ಲಿ ತಿಳಿಸಲಾಗಿದೆ.
ಸರೋವರದ ಬಳಿಯಿರುವ ಹುಲ್ಲುಗಾವಲು ಮತ್ತು ಪೊದೆಗಳು, ನೀರುನಾಯಿಗಳು, 13 ಜಾತಿಯ ಉಭಯಚರಗಳು, 111 ಜಾತಿಯ ಚಿಟ್ಟೆಗಳು, ಇದರಲ್ಲಿ ಲಿಲಾಕ್ ಸಿಲ್ವರ್‌ಲೈನ್ (ಬೆಂಗಳೂರಿನಲ್ಲಿ ಒಂದು ಶತಮಾನದ ನಂತರ ಮತ್ತು ಹೆಸರಘಟ್ಟ ಹುಲ್ಲುಗಾವಲುಗಳಲ್ಲಿ ಮಾತ್ರ ಕಾಣಿಸಿಕೊಂಡಿದೆ) ಮತ್ತು 395 ಇತರ ಕೀಟ ಪ್ರಭೇದಗಳಿಗೆ ಈ ದೊಡ್ಡ ಹುಲ್ಲುಗಾವಲು ಪ್ರದೇಶ ಆಶ್ರಯ ನೀಡಿದೆ.
2013ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA- ಬಿಡಿಎ) ಇಲ್ಲಿ ಸುಮಾರು ಒಂದು ಲಕ್ಷ ಸಸಿಗಳನ್ನು ನೆಟ್ಟಿತು. ಬುಲ್ಡೋಜರ್‌ಗಳನ್ನು ಬಳಸಿ, ತೋಟಗಾರಿಕೆ ಕೆಲಸಕ್ಕಾಗಿ ಹಲವಾರು ಸಾವಿರ ಹೊಂಡಗಳನ್ನು ಅಗೆದಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಅಂತಿಮವಾಗಿ ನಿಲ್ಲಿಸಲಾಯಿತು.
“ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ರ ಸೆಕ್ಷನ್ 36(A) ನಿಂದ ನೀಡಲಾದ ಅಧಿಕಾರವನ್ನು ಚಲಾಯಿಸುತ್ತಾ, ಕರ್ನಾಟಕ ಸರ್ಕಾರವು ಈ ಮೂಲಕ ವೇಳಾಪಟ್ಟಿ I ರಲ್ಲಿ ನಿರ್ದಿಷ್ಟಪಡಿಸಿದ ಮತ್ತು ಅದರ ಗಡಿ ವಿವರಣೆಯನ್ನು ಕೆಳಗೆ ಉಲ್ಲೇಖಿಸಿರುವ ಭೂಮಿಯನ್ನು ಸಂರಕ್ಷಣಾ ಮೀಸಲು ಪ್ರದೇಶದೊಳಗೆ ಸೇರಿಸಲಾಗುವುದು ಮತ್ತು ಈ ಅಧಿಸೂಚನೆಯ ಪ್ರಕಟಣೆಯ ದಿನಾಂಕದಿಂದ ಸದರಿ ಪ್ರದೇಶವನ್ನು ಸಂರಕ್ಷಣಾ ಮೀಸಲು ಪ್ರದೇಶವೆಂದು ಮತ್ತು “ಗ್ರೇಟರ್ ಹೆಸರಘಟ್ಟ ಸಂರಕ್ಷಣಾ ಮೀಸಲು ಪ್ರದೇಶ” ಎಂದು ಕರೆಯಲಾಗುತ್ತದೆ ಎಂದು ಘೋಷಿಸುತ್ತದೆ” ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಹುಲ್ಲುಗಾವಲು ಪ್ರದೇಶಗಳಲ್ಲಿ ಮರಗಳು ವಿರಳವಾಗಿರುವುದರಿಂದ ಹುಲ್ಲುಗಾವಲುಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಆದರೆ, ಹುಲ್ಲುಗಾವಲುಗಳು ಮತ್ತು ಸವನ್ನಾಗಳು ವಿಶ್ವದ ಕೆಲವು ಶ್ರೀಮಂತ ಮತ್ತು ಅತ್ಯಂತ ವೈವಿಧ್ಯಮಯ ಪರಿಸರ ವ್ಯವಸ್ಥೆಗಳನ್ನು ಪ್ರತಿನಿಧಿಸುತ್ತವೆ. “ಹುಲ್ಲುಗಾವಲುಗಳು ಮತ್ತು ಸವನ್ನಾಗಳು ವಿಶ್ವದ ಜನಸಂಖ್ಯೆಯ ಕಾಲು ಭಾಗಕ್ಕೆ ನೆಲೆಯಾಗಿದೆ ಮತ್ತು ಸಾವಿರಾರು ಹೆಚ್ಚು ವಿಶೇಷವಾದ ಸಸ್ಯಗಳು ಹಾಗೂ ಪ್ರಾಣಿಗಳಿಗೆ ಆವಾಸಸ್ಥಾನವನ್ನು ಒದಗಿಸುತ್ತವೆ. ಅನೇಕ ಪ್ರಭೇದದ ಜೀವಿಗಳು ಅಪಾರ ಸಂಖ್ಯೆಯಲ್ಲಿ ಒಟ್ಟುಗೂಡುತ್ತವೆ. ವನ್ಯಪ್ರಾಣಿ, ಜಾನುವಾರುಗಳು ವೈವಿಧ್ಯಮಯ ಹುಲ್ಲುಗಳನ್ನು ಮೇಯುತ್ತವೆ. ಇಂತಹ ಹುಲ್ಲುಗಾವಲುಗಳ ಭೌಗೋಳಿಕ ಸ್ಥಿತಿಗಳು ಭೂಮಿಯ ಮೇಲೆ ಬೇರೆಲ್ಲಿಯೂ ಕಂಡುಬರುವುದಿಲ್ಲ” ಎಂದು ವರ್ಲ್ಡ್‌ವೈಡ್ ಫಂಡ್ ಫಾರ್ ನೇಚರ್ (Worldwide Fund for Nature) ಹೇಳಿದೆ.
