ಬೆಂಗಳೂರು, ಫೆ.13 www.bengaluruwire.com : ಸಾರ್ವಜನಿಕರ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ನಮ್ಮ ಮೆಟ್ರೋ ರೈಲ್ವೆ ಪ್ರಯಾಣ ದರ ತೀವ್ರ ಏರಿಕೆಯ ಬಗ್ಗೆ ಆಡಳಿತರೂಢ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ.
ಕಾಂಗ್ರೆಸ್- ಬಿಜೆಪಿ ಮುಖಂಡರ ವಾಗ್ಯುದ್ಧ ಹಾಗೂ ಸಾರ್ವಜನರಿಕರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಮೆಟ್ರೋ ಪ್ರಯಾಣ ದರ ಅರ್ಧಕ್ಕರ್ಧ ಹೆಚ್ಚಳವಾದ ಬಗ್ಗೆ ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಫೆ.11ರಂದು ದರ ಏರಿಕೆ ನಿರ್ಧಾರ ರಾಜ್ಯ ಸರ್ಕಾರದ ಬಳಿಯಿಲ್ಲವೆಂದು ಸ್ಪಷ್ಟೀಕರಣ ನೀಡಿದ್ದರು.
ಆದಾದ ಮೂರನೇ ದಿನಕ್ಕೆ ಅಂದರೆ ಫೆ.13ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, “ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಬೆಂಗಳೂರು ಮೆಟ್ರೋ ದರ ಪರಿಷ್ಕರಣೆಯನ್ನು ಜಾರಿಗೆ ತಂದಿರುವ ರೀತಿಯು ವೈಪರೀತ್ಯಗಳಿಗೆ ಕಾರಣವಾಗಿದೆ. ಕೆಲವು ವಿಭಾಗಗಳಲ್ಲಿ ದರಗಳು ದ್ವಿಗುಣಗೊಂಡಿವೆ”.
“ಈ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಮತ್ತು ಹೆಚ್ಚಳವು ಅಸಹಜವಾಗಿರುವಲ್ಲಿ ದರಗಳನ್ನು ಕಡಿಮೆ ಮಾಡಲು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ನಾನು ಕೇಳಿದ್ದೇನೆ. ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡಬೇಕು” ಎಂದು ನಮ್ಮ ಮೆಟ್ರೋ ಅಧಿಕಾರಿಗಳಿಗೆ ತಿಳಿಸಿದ್ದಾಗಿ ಪೋಸ್ಟ್ ಮಾಡಿದ್ದಾರೆ.

ಫೆ.11 ರಂದು ಮೆಟ್ರೋ ಪ್ರಯಾಣ ದರ ಏರಿಕೆ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟೀಕರಣ ನೀಡಿ, ಒಂದೆಡೆ ಮೆಟ್ರೋ ರೈಲು ನಿರ್ಮಾಣದ ಸಾಧನೆ ಕೇಂದ್ರದ ಬಿಜೆಪಿ ಸರ್ಕಾರದ್ದು ಎಂದು ಡಂಗುರ ಬಾರಿಸುತ್ತಿರುವ ಬಿಜೆಪಿ ನಾಯಕರು ದರ ಪರಿಷ್ಕರಣೆ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿರುವುದನ್ನು ಕಂಡು ಅದರ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುತ್ತಿರುವುದು ಆತ್ಮವಂಚಕ ನಡವಳಿಕೆಯಾಗಿದೆ. ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಜೊತೆಗೂಡಿ ಬೆಂಗಳೂರು ಮೆಟ್ರೊ ರೈಲು ನಿಗಮವನ್ನು ಸ್ಥಾಪಿಸಿದ್ದು, ಇದರಲ್ಲಿ ಎರಡೂ ಸರ್ಕಾರಗಳ ಸಮ (50:50) ಪಾಲುದಾರಿಕೆ ಇದೆ ಎಂದು ಹೇಳಿದ್ದರು.

ಮೆಟ್ರೋ ಸ್ವಾಯತ್ತ ಸಂಸ್ಥೆಯಾಗಿದ್ದು ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಪೂರ್ಣ ನಿಯಂತ್ರಣಾಧಿಕಾರ ಇಲ್ಲ. ಉಳಿದೆಲ್ಲ ನಗರಗಳ ಮೆಟ್ರೋ ರೈಲು ನಿಗಮಗಳಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೂಡಾ ಕೇಂದ್ರ ಸರ್ಕಾರದ ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
2017ರ ನಂತರ ಮೆಟ್ರೊ ರೈಲಿನ ಪ್ರಯಾಣ ದರ ಪರಿಷ್ಕರಣೆ ಮಾಡದೆ ಇರುವ ಕಾರಣ ದರ ಪರಿಷ್ಕರಣೆ ನಡೆಸುವಂತೆ ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲೇ ಇದ್ದಿದ್ದರೆ ಬಿಎಂಆರ್‌ಸಿಎಲ್ ನಮಗೆ ಪತ್ರ ಬರೆಯದೆ, ಕೇಂದ್ರ ಸರ್ಕಾರಕ್ಕೆ ಯಾಕೆ ಪತ್ರ ಬರೆಯುತ್ತಿತ್ತು? ಎಂದು ಪ್ರಶ್ನಿಸಿದ್ದರು.
