ಬೆಂಗಳೂರು, ಫೆ.12 www.bengaluruwire.com : ಭ್ರಷ್ಟರನ್ನು ಸದೆಬಡಿಯುವ ಲೋಕಾಯುಕ್ತ ಸಂಸ್ಥೆಯಲ್ಲಿ ಡಿ.31ರ ವರೆಗೆ ಬರೋಬ್ಬರಿ 19,686 ಪ್ರಕರಣಗಳು ಬಾಕಿ ಉಳಿದಿದೆ. ದಿನೇ ದಿನೇ ಬಾಕಿ ಉಳಿಯುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಡಿಸೆಂಬರ್ ತಿಂಗಳ ಸರಾಸರಿಯನ್ನು ಗಮನಿಸಿದರೆ ಪ್ರತಿದಿನ ಸರಾಸರಿ 32ರಷ್ಟು ಭ್ರಷ್ಟಾಚಾರ ದೂರಿನ ಪ್ರಕರಣಗಳು ಹೊಸದಾಗಿ ಲೋಕಾಯುಕ್ತದಲ್ಲಿ ದಾಖಲಾಗುತ್ತಿದೆ. ಆದರೆ ಅದೇ ವೇಗದಲ್ಲಿ ದೂರಿನ ಪ್ರಕರಣಗಳು ವಿಲೇವಾರಿಯಾಗದಿರುವುದು ಸರ್ಕಾರಿ ಲಂಚಕೋರರನ್ನು ಸದೆಬಡೆಯುವ ಹಾಗೂ ಭ್ರಷ್ಟಾಚಾರ ವಿರೋಧಿ ಕಾವಲು ಸಂಸ್ಥೆಯಾಗಿರುವ ಲೋಕಾಯಕ್ತಕ್ಕೆ ಸವಾಲಾಗಿ ಪರಿಣಮಿಸಿದೆ.
ಲೋಕಾಯುಕ್ತವು ಕಳೆದ ವರ್ಷ ಡಿಸೆಂಬರ್ ತಿಂಗಳೊಂದರಲ್ಲೇ 964 ಹೊಸ ದೂರುಗಳನ್ನು ಸ್ವೀಕರಿಸಿದೆ ಎಂದು ಸಂಸ್ಥೆಯ ಅಧಿಕೃತ ಮಾಹಿತಿಯು ಅದನ್ನು ಪುಷ್ಟೀಕರಿಸುತ್ತಿದೆ. ಈಗಾಗಲೇ ಗಣನೀಯ ಹೊರೆಯನ್ನು ಹೆಚ್ಚಿಸುತ್ತದೆ. ಡಿಸೆಂಬರ್‌ನಲ್ಲಿ 715 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದರೂ, ಹೆಚ್ಚುತ್ತಿರುವ ಹೊಸ ದೂರುಗಳ ಸಂಖ್ಯೆ ಮತ್ತು ಬೃಹತ್ ಬಾಕಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿವಿಧ ವರ್ಗಗಳಲ್ಲಿ ಬಾಕಿ ಇರುವ ಪ್ರಕರಣಗಳ ವಿವರ ಈ ಕಳಕಂಡಂತಿದೆ :
* ಲೋಕಾಯುಕ್ತ ಕಚೇರಿ : 5,956 ಬಾಕಿ ಪ್ರಕರಣ

* ಉಪಲೋಕಾಯುಕ್ತ- 1 : 6,698 ಬಾಕಿ ಪ್ರಕರಣ .

