ಕೆಲ ವರ್ಷಗಳ ಹಿಂದೆ ಒಂದು ಪುಟ್ಟ ಗುಡಿಯಂತೆ ಕಾಣುತ್ತಿದ್ದ ಕಾಶಿ ವಿಶ್ವನಾಥನ ಮಂದಿರ ಇದೀಗ ದಿವ್ಯ ಮತ್ತು ಭವ್ಯವಾಗಿ ಕಾಣಿಸುತ್ತಿತ್ತು. ವಾರಾಣಸಿಯ ಸಂಸದರೂ ಆದ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ನಿರ್ಮಾಣವಾದ ಕಾಶಿ ಕಾರಿಡಾರ್ ಈ ಅದ್ಭುತ ಬದಲಾವಣೆಗೆ ಕಾರಣವಾಗಿದೆ.
ಈ ಹಿಂದೆ ವಿಶ್ವನಾಥನ ದೇವಾಲಯದ ಗರ್ಭಗೃಹದ ಸುತ್ತಮುತ್ತ ಅಲ್ಲಲ್ಲಿ ಚದುರಿದಂತೆ ಕಂಡುಬಬರುತ್ತಿದ್ದ ವಿವಿಧ ದೇಗುಲಗಳೆಲ್ಲವೂ ಈಗ ಒಂದೇ ಪರಿಸರದ ವ್ಯಾಪ್ತಿಗೆ ಬಂದಿವೆ. ಭಕ್ತಾದಿಗಳು ವ್ಯವಸ್ಥಿತವಾಗಿ ದೇವರ ದರ್ಶನ ಮಾಡಲು ಅಗತ್ಯವಿರುವ ಎಲ್ಲ ಏರ್ಪಾಡುಗಳು ಅಚ್ಚುಕಟ್ಟಾಗಿವೆ. ಕಾಶಿಯ ಬೀದಿಗಳು ಇನ್ನೂ ಸುಧಾರಣೆ ಕಂಡಿಲ್ಲವಾದರೂ ಕೂಡ ವಿಶ್ವನಾಥನ ಮಂದಿರದ ಪ್ರಾಂಗಣದ ಎಲ್ಲ ಕಡೆಯೂ ಸ್ವಚ್ಛತೆ ಕಾಪಾಡಲಾಗಿದೆ. ಪ್ರಯಾಗಕ್ಕೆ ಭೇಟಿ ನೀಡಿದ ಬಹುತೇಕ ಜನರು ಕಾಶಿಗೂ ಬಂದಿದ್ದರಿಂದ ಇಲ್ಲೂ ಕೂಡ ದರ್ಶನಕ್ಕೆ ಅಪಾರ ಜನದಟ್ಟಣೆ ಆಗಿತ್ತು.
ಕಾಶಿಯ ವಿಶ್ವನಾಥನ ದರ್ಶನ ಪಡೆದ ನಾವು ನಗರದ ಕೊತ್ವಾಲ ಎನಿಸಿರುವ ಕಾಲಭೈರವನ ದರ್ಶನವನ್ನೂ ಪಡೆಯುವಲ್ಲಿ ಸಫಲರಾದೆವು. ಆ ದೇಗುಲದಲ್ಲೂ ಕೂಡ ದರ್ಶನಕ್ಕಾಗಿ ಭಕ್ತಾದಿಗಳು ಮೈಲುದ್ದದ ಸರದಿ ಸಾಲಿನಲ್ಲಿ ನಿಂತಿದ್ದರು.
ಆ ನಂತರ ನಾವು ಅಲ್ಲಿಂದ ಗಂಗಾ ನದಿಯ ಘಾಟ್ ಗಳ ಯಾತ್ರೆ ಆರಂಭಿಸಿದೆವು. ಪಟ್ಟಣದ ಬೀದಿಯಲ್ಲಿ ನಡೆಯುತ್ತಾ ಅಲ್ಲಿನ ಜನಜೀವನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ ನಡೆದುಬಂದು ಅಸ್ಸಿಘಾಟ್ ತಲುಪಿದೆವು. ಅಲ್ಲಿಂದ ಮುಂದಕ್ಕೆ ಘಾಟ್ ನಿಂದ ಘಾಟ್ ಗೆ ನಡೆಯುತ್ತಾ ಗಂಗಾ ಮಹಲ್ ಘಾಟ್, ಜಾನಕಿ ಘಾಟ್ ಮೂಲಕ ಹಾಯ್ದು ಹರಿಶ್ಚಂದ್ರ ಘಾಟ್ ತಲುಪಿದೆವು. ಅಲ್ಲಿ ಎಂದಿನಂತೆ ಶವ ಸಂಸ್ಕಾರದ ಕಾರ್ಯವಿಧಿಗಳು ಸಾಗಿದ್ದವು.

