ಬೆಂಗಳೂರು, ಫೆ.07 www.bengaluruwire.com : ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಪೂರಣ್ ಬಹದ್ದೂರ್ ರೈ ಅನ್ನು ಕೇಂದ್ರ ತನಿಖಾ ದಳ (CENTRAL BUREAU OF INVESTIGATION – CBI) ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಗುರುವಾರ ಬಂಧಿಸಿದೆ.
ಅಖಿಲ ಭಾರತೀಯ ಗೂರ್ಖಾ ಲೀಗ್ (ಎಬಿಜಿಎಲ್) ನ ಮಾಜಿ ಅಧ್ಯಕ್ಷ ಮದನ್ ತಮಂಗ್ ಅವರ ಕೊಲೆ ಪ್ರಕರಣದಲ್ಲಿ ಆರೋಪಿ ಪೂರಣ್ ಬಹದ್ದೂರ್ ರೈ ಅವರನ್ನು ಬಂಧಿಸಲಾಗಿದೆ. ಈ ಆರೋಪಿಯು 2017 ರಿಂದ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದ. ಕಾನೂನು ಪ್ರಕ್ರಿಯೆಯಿಂದ ತನ್ನನ್ನು ತಾನು ಮರೆಮಾಡಿಕೊಳ್ಳಲು, ಪೂರಣ್ ರೈ ಡಾರ್ಜಿಲಿಂಗ್ (Darjeeling)ನಿಂದ ಬೆಂಗಳೂರಿಗೆ ತನ್ನ ನೆಲೆಯನ್ನು ಬದಲಾಯಿಸಿಕೊಂಡಿದ್ದ.
ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗಳ ಅನುಸಾರ ಸಿಬಿಐ, 2010ರ ಮೇ.21 ರಂದು ಡಾರ್ಜಿಲಿಂಗ್‌ನಲ್ಲಿ (ಪಶ್ಚಿಮ ಬಂಗಾಳ)ನ ಸದರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ ಐಆರ್ ಅನ್ನು ವರ್ಗಾಯಿಸಿಕೊಂಡು 2011ರ ಜ.19ರಂದು ಈ ಪ್ರಕರಣವನ್ನು ಮರು ದಾಖಲಿಸಿಕೊಂಡಿತ್ತು.
ಆರೋಪಿ ಪೂರಣ್ ರೈ ಪ್ರಕರಣದಲ್ಲಿ ಆರೋಪಪಟ್ಟಿಯಲ್ಲಿ ದಾಖಲಾಗಿರುವ ಆರೋಪಿಯಾಗಿದ್ದು, 2017 ರಿಂದ ವಿಚಾರಣಾ ಪ್ರಕ್ರಿಯೆಗಳಿಗೆ ಹಾಜರಾಗುತ್ತಿರಲಿಲ್ಲ. ಕೋಲ್ಕತ್ತಾದ ಸಿಟಿ ಸೆಷನ್ಸ್ ನ್ಯಾಯಾಲಯದ ಎಲ್ಡಿ ಮುಖ್ಯ ನ್ಯಾಯಾಧೀಶರ ನ್ಯಾಯಾಲಯವು 2017ರ ಏ.03 ರಂದು ಈ ಆರೋಪಿ ವಿರುದ್ಧ ಘೋಷಣೆ ಹೊರಡಿಸಿತ್ತು. ಆದರೆ ಆತ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲನಾದ. ಈ ಹಿನ್ನಲೆಯಲ್ಲಿ ಎಲ್ಡಿ ನ್ಯಾಯಾಲಯವು 2024 ರಲ್ಲಿ ನ.20ರಂದು ಈತನ ವಿರುದ್ಧ ಮತ್ತೆ ಮುಕ್ತ ವಾರಂಟ್ ಹೊರಡಿಸಿತು.

ಈ ಹಿನ್ನಲೆಯಲ್ಲಿ ಸಿಬಿಐ ಸಂಘಟಿತ ಪ್ರಯತ್ನಗಳು ಮತ್ತು ತಾಂತ್ರಿಕ ಮಾಹಿತಿಯ ಬಳಿಕ ಸಿಬಿಐ ತಲೆಮರೆಸಿಕೊಂಡಿದ್ದ ಆರೋಪಿ ಪೂರಣ್ ರೈ ಯನ್ನು ಗುರುವಾರ ಬೊಮ್ಮಸಂದ್ರದಲ್ಲಿ ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