2017ರ ಜೂನ್ ನಲ್ಲಿ ಬೆಂಗಳೂರು ಮೆಟ್ರೋ ರೈಲಿಗೆ ನಿಗದಿಗೊಳಿಸಿದ್ದ ಪ್ರಯಾಣದರ, ಮೆಟ್ರೋದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ಅನುಭವಗಳನ್ನು ದರಪರಿಷ್ಕರಣ ಸಮಿತಿ ಕಲೆ ಹಾಕಿತ್ತು. ಇದರ ಜೊತೆಯಲ್ಲಿ ಬಿಎಂಆರ್‌ಸಿಎಲ್ ನ ಹಣಕಾಸು ಸಾಮರ್ಥ್ಯವನ್ನು ಕೂಡಾ ಸಮಿತಿ ಅಧ್ಯಯನ ಮಾಡಿ 2024ರ ಡಿಸೆಬರ್ 16ರಂದು ಸಮಿತಿ ತನ್ನ ವರದಿನ್ನು ಸಲ್ಲಿಸಿತ್ತು.
2017ರ ಜೂನ್ ತಿಂಗಳಲ್ಲಿ ಬಿಎಂಆರ್‌ಸಿಎಲ್ ಪ್ರಯಾಣ ದರ ನಿಗದಿಪಡಿಸಿದಾಗ ಮೆಟ್ರೋ ಪ್ರಥಮ ಹಂತದ 42.30 ಕಿ.ಮೀ ಮಾರ್ಗ ಮಾತ್ರ ಪೂರ್ಣಗೊಂಡಿತ್ತು. ಮೆಟ್ರೋ ಎರಡನೇ ಹಂತ ಭಾಗಶ: ಪೂರ್ಣಗೊಂಡ ನಂತರ ಈಗ ಮೆಟ್ರೋ ಮಾರ್ಗ 76.95 ಕಿ.ಮೀಟರ್ ಗೆ ವಿಸ್ತರಣೆ ಗೊಂಡಿದೆ. ಮೆಟ್ರೋ 2, 2ಎ, ಮತ್ತು 2ಬಿ ಮಾರ್ಗಗಳು (96.60 ಕಿ.ಮೀ.) 2026ರ ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ಆಗ ಬೆಂಗಳೂರು ಮೆಟ್ರೋ ಮಾರ್ಗ 175,55 ಕಿ.ಮೀ.ಗೆ ವಿಸ್ತರಣೆಯಾಗಲಿದೆ.
ಬೆಂಗಳೂರು ಮೆಟ್ರೋ ರೈಲಿಗೆ ಸಂಬಂಧಿಸಿದ ಈ ಎಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಚರ್ಚೆ ನಡೆಸಿದ ನಂತರ ಹತ್ತು ಅಧ್ಯಾಯಗಳಲ್ಲಿ ತನ್ನ ವರದಿ ನೀಡಿದೆ. ಸಮಿತಿ ದೇಶದ ಉಳಿದ ಮೆಟ್ರೋ ರೈಲಿನ ಪ್ರಯಾಣ ದರವನ್ನು ಅಧ್ಯಯನ ಮಾಡಿದೆ. ಸದ್ಯ ಬೆಂಗಳೂರು ಮೆಟ್ರೋ ಪ್ರಯಾಣ ದರ ಕನಿಷ್ಠ ರೂ.10 ಮತ್ತು ಗರಿಷ್ಠ ರೂ.60 ಆಗಿದೆ. ಮುಂಬೈ ಮೆಟ್ರೋ ರೈಲಿನ ಕನಿಷ್ಠ ಪ್ರಯಾಣದರ ರೂ.10 ಮತ್ತು ಗರಿಷ್ಠ ಪ್ರಯಾಣ ದರ ರೂ.80 ಆಗಿದೆ ಎಂದು ಸಿಎಂ ತಿಳಿಸಿದ್ದರು.
ದೆಹಲಿ ಮೆಟ್ರೋವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಮೊದಲ ಹಂತದ ಪ್ರಯಾಣದರವನ್ನು ಆಯಾ ರಾಜ್ಯಗಳ ಮೆಟ್ರೊ ನಿಗಮಗಳೇ ನಿಗದಿ ಪಡಿಸಿತ್ತು. ಈಗ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ನೇಮಿಸುವ ಸಮಿತಿ ನಿಗದಿಪಡಿಸುತ್ತದೆ. ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆಯ ಸೆಕ್ಷನ್ 37ರ ಪ್ರಕಾರ ಪ್ರಯಾಣ ದರ ನಿಗದಿ ಸಮಿತಿ ನೀಡಿದ ವರದಿಯನ್ನು ಮೆಟ್ರೋ ರೈಲು ನಿಗಮಗಳು ( ಈ ಪ್ರಕರಣದಲ್ಲಿ ಬಿಎಂಆರ್ ಸಿಎಲ್ ) ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದು ಹೇಳಿದ್ದರು.
ಯಾವಾಗ ಸಾರ್ವಜನಿಕರಿಂದ ಪ್ರಯಾಣ ದರ ಏರಿಕೆ ಬಗ್ಗೆ ವ್ಯಾಪಕ ವಿರೋಧ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತೋ ದರ ಇಳಿಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರಿಗೆ ತಿಳಿಸಿದ್ದಾಗಿ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.