ಬೆಂಗಳೂರು, ಫೆ.08 www.bengaluruwire.com : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ. ಫೆ.09 ರಿಂದಲೇ ಜಾರಿಗೆ ಬರುವಂತೆ 0-2 ಕಿ.ಮೀ ನಿಂದ 30 ಕಿ.ಮೀ ಗೂ ಹೆಚ್ಚಿನ ರೈಲು ಪ್ರಯಾಣಕ್ಕೆ ಕನಿಷ್ಠ 10 ರೂ.ನಿಂದ ಗರಿಷ್ಠ 90 ರೂ. ತನಕ ಟಿಕೆಟ್ ದರ ಪರಿಷ್ಕರಣೆ ಮಾಡಿದೆ. ಈ ಮೂಲಕ ಶೇ.46 ರಿಂದ 47ರಷ್ಟು (Broad Analysis ಪ್ರಕಾರ) ಪ್ರಯಾಣ ದರ ಹೆಚ್ಚಿಸಿದೆ.
ಎಂಟು ವರ್ಷಗಳ ಬಳಿಕ ಬಿಎಂಆರ್ ಸಿಎಲ್ ಟಿಕೆಟ್ ದರವನ್ನು ಹೆಚ್ಚಳ ಮಾಡಿದೆ. ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ಒಟ್ಟು 10 ದರ ವಲಯವನ್ನು ಹೊಂದಿದೆ. F1 ನಿಂದ F10 ದರ ವಲಯಗಳ ಪೈಕಿ 4 ರಿಂದ 6 ಕಿ.ಮೀ ದೂರದ ಪ್ರಯಾಣ ದರ ಹಿಂದೆ 20 ರೂ. ಇದ್ದರೆ ಈಗ 10 ರೂ. ಹೆಚ್ಚಳವಾಗಿ ಪರಿಷ್ಕೃತ ದರ 30ರೂ. ಆಗಿದೆ. ಇನ್ನು F10 ದರ ವಲಯದಲ್ಲಿ 30 ಕಿ.ಮೀ ಹಾಗೂ ಅದಕ್ಕಿಂತ ಹೆಚ್ಚಿನ ಪ್ರಯಾಣ ದರ ಈ ಹಿಂದೆ 60ರೂ.ಇದ್ದಿದ್ದು ಈಗ 30 ರೂ. ಹೆಚ್ಚಳವಾಗಿ ಪರಿಷ್ಕೃತ ದರ 90ರೂ. ಆಗಿದೆ. F1 ಹಾಗೂ F2 ದರ ವಲಯದ 0-2 ಕಿ.ಮೀ ಹಾಗೂ 2-4 ಕಿ.ಮೀ ವರೆಗಿನ ದರ ಕ್ರಮವಾಗಿ 10 ರೂ. ಹಾಗೂ 20 ರೂ. ಇದ್ದಿದ್ದು, ಯತಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ.
ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 34 ಕಾಯಿದೆ ಅಡಿಯಲ್ಲಿ, ಕೇಂದ್ರ ಸರ್ಕಾರ ಆದೇಶದಂತೆ 2024ರ ಸೆ.07ರಂದು ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣೆಗಾಗಿ ಸಮಿತಿಯನ್ನು ರಚಿಸಲಾಗಿತ್ತು. ಈ ದರ ಪರಿಷ್ಕರಣೆ ಸಮಿತಿಯು ಪರಿಷ್ಕೃತ ದರದ ಶಿಫಾರಸು ವರದಿಯನ್ನು ಡಿ.16 ರಂದು ಸಲ್ಲಿಸಿತು.
ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 37ರ ಕಾಯಿದೆಯ ಪ್ರಕಾರ ದರ ಪರಿಷ್ಕರಣೆ ಸಮಿತಿಯು ಮಾಡಿದ ಶಿಫಾರಸುಗಳನ್ನು ಮೆಟ್ರೋ ರೈಲ್ವೇ ಆಡಳಿತ ಮೇಲೆ ಬದ್ಧವಾಗಿದ್ದು, ಅದರಂತೆ, ಬಿಎಂಆರ್ ಸಿಎಲ್ (BMRCL) ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಫೆ.09ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.