* ಉಪಲೋಕಾಯುಕ್ತ- 2 : .7,032 ಬಾಕಿ ಪ್ರಕರಣ
ಲೋಕಾಯುಕ್ತ ಸಂಸ್ಥೆಯು ಭ್ರಷ್ಟಾಚಾರದ ಆರೋಪಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹರಿಸುವಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದರ ಬಗ್ಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆಯು ಸಾಕ್ಷಿಯಾಗಿದೆ. ನ್ಯಾಯದಾನದಲ್ಲಿನ ವಿಳಂಬವು ಸಂಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸಬಹುದು ಮತ್ತು ಭ್ರಷ್ಟಾಚಾರವು ಅನಿಯಂತ್ರಿತವಾಗಿ ಹೆಚ್ಚಾಗಲು ಕಾರಣವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಲೋಕೋಪಯೋಗಿ ಇಲಾಖೆ, ಬೆಂಗಳೂರು ಜಿಲ್ಲಾಡಳಿತ, ಕಂದಾಯ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಿಬಿಎಂಪಿ, ಬೆಸ್ಕಾಂ, ಅರಣ್ಯ ಇಲಾಖೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿನ ಭ್ರಷ್ಟ ಸರ್ಕಾರಿ ಅಧಿಕಾರಿಗಳು ಅಕ್ರಮವಾಗಿ ಗಳಿಸಿರುವ ಸಂಪತ್ತಿನ ಬಗ್ಗೆ ತನಿಖೆ ನಡೆಸಿ ತ್ವರಿತವಾಗಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಲೋಕಾಯುಕ್ತ ಸಂಸ್ಥೆಗೆ ನೀಡಿರುವ ಸೀಮಿತ ಅಧಿಕಾರವೂ ಒಂದು ಕಾರಣವಾದರೆ, ಮಂಜೂರಾದ ಹುದ್ದೆಗಿಂತ ಕಡಿಮೆ ಸಂಖ್ಯೆಯಲ್ಲಿ ಸಿಬ್ಬಂದಿ ಮತ್ತು ಅಧಿಕಾರಿ ವರ್ಗವು ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿರುವುದು ದೂರಿನ ಪ್ರಕರಣ ಹೆಚ್ಚಾಗಿ ಬಾಕಿ ಉಳಿಯಲು ಕಾರಣವಾಗಿದೆ ಎನ್ನಲಾಗಿದೆ.
ಲೋಕಾಯುಕ್ತದಲ್ಲಿ 643 ಖಾಲಿ ಹುದ್ದೆಗಳಿವೆ :
ಡಿ.31ರ ಲೋಕಾಯುಕ್ತ ಸಂಸ್ಥೆಯ ಅಧಿಕೃತವಾದ ಮಾಹಿತಿ ಪ್ರಕಾರ ಸರ್ಕಾರದಿಂದ ಒಟ್ಟು 1930 ಮಂಜೂರಾದ ಹುದ್ದೆಗಳಿದ್ದು, ಗ್ರೂಪ್ ಎ ನಲ್ಲಿ 43 ಹುದ್ದೆಗಳು, ಗ್ರೂಪ್ ಬಿ ನಲ್ಲಿ 25, ಗ್ರೂಪ್ ಸಿ ನಲ್ಲಿ 509 ಹುದ್ದೆಗಳು, ಗ್ರೂಪ್ ಸಿ ನಲ್ಲಿ 66 ಹುದ್ದೆಗಳು ಹಾಗೂ ಗ್ರೂಪ್ ಡಿನಲ್ಲಿ 66 ಹುದ್ದೆಗಳು ಸೇರಿದಂತೆ ಒಟ್ಟಾರೆ 643 ಹುದ್ದೆಗಳು ಖಾಲಿಯಿದೆ. ದಿನಂಪ್ರತಿ ಸರಾಸರಿಯಾಗಿ 30ಕ್ಕೂ ಹೆಚ್ಚು ಹೊಸ ದೂರುಗಳು ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುತ್ತಿರುವಾಗ 19 ಸಾವಿರದಷ್ಟು ದೂರಿನ ಪ್ರಕರಣಗಳು ಬಾಕಿಯಿರುವಾಗ ಖಾಲಿ ಹುದ್ದೆಗಳನ್ನು ಆದಷ್ಟು ಶೀಘ್ರದಲ್ಲೇ ಭರ್ತಿಯಾಗಬೇಕಾದ ಅನಿವಾರ್ಯತೆಯಿದೆ.
ಲೋಕಾಯುಕ್ತ ಸಂಸ್ಥೆಯಲ್ಲಿನ ಕಾರ್ಯ ಕಬ್ಬಿಣದ ಕಡಲೆ :
ಸರ್ಕಾರಿ ಅಧಿಕಾರಿ ಅಥವಾ ನೌಕರನೊಬ್ಬ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರನ್ನೂ ಲೋಕಾಯುಕ್ತ ಸಂಸ್ಥೆಗೆ ನಿಯೋಜನೆ ಮೇಲೆ ತೆಗೆದುಕೊಳ್ಳಲು ಬರುವುದಿಲ್ಲ. ಆ ಉದ್ಯೋಗಿಯ ಚಾರಿತ್ರ್ಯ, ಪ್ರಾಮಾಣಿಕತೆ ಇನ್ನಿತರ ಅಂಶಗಳಲ್ಲೆವನ್ನು ಅಳೆದು ತೂಗಿ ಲೋಕಾಯುಕ್ತ ಸಂಸ್ಥೆಗೆ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಒಮ್ಮೆ ಲೋಕಾಯುಕ್ತ ಸಂಸ್ಥೆಗೆ ನಿಯೋಜನೆಯಾದರೆ ಅಷ್ಟು ಸುಲಭದಲ್ಲಿ ಬೇರೆಡೆ ವರ್ಗಾವಣೆ ಸಾಧ್ಯವಿಲ್ಲ. ಕನಿಷ್ಠ ಎರಡ ವರ್ಷಕ್ಕಿಂತ ಹೆಚ್ಚು ಕಾರ್ಯನಿರ್ವಹಿಸಬೇಕಾಗುತ್ತದೆ. ಜೊತೆಗೆ ಇಲ್ಲಿನ ಶಿಸ್ತಿನ ವಾತಾವರಣ ಹೆಚ್ಚಿನ ಸರ್ಕಾರಿ ನೌಕರ ಹಾಗೂ ಅಧಿಕಾರಿಗೆ ಪಥ್ಯವಾಗದು. ಇದೇ ಕಾರಣಕ್ಕೆ ಲೋಕಾಯುಕ್ತ ಸಂಸ್ಥೆಗೆ ನಿಯೋಜನೆ ಮೇಲೆ ತೆರಳಲು ಹೆಚ್ಚಿನವರು ಹಿಂದೇಟು ಹಾಕುತ್ತಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ಲೋಕಾಯುಕ್ತವನ್ನು ಬಲಪಡಿಸುವ ಅಗತ್ಯ :
ಲೋಕಾಯುಕ್ತವನ್ನು ಬಲಪಡಿಸುವ ಅವಶ್ಯಕತೆಯಿದೆ. ಪ್ರಸ್ತುತ, ಲೋಕಾಯುಕ್ತ ಪೊಲೀಸರು ನೇರವಾಗಿ ಲೋಕಾಯುಕ್ತದ ಅಡಿಯಲ್ಲಿ ಬರುವುದಿಲ್ಲ. ಅವರು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತಾರೆ. “ಸಾಮಾನ್ಯವಾಗಿ ಲೋಕಾಯುಕ್ತಕ್ಕೆ ಅಧಿಕಾರವಿದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಲೋಕಾಯುಕ್ತವು ತನಿಖೆಗಳನ್ನು ಮಾತ್ರ ನಡೆಸುತ್ತದೆ ಮತ್ತು ಸೂಕ್ತ ಕ್ರಮಕ್ಕಾಗಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರವಿದೆ. ಈ ಶಿಫಾರಸುಗಳು ಅನುಮೋದನೆಗಾಗಿ ಸಂಪುಟಕ್ಕೆ ಹೋಗುತ್ತವೆ. ಶಿಫಾರಸುಗಳನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಸಂಪುಟವು ವಿವೇಚನಾ ಅಧಿಕಾರವನ್ನು ಹೊಂದಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ವಜಾಗೊಳಿಸಲು ಅಥವಾ ಅಮಾನತುಗೊಳಿಸಲು ಲೋಕಾಯುಕ್ತಕ್ಕೆ ಅಧಿಕಾರ ನೀಡುವ ಅವಶ್ಯಕತೆಯಿದೆ.
