ಬೆಂಗಳೂರು, ಫೆ.10 www.bengaluruwire.com : ಏಷ್ಯಾದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಏರೋ ಇಂಡಿಯಾ (Aero India)ದ 15 ನೇ ಆವೃತ್ತಿಯನ್ನು 2025ರ ಫೆಬ್ರವರಿ 10 ರಂದು ಕರ್ನಾಟಕದ ಬೆಂಗಳೂರಿನಲ್ಲಿರುವ ಯಲಹಂಕ ವಾಯು ನಿಲ್ದಾಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh) ಸೋಮವಾರ ಉದ್ಘಾಟಿಸಿದರು.
ಬೆಂಗಳೂರಿನ ಯಲಹಂಕ ವಾಯುಪಡೆ ನೆಲೆಯಲ್ಲಿ ಇಂದಿನಿಂದ 5 ದಿನಗಳ ಕಾಲ ಏರೋ ಇಂಡಿಯಾ ಶೋ ಆರಂಭವಗಿದ್ದು, ಉದ್ಘಟನಾ ಕಾರ್ಯಕ್ರಮದ ಭಾಗವಾಗಿ ಯುದ್ಧ ವಿಮಾನಗಳ ಆಕರ್ಷಕ ಕಸರತ್ತು ಎಲ್ಲರನ್ನು ರಂಜಿಸಿತು. ಆಕಾಶಗಂಗೆ ತಂಡದಿಂದ ಪ್ಯಾರಾಚೂಟ್ ಗಳಿಂದ ಸೈನಿಕರು ವಾಯುನೆಲೆಯ ರನ್ ವೇ ಬಳಿ ತ್ರಿವರ್ಣ ಧ್ವಜ ಹೊತ್ತು ಇಳಿದರು. ತೇಜಸ್ ಯುದ್ಧವಿಮಾನ ಫಾರ್ಮೇಶನ್, ಸುಖೋಯ್ ಎಂಕೆ35 ಆಗಸದಲ್ಲಿ ತ್ರಿಶೂಲ್ ವಿನ್ಯಾಸ ಮೂಡಿಸಿತು, ದ್ರೋಣಿಯರ್, ಜಾಗ್ವಾರ್ ಯುದ್ಧ ವಿಮಾನ, ಹಗು ಯುದ್ಧ ಹೆಲಿಕಾಪ್ಟರ್, ಜಾಗ್ವಾರ್ ಫಾರ್ಮೇಶನ್, ಎಂಬ್ರಿಯರ್ ಸಂವಹನ ವಿಮಾನ ಸೇರಿದಂತೆ ಹಲವು ವಿಮಾನ, ಹೆಲಿಕಾಪ್ಟರ್ ಗಳು ನೀಲಿ ಆಗಸದಲ್ಲಿ ಪ್ರದರ್ಶನ ತೋರಿದವು.

15ನೇ ಏರೋ ಇಂಡಿಯಾ 2025 ರ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿದೆ. ಫೆಬ್ರವರಿ 10 ರಿಂದ 12 ರವರೆಗೆ ವ್ಯವಹಾರ ದಿನಗಳನ್ನು ಕಾಯ್ದಿರಿಸಲಾಗಿದ್ದು, 13 ಮತ್ತು 14 ನೇ ತಾರೀಖುಗಳನ್ನು ಸಾರ್ವಜನಿಕ ದಿನಗಳಾಗಿ ಜನರು ಪ್ರದರ್ಶನವನ್ನು ವೀಕ್ಷಿಸಲು ಮೀಸಲಿಡಲಾಗಿದೆ.
