ಬೆಂಗಳೂರು, ಫೆ.25 www.bengaluruwire.com : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಜ್ಯೋತಿ ಯೋಜನೆ (Gruha Jyothi Scheme)ಯ ಸಹಾಯಧನ (Subsidy)ವನ್ನು ಎಸ್ಕಾಂ (Escoms)ಗಳಿಗೆ ಸರ್ಕಾರ ಮುಂಗಡವಾಗಿ ಪಾವತಿಸುತ್ತಿದ್ದು, ಗ್ರಾಹಕರಿಂದ ಹಣ ಪಡೆಯುವ ಯಾವುದೇ ಪ್ರಸ್ತಾಪ ಮುಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬೆಳಕು ಭವನದಲ್ಲಿ ಸೋಮವಾರ ಆಯೋಜಿಸಿದ್ದ ಇಲಾಖೆಯ ಸಭೆಯ ನಂತರ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. “ಗೃಹಜ್ಯೋತಿ ಹಣವನ್ನು ಸರ್ಕಾರ ಮುಂಗಡವಾಗಿ ಪಾವತಿಸದಿದ್ದರೆ ಜನರಿಂದ ಪಡೆಯಲು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC – ಕೆಇಆರ್‌ಸಿ)ಎಸ್ಕಾಂಗಳು ಮನವಿ ಮಾಡಿವೆ ಎಂಬ ವಿಚಾರ ತಪ್ಪು ಕಲ್ಪನೆಯಿಂದ ಸೃಷ್ಟಿಯಾಗಿದೆ. ಸರ್ಕಾರಕ್ಕೆ ಅಂತಹ ಯಾವುದೇ ಉದ್ದೇಶ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಗೃಹಜ್ಯೋತಿ ಯೋಜನೆ ಘೋಷಣೆ ಸಂದರ್ಭದಲ್ಲೇ, ಗೃಹ ಬಳಕೆದಾರರಿಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಸುವುದಾಗಿ ಸರ್ಕಾರ ಹೇಳಿತ್ತು. ಸಬ್ಸಿಡಿ ಮೊತ್ತವನ್ನು ಸರ್ಕಾರದಿಂದಲೇ ಪಾವತಿ ಮಾಡುವುದಾಗಿಯೂ ಹೇಳಲಾಗಿತ್ತು. ಅದರಂತೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ. ಫೆಬ್ರವರಿ 2025ರವರೆಗಿನ ಗೃಹಜ್ಯೋತಿ ಯೋಜನೆ ಸಹಾಯಧನವನ್ನು ಮುಂಗಡವಾಗಿ ಎಲ್ಲಾ ಎಸ್ಕಾಂಗಳಿಗೆ ಪಾವತಿಸಲಾಗಿದೆ,”ಎಂದು ಅವರು ವಿವರ ನೀಡಿದರು.

“ಕೆಇಆರ್ ಸಿ (ಸಹಾಯಧನ ಪಾವತಿ ವಿಧಾನ) ನಿಯಮ 2008ರಲ್ಲಿ ವಿದ್ಯುತ್ ಯೋಜನೆಗಳ ಸಹಾಯಧನವು ರಾಜ್ಯ ಸರ್ಕಾರದಿಂದ ಮುಂಗಡವಾಗಿ ಪಾವತಿಯಾಗದಿದ್ದರೆ ಗ್ರಾಹಕರಿಂದ ಪಡೆಯಲು ಎಸ್ಕಾಂಗಳಿಗೆ ಅವಕಾಶ ಕಲ್ಪಿಸುತ್ತದೆ. ಈ ಸಾಮಾನ್ಯ ನಿಯಮವನ್ನೇ ತಪ್ಪಾಗಿ ಗ್ರಹಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.
“ಗೃಹಜ್ಯೋತಿ ಯೋಜನೆ ಜಾರಿಯಾದಾಗಿನಿಂದ ಎಸ್ಕಾಂಗಳಿಗೆ ಮುಂಗಡವನ್ನು ಪಾವತಿಸಲಾಗುತ್ತಿದೆ. ಹೀಗಾಗಿ, ಗ್ರಾಹಕರಿಂದ ಯೋಜನೆ ಹಣ ಪಡೆಯುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಸಬ್ಸಿಡಿ ಮೊತ್ತವನ್ನು ಗ್ರಾಹಕರಿಂದ ಪಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಯಾವುದೇ ಗೊಂದಲವಿಲ್ಲದೆ ಮುಂದುವರಿಸಿಕೊಂಡು ಹೋಗಲು ಇಂಧನ ಇಲಾಖೆ ಬದ್ಧವಾಗಿದೆ,” ಎಂದು ಸಚಿವರು ಹೇಳಿದರು.
ಇನ್ನು ಬೆಸ್ಕಾಂ ವಿಷಯಕ್ಕೆ ಬರುವುದಾದರೆ 2023ರ ಆಗಸ್ಟ್‌ನಿಂದ 2025ರ ಫೆಬ್ರವರಿವರೆಗಿನ ಅನುದಾನ ಕುರಿತ ಮಾಹಿತಿ ನೀಡಲಾಗಿದೆ. ಸರ್ಕಾರಕ್ಕೆ ಸುಮಾರು 6,592 ಕೋಟಿ ರೂಪಾಯಿ ಹಣ ಕೇಳಿದ್ದ ಬೆಸ್ಕಾಂ, 2025ರ ಫೆಬ್ರವರಿವರೆಗೆ ಒಟ್ಟು 6,631 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಸರ್ಕಾರ ಬೆಸ್ಕಾಂಗೆ ಹೆಚ್ಚುವರಿಯಾಗಿ 39 ಕೋಟಿ ರೂಪಾಯಿ ನೀಡಿದೆ. ಗ್ರಾಹಕರಿಂದ ಹಣ ಪಡೆಯುವ ಪ್ರಶ್ನೆಯೇ ಉದ್ಭವಿಸಲ್ಲ. ಗೃಹಜ್ಯೋತಿ ಯೋಜನೆ ಮುಂದುವರಿಸಲು ಇಲಾಖೆ ಬದ್ಧ ಎಂದು ಸ್ಪಷ್ಟನೆ ನೀಡಿದ್ದಾರೆ.