ಬೆಂಗಳೂರು: ಫೆ.19 www.bengaluruwire.com : ಅನ್ನಭಾಗ್ಯ ಯೋಜನೆ (Anna Bhagya Scheme)ಯ ಫಲಾನುಭವಿಗಳಿಗೆ ಸಂತಸದ ಸುದ್ದಿ. ಪಡಿತರ ವಿತರಣೆ ವ್ಯವಸ್ಥೆ ಅಡಿ ಇದೇ ಫೆಬ್ರುವರಿಯಿಂದ ಪ್ರತಿ ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿ ಲಭ್ಯವಾಗಲಿದೆ.
‘ಗ್ಯಾರಂಟಿ’ ಯೋಜನೆ (Guarantee Scheme)ಯ ಘೋಷಣೆಯಂತೆ ರಾಜ್ಯ ಸರ್ಕಾರ 2023ರ ಜುಲೈನಿಂದ ಫಲಾನುಭವಿಗಳ ಖಾತೆಗೆ 170 ರೂ. ಫಲಾನುಭವಿಗಳಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಸ್ಥಗಿತವಾಗಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ಇಂದು ವಿಧಾನಸೌಧದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ನವೆಂಬರ್, ಡಿಸೆಂಬರ್ ಬಾಕಿಯನ್ನು ಖಾತೆಗೆ ಜಮೆ ಮಾಡಲು ನಿರ್ಧರಿಸಲಾಗಿದ್ದು, ಜನವರಿಯಲ್ಲಿ ನೀಡಬೇಕಿದ್ದ ಹಣಕ್ಕೆ ಬದಲಾಗಿ ಫೆಬ್ರವರಿ ಪಡಿತರದಲ್ಲಿ 5 ಕೆ.ಜಿ. ಹೆಚ್ಚುವರಿ ಅಕ್ಕಿ ನೀಡಲು ಆಹಾರ ಇಲಾಖೆ ನಿರ್ಧರಿಸಲಾಗಿದೆ. ಅಂದರೆ ಇದೊಂದು ತಿಂಗಳು ಮಾತ್ರ ಪಡಿತರದಾರರಿಗೆ 15 ಕೆ.ಜಿ. ಅಕ್ಕಿ ಸಿಗಲಿದೆ.
ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ‘ಗ್ಯಾರಂಟಿ’ ಭರವಸೆಯಂತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ಹಂಚಿಕೆ ಮಾಡಬೇಕಿತ್ತು. ಆದರೆ, ಅಗತ್ಯ ಪ್ರಮಾಣದ ಅಕ್ಕಿ ಹೊಂದಿಸಲು ಸಾಧ್ಯವಾಗದ ಕಾರಣ ಕೇಂದ್ರ ನೀಡುತ್ತಿರುವ 5 ಕೆ.ಜಿ. ಅಕ್ಕಿಯನ್ನು ಮಾತ್ರ ಪೂರೈಸಿ, ಉಳಿದ 5 ಕೆ.ಜಿ. ಅಕ್ಕಿಯ ಬದಲು ಹಣ ನೀಡಲು ತೀರ್ಮಾನಿಸಿತ್ತು. ಪ್ರತಿ ಕೆ.ಜಿ.ಗೆ 34 ರೂ.ನಂತೆ ಲೆಕ್ಕ ಹಾಕಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಪ್ರತಿ ತಿಂಗಳು 170 ರೂ. ಜಮೆ ಮಾಡುತ್ತಾ ಬಂದಿತ್ತು.