ಅಲ್ಲಿಂದ ಮುಂದುವರೆದು ಕಾಶಿಯ ಪ್ರಸಿದ್ಧ ಘಾಟ್ ಗಳಲ್ಲಿ ಒಂದಾದ ದಶಾಶ್ವಮೇಧ ಘಾಟ್ ತಲುಪಿದೆವು. ಇಲ್ಲಿ ಗಂಗಾ ಸೇವಾ ಸಮಿತಿಯ ವತಿಯಿಂದ ಪ್ರತಿದಿನ ಸಂಜೆ 6.30ಕ್ಕೆ ಗಂಗಾ ಆರತಿ ಏರ್ಪಡಿಸಲಾಗುತ್ತದೆ.

ಗಂಗಾ ಆರತಿಗೆ ಇನ್ನೂ ಸಮಯ ವಿದ್ದಿದ್ದರಿಂದ ನಾವು ಹಾಗೇ ಮುಂದಕ್ಕೆ ನಡೆಯುತ್ತಾ ಸುಪ್ರಸಿದ್ಧವಾದ ಮಣಿಕರ್ಣಿಕಾ ಘಾಟ್ ತಲುಪಿದೆವು. ಅಲ್ಲೂ ಕೂಡ ಹಗಲು ರಾತ್ರಿ ಎನ್ನದೆ ಶವ ಸಂಸ್ಕಾರ ಕಾರ್ಯ ನಡೆಯುತ್ತಲೇ ಇರುತ್ತದೆ. ಸ್ವಲ್ಪ ಹೊತ್ತಿನ ಸಮಯ ಅಲ್ಲಿದ್ದ ನಾವು ಮತ್ತೆ ದಶಾಶ್ವಮೇಧ ಘಾಟ್ ಗೆ ಹಿಂದಿರುಗಿದೆವು. ಅಲ್ಲಿ ಅದಾಗಲೇ ಗಂಗಾ ಆರತಿಗೆ ಸಕಲ ಸಿದ್ಧತೆಗಳೂ ನಡೆಯುತ್ತಿದ್ದವು.
ಸುಮಾರು ಹತ್ತಿಪ್ಪತ್ತು ಸಾವಿರ ಜನರು ಗಂಗಾ ಆರತಿಯನ್ನು ನೋಡಲು ಕಿಕ್ಕಿರಿದು ಸೇರಿದ್ದರು. ಕೆಲವೇ ಕ್ಷಣಗಳಲ್ಲಿ ಗಂಗಾ ಸ್ತುತಿಯಿಂದ ಆರತಿ ಆರಂಭವಾಯಿತು. ಢಮರು, ಜಾಗಟೆಗಳ ನಾದ ಅದರ ಜೊತೆಗೆ ಪಂಚಾರತಿಗಳನ್ನು ಹಿಡಿದಿದ್ದ ಏಳು ಜನರು ತಾಯಿ ಗಂಗೆಗೆ ಆರತಿ ಮಾಡುವ ದೃಶ್ಯ ಎಲ್ಲರಲ್ಲೂ ದಿವ್ಯ ಅನುಭೂತಿ ಮೂಡಿಸಿತ್ತು.
ಆರತಿ ಮುಗಿಯುವ ವೇಳೆಗೆ ಹಲವರ ಕಣ್ಣುಗಳಲ್ಲಿ ಆನಂದ ಭಾಷ್ಪ ಮೂಡಿತ್ತು. ಅಲ್ಲಿಗೆ ಪ್ರಯಾಗರಾಜದ ಕುಂಭ ಮೇಳ, ತ್ರಿವೇಣಿ ಸಂಗಮದ ಪುಣ್ಯಸ್ನಾನ, ನಂತರ ಕಾಶಿಯಲ್ಲಿ ವಿಶ್ವನಾಥನ ದರ್ಶನ ಸಂಕಲ್ಪಗಳೆಲ್ಲವೂ ನಮಗೆ ಸಿದ್ಧಿಸಿದ್ದವು.