ಐದು ದಿನಗಳ ಏರೋ ಇಂಡಿಯಾ ಪ್ರದರ್ಶನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೇಶದ ಸೈನಿಕರಿಗೆ ಮೊದಲಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಆಂತರಿಕ ಆತ್ಮ ಸಮ್ಮಾನ್ ಮಹಾಕುಂಭವಾದರೆ, ಏರೋ ಇಂಡಿಯಾ-2025 ದೇಶದ ಬಾಹ್ಯ ಶಕ್ತಿ ಸಾಮರ್ಥ್ಯದ, ಶಸ್ತ್ರಾಸ್ತ್ರ ಪ್ರದರ್ಶನದ ಮಹಾಕುಂಭವಾಗಿದೆ. ಈ ಏರ್ ಶೋ ಮೊದಲ ಉದ್ದೇಶ ನಮ್ಮ ಕೈಗಾರಿಕಾ ಸಾಮರ್ಥ್ಯ, ತಾಂತ್ರಿಕತೆಯನ್ನು ಜಗತ್ತಿಗೆ ಪ್ರದರ್ಶಿಸುವ ಮುಖ್ಯ ಉದ್ದೇಶವಾಗಿದೆ. ನಮ್ಮ ಮಿತ್ರ ರಾಷ್ಟ್ರಗಳನ್ನು ಆಹ್ವಾನಿಸಿ ನಮ್ಮ ರಕ್ಷಣಾ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಉದ್ದೇಶವಾಗಿದೆ. ವಿಶ್ವದಲ್ಲಿ ಅನಿಶ್ಚಿತತೆಯ ಸಂದರ್ಭದಲ್ಲಿ ಶಾಂತಿ ಸಮೃದ್ಧತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ನಮ್ಮ ದೇಶ ಬೇರೆ ದೇಶದ ಮೇಲೆ ಆಕ್ರಮಣ ನಡೆಸಿಲ್ಲ, ಬೇರೆ ದೇಶದ ಶಕ್ತಿಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿಲ್ಲ.


ನಮ್ಮ ದೇಶವು ಭೌಗೋಳಿಕ ಶಾಂತಿ ಸುರಕ್ಷತೆಗಾಗಿ ವಿದೇಶಗಳೊಂದಿಗೆ ಪರಸ್ಪರ ಸಂಬಂಧ ಹೊಂದಲು ಸಿದ್ಧವಾಗಿದೆ. ದೇಶದ ಸ್ಟಾರ್ಟಪ್, ಅವಿಷ್ಕಾರಣ ಡಿಜಿಟಲ್, ರಕ್ಷಣಾ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹತ್ವ ಹೆಜ್ಜೆಯಿಟ್ಟಿದೆ. ದೇಶದಲ್ಲಿ ರಕ್ಷಣಾ ವಿಷಯವನ್ನು ಅತ್ಯಾವಶ್ಯಕ ಎಂಬುದಾಗಿ ಕಾಣಲಾಗುತ್ತಿದೆ. ಕೃಷಿ ರೀತಿ ರಕ್ಷಣಾ ಕ್ಷೇತ್ರವನ್ನು ಆರ್ಥಿಕತೆಯ ಮೂಲವಾಗಿ ನೋಡಬೇಕಾಗಿದೆ. ಇದನ್ನು ಮತ್ತಷ್ಟು ಸಶಕ್ತವಾಗಿಸಬೇಕಾಗಿದೆ. ಕಳೆದ 10 ವರ್ಷಗಳಲ್ಲಿ ರಾಷ್ಟ್ರದ ಪ್ರಮುಖ ಕ್ಷೇತ್ರವಾಗಿ ಬೆಳೆದಿದೆ. 2025-26ನೇ ಬಜೆಟ್ ನಲ್ಲಿ 6.81 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರು.


ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಜೊತೆಗೆ ರಕ್ಷಣಾ ಉತ್ಪಾದನೆಗೂ ಜಗತ್ತಿನಾದ್ಯಂತೆ ಹೆಸರುವಾಸಿಯಾಗಿದೆ. ಈ ಬಾರಿಯ ಏರ್ ಶೋ ನಲ್ಲಿ 452 ದೇಶದ ಹಾಗೂ 52 ವಿದೇಶಿ ಪ್ರದರ್ಶಕರು ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ದೇಶದ ರಕ್ಷಣಾ ಉತ್ಪಾದನೆ ಮೌಲ್ಯ 1.25 ಲಕ್ಷ ಕೋಟಿ ರೂ. ಏರಿದೆ. ದೇಶದ ರಕ್ಷಣಾ ರಫ್ತು ಮೌಲ್ಯ 21,000 ಕೋಟಿ ರೂ. ದಾಟಿದೆ. ಖಾಸಗಿ ಕ್ಷೇತ್ರದ ಕೊಡುಗೆ ಮಹತ್ವಾಗಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, 1.50 ಲಕ್ಷ ಜನರು ಬೆಂಗಳೂರಿನಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ ವೈಮಾನಿಕ ಕ್ಷೇತ್ರದ ಶೇ.60ರಷ್ಟು ಕೊಡುಗೆ ನಮ್ಮ ರಾಜಧಾನಿ ನೀಡುತ್ತಿದೆ. ನಮ್ಮ ಬೆಂಗಳೂರು ವಾಣಿಜ್ಯ ಹಾಗೂ ರಕ್ಷಣಾ ವೈಮಾನಿಕ ವಿಮಾನ ನಿಲ್ದಾಣಗಳನ್ನು ಹೊಂದಿದೆ. ಬೆಂಗಳೂರಲ್ಲಿ ಸಾಕಷ್ಟು ಕೌಶಲ್ಯಯುತ ಜನರಿದ್ದಾರೆ. ಕರ್ನಾಟಕದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ರಾಜ್ಯದಲ್ಲಿ 250 ಎಂಜಿನಿಯರಿಂಗ್, ವೈಮಾನಿಕ ಕಾಲೇಜುಗಳಿವೆ. ಏರೊ ಇಂಡಿಯಾ ವೈಮಾನಿಕ ಪ್ರದರ್ಶನ ದೇಶದ ರಕ್ಷಣಾ ಸಾಮರ್ಥ್ಯ ಪ್ರದರ್ಶಿಸುವ ಪ್ರಮುಖ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಸಂಶೋಧನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ದಿಮೆಗೆ ಪ್ರೋತ್ಸಾಹಿಸುವ ಭವಿಷ್ಯದ ದೃಷ್ಟಿಯಿಂದ ಕೈಗಾರಿಕಾ ನೀತಿಯನ್ನು ಪೋಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಆಕಾಶಕ್ಕೆ ಮಿತಿಯಲ್ಲ ಎಂಬುದನ್ನು ಈ ಏರ್ ಶೋ ಮೂಲಕ ನಾವು ಕಂಡುಕೊಳ್ಳಬಹುದು. ಬೆಂಗಳೂರು ಏರ್ ಶೋ ನಾಗರೀಕ ಮತ್ತು ಮಿಲಿಟರಿ ವಾಯುಯಾನ ಎರಡರಲ್ಲೂ ಭಾರತದ ಪ್ರಗತಿಯನ್ನು ಎತ್ತಿ ತೋರಿಸುವ ದೊಡ್ಡ ಕಾರ್ಯಕ್ರಮ. 2013ರಲ್ಲಿ ಏರೋಸ್ಪೇಸ್ ನೀತಿಯನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕ. ನಮ್ಮ ರಾಜ್ಯವು ದೇವನಹಳ್ಳಿ ಬಳಿ ಏರೋಸ್ಪೇಸ್ ಕಂಪನಿಗಳಿಗಾಗಿ ಒಂದು ಸಾವಿರ ಎಕರೆ ಪ್ರದೇಶವನ್ನು ಮೀಸಲಿಟ್ಟು ಏರೋಸ್ಪೇಸ್ ಪಾರ್ಕ್ ಸ್ಧಾಪಿಸಿದೆ ಎಂದು ಡಿಕೆ ಶಿವಕುಮಾರ್ ವಿವರಿಸಿದರು.
ರಷ್ಯಾದ ಸು-57 ಮತ್ತು ಅಮೇರಿಕನ್ ಎಫ್-35 ಲೈಟ್ನಿಂಗ್ II ಆಕರ್ಷಣೆ :

ಯಲಹಂಕ ವಾಯುನೆಲೆಯ ವಿಮಾನ ಪ್ರದರ್ಶನ ಸ್ಥಳದಲ್ಲಿ ಭಾರತೀಯ ವಾಯುಪಡೆಯ ಯುದ್ಧವಿಮಾನ, ಹೆಲಿಕಾಪ್ಟರ್ ಸೇರಿದಂತೆ ವಿದೇಶದ ಸರಕು ಸಾಗಣೆ ವಿಮಾನ, ಯುದ್ಧ ವಿಮಾನ, ಅತ್ಯಾಧುನಿಕ ಹೆಲಿಕಾಪ್ಟರ್ ಗಳು ನೆಲೆ ನಿಂತಿವೆ. ಇವುಗಳ ಪೈಕಿ ಇತಿಹಾಸದಲ್ಲಿ ಮೊದಲ ಬಾರಿಗೆ ಏರೋ ಇಂಡಿಯಾ 2025 ವಿಶ್ವದ ಎರಡು ಅತ್ಯಂತ ಮುಂದುವರಿದ ಐದನೇ ತಲೆಮಾರಿನ ಯುದ್ಧ ವಿಮಾನಗಳಾದ ರಷ್ಯಾದ ಸು-57 ಮತ್ತು ಅಮೇರಿಕನ್ ಎಫ್-35 ಲೈಟ್ನಿಂಗ್ II ಪಾಲ್ಗೊಳ್ಲುವಿಕೆಯು ಈ ಬಾರಿಯ ವಿಶೇಷವಾಗಿದೆ.