ಪ್ರತಿ ತಿಂಗಳು 190 ಕೋಟಿ ರೂ. ಸರ್ಕಾರಕ್ಕೆ ಉಳಿತಾಯ:

ಕೇಂದ್ರ ಸರ್ಕಾರ ಕೆ.ಜಿ.ಗೆ 22.50 ರೂ. ನಂತೆ ಅಕ್ಕಿ ಸರಬರಾಜು ಮಾಡಲು ಒಪ್ಪಿಗೆ ನೀಡಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು ₹190 ಕೋಟಿ ಉಳಿತಾಯವಾಗಲಿದೆ. ಅಷ್ಟರ ಮಟ್ಟಿಗೆ ಆರ್ಥಿಕ ಸಂಪನ್ಮೂಲ ಕೊರತೆಯಿಂದ ಬಳಲುತ್ತಿರುವ ಕಾಂಗ್ರೆಸ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಒಂದೂವರೆ ವರ್ಷದ ಹಿಂದೆ ಅನ್ನಭಾಗ್ಯ ಯೋಜನೆ ಆರಂಭಿಸಿದಾಗ ಕೆಜಿ ಅಕ್ಕಿ 34 ರೂ. ಗೆ ನೀಡಲು ಸಿದ್ಧವಿದ್ದರೂ, ಅಗತ್ಯ ಅಕ್ಕಿ ದೊರೆತಿರಲಿಲ್ಲ. ಹಾಗಾಗಿ, ಅಷ್ಟೇ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಈಗ 22.50 ರೂ. ದರದಲ್ಲಿ ಅಕ್ಕಿ ಖರೀದಿ ಮಾಡಿ ಪೂರೈಸುವುದರಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಮೊತ್ತದ ಹಣ ಉಳಿತಾಯವಾಗುತ್ತದೆ.
ಅನ್ನಭಾಗ್ಯ ಯೋಜನೆ ನಗದು ವರ್ಗಾವಣೆ (DBT):-
ಅಕ್ಟೋಬರ್-2024ರ ತಿಂಗಳಲ್ಲಿ 1,16,39,179 ಕಾರ್ಡ್ ಗಳ 4,12,16,838 ಫಲಾನುಭವಿಗಳಿಗೆ ರೂ. 676.79 ಕೋಟಿ ನೇರ ನಗದು ಪಾವತಿ ಮಾಡಲಾಗಿದೆ. ಡಿಬಿಟಿ ಪ್ರಾರಂಭವಾದ ಜುಲೈ-2023 ರಿಂದ ಅಕ್ಟೋಬರ್-2024ರವರೆಗೆ ಒಟ್ಟು 10452.00 ಕೋಟಿ ರೂ. ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳ ಹಣ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಕೇಂದ್ರ ಸರ್ಕಾರದ OMSS(D) ಯೋಜನೆಯಡಿ ಪ್ರತಿ ಕೆ.ಜಿ. ಅಕ್ಕಿಗೆ ದರ ನಿಗದಿಪಡಿಸಿರುವ ಬಗ್ಗೆ:
1. 26-01-2023 ರಂತೆ OMSS(D) ಪ್ರತಿ ಕೆ.ಜಿ. ಅಕ್ಕಿಗೆ ರೂ. 34/- ನಿಗದಿಪಡಿಸಿರುತ್ತದೆ.
2. ಕೇಂದ್ರ ಸರ್ಕಾರದ ಆದೇಶದ ದಿನಾಂಕ: 09-07-2024ರ OMSS(D) ದರವನ್ನು ಪ್ರತಿ ಕೆ.ಜಿ. ಅಕ್ಕಿಗೆ ರೂ. 28/- ನಿಗದಿಪಡಿಸಿರುತ್ತದೆ. 3. ಕೇಂದ್ರ ಸರ್ಕಾರದ ಆದೇಶದ ದಿನಾಂಕ: 17-01-2025ರಂತೆ ಪ್ರತಿ ಕೆ.ಜಿ. ಅಕ್ಕಿಗೆ ರೂ. 22.50/- ನಿಗದಿಪಡಿಸಿರುತ್ತದೆ.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ನಿಗಮದ ನಿರ್ದೇಶಕ ಚಂದ್ರಕಾಂತ್,ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಎಂ ಎಸ್ ಎನ್. ಬಾಬು.ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.