ಲೋಕಾಯುಕ್ತ ಸಂಸ್ಥೆಗೆ ಪೂರ್ಣ ರೀತಿಯ ಅಧಿಕಾರ ನೀಡಿದರೆ ಭ್ರಷ್ಟ ಜನಪ್ರತಿನಿಧಿಗಳಿಗೆ ಕುತ್ತು ಎಂಬ ಕಾರಣಕ್ಕೆ ಹಲವು ವರ್ಷಗಳಿಂದ ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವಿನಂತೆ ಪೂರ್ಣ ಅಧಿಕಾರ ನೀಡುತ್ತಿಲ್ಲ ಎಂಬ ಮಾತುಗಳು ಸರ್ವೇ ಸಾಮಾನ್ಯವಾಗಿದೆ. ಒಟ್ಟಿನಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿಯಿರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಕಾನೂನು ತಜ್ಞರು ಬಾಕಿ ಇರುವ ಪ್ರಕರಣ ಇತ್ಯರ್ಥಪಡಿಸಲು ತುರ್ತು ಕ್ರಮಗಳಿಗೆ ಆಗ್ರಹಿಸಿದ್ದಾರೆ. ಲೋಕಾಯುಕ್ತವು ಈ ಸವಾಲುಗಳನ್ನು ಮೆಟ್ಟಿನಿಂತು ಭ್ರಷ್ಟರನ್ನು ಹೊಣೆಗಾರರನ್ನಾಗಿ ಮಾಡುವ ಸಾಮರ್ಥ್ಯದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಸಾವಿರಾರು ಪ್ರಕರಣಗಳು ಬಾಕಿ ಉಳಿದಿರುವುದು ಕಳವಳಕಾರಿ :
“ಕರ್ನಾಟಕ ಲೋಕಾಯುಕ್ತ ದೇಶದಲ್ಲೇ ಅತ್ಯುತ್ತಮ ಹೆಸರುವಾಸಿಯಾಗಿದೆ. ಭ್ರಷ್ಟಾಚಾರ ವ್ಯವಸ್ಥೆಯನ್ನು ಬುಡದಿಂದ ಕಿತ್ತು ಹಾಕಲು ಹಾಗೂ ಸರ್ಕಾರಿ ವ್ಯವಸ್ಥೆಯಲ್ಲಿ ಸಾರ್ವಜನಿಕರ ಸ್ವಚ್ಛ ಆಡಳಿತ ನೀಡಲು ಅಕ್ರಮ ನಡೆಸುತ್ತಿರುವ ಸರ್ಕಾರಿ ನೌಕರ ಹಾಗೂ ಅಧಿಕಾರಿಗಳನ್ನು ಮಟ್ಟ ಹಾಕಲು ಲೋಕಾಯುಕ್ತ ಸಂಸ್ಥೆಯ ಅಧಿಕಾರ ಹೆಚ್ಚಿಸಬೇಕು. ಲೋಕಾಯುಕ್ತದಲ್ಲಿ 19,000ಕ್ಕೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದು ನಿಜಕ್ಕೂ ಕಳವಳಕಾರಿ ವಿಷಯ. ಹಾಗಾಗಿ ಕೂಡಲೇ ಇವುಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನೇತೃತ್ವದ ಸಂಸ್ಥೆ ಅಗತ್ಯ ಕ್ರಮ ಕೈಗೊಂಡರೆ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿದೆ”.
- ಶ್ರೀನಿವಾಸ್ ಅಲವಿಲ್ಲಿ, ಸಾಮಾಜಿಕ ಕಾರ್ಯಕರ್ತರು
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.