ದುರದೃಷ್ಟವಶಾತ್, ನಮ್ಮ ಕಾನೂನುಗಳು ಕಾಡುಗಳು ಮತ್ತು ಜೌಗು ಪ್ರದೇಶಗಳಿಗಿಂತ ಭಿನ್ನವಾಗಿ ಹುಲ್ಲುಗಾವಲುಗಳನ್ನು ನಿರ್ಣಾಯಕ ಪರಿಸರ ವ್ಯವಸ್ಥೆಗಳಾಗಿ ಗುರುತಿಸುವಲ್ಲಿ ವಿಫಲವಾಗಿವೆ. ಅವುಗಳನ್ನು ಹೆಚ್ಚಾಗಿ ‘ಪಾಳುಭೂಮಿಗಳು’ ಎಂದು ತಪ್ಪಾಗಿ ವರ್ಗೀಕರಿಸಲಾಗುತ್ತದೆ. ಕೃಷಿ, ರಿಯಲ್ ಎಸ್ಟೇಟ್, ಕೈಗಾರಿಕೆ ಅಥವಾ ಮರಗಳ ತೋಟಗಳಾಗಿ ಪರಿವರ್ತಿಸಲಾಗುತ್ತದೆ. ಇದರಿಂದ ಭರಿಸಲಾಗದ ಪರಿಸರ ನಷ್ಟಕ್ಕೆ ಕಾರಣವಾಗುತ್ತದೆ. ಹುಲ್ಲುಗಾವಲುಗಳನ್ನು ಗುರುತಿಸುವ ಮತ್ತು ರಕ್ಷಿಸುವ ಯಾವುದೇ ಪ್ರಯತ್ನವು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಪರಿಸರ ಸಂರಕ್ಷಕರು, ಹೋರಾಟಗಾರರ ಅಭಿಪ್ರಾಯವಾಗಿದೆ.
“ಹೈಕೋರ್ಟ್ ಆದೇಶದ ಮೂಲಕ ಈ ಸರ್ಕಾರ ಹೆಸರಘಟ್ಟ ಹಸಿರು ಮೀಸಲು ವಲಯ ಎಂದು ಘೋಷಿಸಿದ್ದು ಸ್ವಾಗತಾರ್ಹ. ಉತ್ತರ ಬೆಂಗಳೂರಿಗೆ ಅನುಕೂಲ. 5600 ಎಕರೆಗೂ ಹೆಚ್ಚು ವಿಸ್ತೀರ್ಣದ ದೊಡ್ಡ ಹುಲ್ಲುಗಾವಲಿನ ಪ್ರದೇಶ ಮೀಸಲು ಪ್ರದೇಶವೆಂದು ಕಾನೂನು ರೀತ್ಯ ಜಾರಿಗೆ ತಂದಿರುವುದು ಪರಿಸರ ಸಮತೋಲನ ಕಾಪಾಡುವ ದೃಷ್ಟಿಯಿಂದ ಬೆಂಗಳೂರಿನ ಜನರಿಗೆ ಮಹತ್ವದ ಹೆಜ್ಜೆಯಾಗಿದೆ. ನೀರು ಸಂರಕ್ಷಣೆ, ಜೀವವೈವಿಧ್ಯತೆ, ಆಮ್ಲಜನಕ ದೊಡ್ಡ ತೆರದ ಪ್ರದೇಶ, ಸ್ಥಳೀಯ ರೈತರಿಗೆ ಜಾನುವಾರಗಳ ಮೇವಿಗೆ ಬಹಳ ಸಹಾಯಕ” ಎಂದು ಮರವೈದ್ಯ ಹಾಗೂ ಪರಿಸರ ಹೋರಾಟಗಾರ ವಿಜಯ್ ನಿಶಾಂತ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.