ಏರ್ ಶೋ ನಲ್ಲಿ ಏನೆನಿದೆ?:
ಐದು ದಿನಗಳ ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರ ಸಮಾವೇಶ; ಸಿಇಒಗಳ ದುಂಡುಮೇಜಿನ ಸಭೆ; ಭಾರತ ಮತ್ತು ಐಡಿಇಎಕ್ಸ್ ಮಳಿಗೆಗಳ ಉದ್ಘಾಟನೆ; ಮಂಥನ ಐಡಿಇಎಕ್ಸ್ ಕಾರ್ಯಕ್ರಮ; ಸಮರ್ಥ್ಯ ದೇಶೀಕರಣ ಕಾರ್ಯಕ್ರಮ; ಸಮಾರೋಪ ಸಮಾರಂಭ; ವಿಚಾರ ಸಂಕಿರಣಗಳು; ಉಸಿರುಬಿಗಿ ಹಿಡಿದು ನೋಡುವಂತಹ ರೋಮಾಂಚಕ ವೈಮಾನಿಕ ಪ್ರದರ್ಶನಗಳು ಮತ್ತು ಏರೋಸ್ಪೇಸ್ ಕಂಪನಿಗಳ ಪ್ರದರ್ಶನ ಸೇರಿವೆ.
‘ಬಿಲಿಯನ್ ಅವಕಾಶಗಳಿಗೆ ರನ್ ವೇ (ದಿ ರನ್ ವೇ ಟು ಎ ಬಿಲಿಯನ್ ಆಪರ್ಚುನಿಟೀಸ್) ಎಂಬ ವಿಶಾಲ ಧ್ಯೇಯದೊಂದಿಗೆ ಐದು ದಿನಗಳ ಈ ಸಂಭ್ರಮವು ಜಾಗತಿಕ ವೈಮಾನಿಕ ಕಂಪನಿಗಳ ಅತ್ಯಾಧುನಿಕ ಉತ್ಪನ್ನಗಳ ಜೊತೆಗೆ ಭಾರತದ ವೈಮಾನಿಕ ಪರಾಕ್ರಮ ಮತ್ತು ಸ್ಥಳೀಯ ಅತ್ಯಾಧುನಿಕ ನಾವೀನ್ಯತೆಗಳನ್ನು ಪ್ರದರ್ಶಿಸುತ್ತದೆ.
ಒಟ್ಟು 42,000 ಚದರ ಮೀಟರ್ ವಿಸ್ತೀರ್ಣದಲ್ಲಿ ಮತ್ತು 150 ವಿದೇಶಿ ಕಂಪನಿಗಳು ಸೇರಿದಂತೆ 900 ಕ್ಕೂ ಅಧಿಕ ಪ್ರದರ್ಶಕರ ಭಾಗವಹಿಸುವಿಕೆಯೊಂದಿಗೆ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ಈವರೆಗಿನ ಅತಿದೊಡ್ಡ ಏರೋ ಇಂಡಿಯಾ ಪ್ರದರ್ಶನವಾಗಿದೆ.
‘ಆತ್ಮನಿರ್ಭರ ಭಾರತ್’ ಮತ್ತು ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ದೂರದೃಷ್ಟಿಗೆ ಅನುಗುಣವಾಗಿ ಈ ಕಾರ್ಯಕ್ರಮವು ದೇಶೀಕರಣ(ಇಂಡಿಯನೈಜೇಷನ್) ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಂತರರಾಷ್ಟ್ರೀಯ ಸಹಯೋಗಗಳನ್ನು ರೂಪಿಸಲು ಒಂದು ವೇದಿಕೆಯನ್ನು ಒದಗಿಸುತ್ತಿದೆ. ಇದರಿಂದಾಗಿ 2047 ರ ವೇಳೆಗೆ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಂಕಲ್ಪಕ್ಕೆ ಒತ್ತು ನೀಡುತ್ತದೆ.