ತಿರುಮಲ, ಫೆ.22 www.bengaluruwire.com : ಏಳು ಬೆಟ್ಟಗಳ ಒಡೆಯ ತಿರುಮಲದ ಶ್ರೀ ತಿಮ್ಮಪ್ಪನ ದೇವಾಲಯದ ಮೇಲೆ ಯಾವುದೇ ವಿಮಾನಗಳು ಹಾರಾಟ ನಡೆಸುವುದಿಲ್ಲ. ಇದೀಗ ಈ ಸಂಪ್ರದಾಯವನ್ನು ಉಲ್ಲಂಘಿಸಿ ತಿಮ್ಮಪ್ಪ ದೇವಾಲಯದ ಮೇಲೆ ಮತ್ತೊಮ್ಮೆ ವಿಮಾನ ಹಾರಾಟ ಮಾಡಿದೆ. ಇದು ತಿಮ್ಮಪ್ಪನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಸಾಮಾನ್ಯವಾಗಿ ಯಾವುದೇ ವಿಮಾನಗಳು ಹಾರಾಡುವುದಿಲ್ಲ. ದೇವಾಲಯದ ಮೇಲೆ ವಿಮಾನ ಹಾರಾಟವು ಆಗಮ ಶಾಸ್ತ್ರಕ್ಕೆ ವಿರುದ್ಧವಾದದ್ದು. ಆದ್ದರಿಂದ ತಲ, ತಲಾಂತರಗಳಿಂದ ತಿಮ್ಮಪ್ಪನ ದೇವಸ್ಥಾನದ ಮೇಲೆ ವಿಮಾನ ಹಾರಾಡುವುದನ್ನು ಭಕ್ತರು ಮೊದಲಿಂದಲೂ ವಿರೋಧಿಸುತ್ತಾ ಬಂದಿದ್ದಾರೆ.

ಇದೀಗ ವಿಮಾನವೊಂದು ದೇವಸ್ಥಾನ ಮೇಲೆ ಹಾರಾಟ ನಡೆಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಆಂಧ್ರಪ್ರದೇಶದ ಭಕ್ತರು ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ತಕ್ಷಣವೇ ತಿರುಮಲವನ್ನು ವಿಮಾನ ಹಾರಾಟ ನಿಷೇಧಿತ ಪ್ರದೇಶವನ್ನಾಗಿ ಎಂದು ಘೋಷಿಸುವಂತೆ ಆಗ್ರಹಿಸಿದ್ದಾರೆ.

ಸದ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ಆಂಧ್ರದ ಟಿಡಿಪಿ ಪಕ್ಷದ ರಾಮ ಮೋಹನ್ ನಾಯ್ಡು ಅವರೇ ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದಾರೆ. ಹೀಗಾಗಿ ತಿರುಮಲವನ್ನು ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆಯಿಂದ ವಿಮಾನ ಹಾರಾಟ ನಿಷೇಧಿತ ಪ್ರದೇಶ ಎಂದು ಘೋಷಿಸಲು ಸಾಕಷ್ಟು ಒತ್ತಡ ಹೇರಲಾಗುತ್ತಿದೆ.
ತಿಮ್ಮಪ್ಪನ ದೇವಾಲಯದ ಮೇಲೆ ವಿಮಾನ ಹಾರಾಟದಿಂದ ಭಕ್ತರ ಭಾವನೆಗೆ ಧಕ್ಕೆಯಾಗುತ್ತದೆ. ಇಷ್ಟು ದಿನ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ವಿಮಾನ ಹಾರಾಟಕ್ಕೆ ಅವಕಾಶ ಕೊಟ್ಟಿರಲಿಲ್ಲ. ಇದೀಗ ವಿಮಾನ ಹಾರಾಟ ನಡೆಸಿರೋದನ್ನು ತಿಮ್ಮಪ್ಪನ ಭಕ್ತರು ಟೀಕಿಸಿದ್ದಾರೆ. ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.