ಪರಿಷ್ಕೃತ ದರ ಈ ಕೆಳಕಂಡಂತಿದೆ :


ಕೈಗೆಟುಕುವಿಕೆ ಮತ್ತು ಆರ್ಥಿಕ ಸುಸ್ಥಿರತೆಯ ನಡುವಿನ ಸಮತೋಲನದ ನಂತರ ದರ ಪರಿಷ್ಕರಿಸಲಾಗಿದೆ. · ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಮಾತ್ರ ಅಸ್ತಿತ್ವದಲ್ಲಿರುವ ಶೇ 5 ರಿಯಾಯಿತಿಯನ್ನು ಮುಂದುವರಿಸಿದೆ. ಹಿಂದೆ ಪೀಕ್ ಹವರ್ ಹಾಗೂ ಆಫ್ ಪೀಕ್ ಹವರ್ ನಲ್ಲಿ ಸ್ಮಾರ್ಟ್ ಕಾರ್ಡ್ ಮೇಲಿನ ಪ್ರಯಾಣ ದರದ ಮೇಲೆ ಶೇ.5ರಷ್ಟು ಒಂದೇ ರಿಯಾಯಿತಿ ಇತ್ತು. ಆದರೆ ಈಗ ಆಫ್ ಪೀಕ್ ಹವರ್ ನಲ್ಲಿ ಶೇ.10ರಷ್ಟು ರಿಯಾಯಿತಿಯನ್ನು ಮೆಟ್ರೋ ಘೋಷಿಸಿದೆ.
· ಆಫ್-ಪೀಕ್ ಸಮಯ: ವಾರದ ದಿನಗಳಲ್ಲಿ, ಬೆಳಗ್ಗೆ ಕಾರ್ಯಾಚರಣೆ ಆರಂಭದಿಂದ 8 ಗಂಟೆಯವರೆಗೆ, ಮಧ್ಯಾನ 12 ಗಂಟೆಯಿಂದ 4 ಗಂಟೆಯವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಕಾರ್ಯಾಚರಣೆ ಮುಕ್ತಾಯದವರಗೆ.
· ಎಲ್ಲಾ ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ (ಜನವರಿ 26, ಆಗಸ್ಟ್ 15, ಅಕ್ಟೋಬರ್ 02) ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ 10% ರಿಯಾಯಿತಿಯಿರಲಿದೆ. ಪ್ರಯಾಣಕ್ಕೆ ಬಳಸುವ ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ ಮೊತ್ತ 90 ರೂ. ಹೊಂದಿರಬೇಕು ಎಂದು ನಮ್ಮ ಮೆಟ್ರೋ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಷ್ಕೃತ ಪ್ರವಾಸಿ ಕಾರ್ಡ್ (ದಿನದ ಪಾಸ್‌ಗಳು) ಮತ್ತು ಗ್ರೂಪ್ ಟಿಕೆಟ್ ದರಗಳು ಈ ಕೆಳಕಂಡಂತಿವೆ :

ಬ್ರಾಡ್ ಅನಾಲಿಸಿಸ್ ಎಂದರೇನು? :
ಉದಾಹರಣೆಗೆ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಪ್ರಯಾಣಿಕರು ಹಿಂದಿನ ಪ್ರಯಾಣ ದರದ ಬೆಲೆಗೆ ಈಗಿನ ಪರಿಷ್ಕೃತ ದರಕ್ಕೆ ಹೋಲಿಸಿದಾಗ ಕಂಎಉ ಬರುವ ವ್ಯತ್ಯಾಸದ ಪ್ರಕಾರ ಮಾಡಿದ ವಿಶ್ಲೇಷಣೆಯಾಗಿದೆ.