ಬೆಂಗಳೂರು, ಫೆ.05 www.bengaluruwire.com : ನಗರದಲ್ಲಿ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ, ಇನ್ನು ಮುಂದೆ ನಗರ ಸಾರಿಗೆ ಬಸ್‌ಗಳನ್ನು ಖರೀದಿಸುವಾಗಿ ಎಲೆಕ್ಟ್ರಿಕ್ ಇಂಧನ ಬಳಸುವ ಇವಿ ಬಸ್‌ಗಳನ್ನು ಮಾತ್ರ ಸಾರಿಗೆ ಸೇವೆಗೆ ಬಳಸಿಕೊಳ್ಳುವುದು ಸೂಕ್ತವೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಸಾರಿಗೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಫೆ.03 ರಂದು ಬರೆದ ಪತ್ರದಲ್ಲಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಇರುವ ಹೆಚ್ಚಿನ ವಾಹನ ಸಂಖ್ಯೆಯಿಂದಾಗಿ ಮಾಲಿನ್ಯದ ಪ್ರಮಾಣವು ಅಗಾಧವಾಗಿದ್ದು ನಗರದ ಜನ ಸಾಂದ್ರತೆಯೂ ಹೆಚ್ಚಾಗಿರುವ ಕಾರಣ ಮಾಲಿನ್ಯ ಹೆಚ್ಚು ಜನರನ್ನು ಬಾಧಿಸುತ್ತದೆ.
ನಗರದಲ್ಲಿ ವಿದ್ಯುತ್ ಚಾಲಿತ ಇವಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಸಾರಿಗೆ ಮೂಲ ಸೌಕರ್ಯವನ್ನು ರೂಪಿಸುವಾಗ ಸಾಂಪ್ರಾದಾಯಿಕ ಇಂಧನಗಳಿಂದ ದೂರಸರಿಯುವುದು ಕೇವಲ ವಿಕಲ್ಪವಾಗಿರದೇ ತುರ್ತು ಅಗತ್ಯವಾಗಿದೆ.
ಈ ಹಿನ್ನಲೆಯಲ್ಲಿ ಭವಿಷ್ಯದಲ್ಲಿ ನಗರದಲ್ಲಿ ಕಾಯನಿರ್ವಹಿಸುವ ಎಲ್ಲಾ ಆಟೋಗಳು, ಕ್ಯಾಬ್‌ಗಳು, ಟ್ಯಾಕ್ಸಿಗಳು, ಸರಕು ಆಟೋಗಳು, ಘನತ್ಯಾಜ್ಯ ಸಂಗ್ರಹಣೆ ವಾಹನಗಳಿಗೆ ಅನುಮತಿ ನೀಡುವಾಗ ಅವುಗಳು ಇವಿ ವಾಹನಗಳಾಗಿದ್ದಲ್ಲಿ ಮಾತ್ರ ಅನುಮತಿ ನೀಡುವುದು ಸೂಕ್ತ.

ಇದಕ್ಕೆ ಪೂರಕವಾಗಿ ಇನ್ನು ಮುಂದೆ ನಗರ ಸಾರಿಗೆ ಬಸ್‌ಗಳನ್ನು ಖರೀದಿಸುವಾಗಿ ಸಹ ಎಲೆಕ್ಟ್ರಿಕ್ ಇಂಧನ ಬಳಸುವ ಇವಿ ಬಸ್‌ಗಳನ್ನು ಮಾತ್ರ ಸಾರಿಗೆ ಸೇವೆಗೆ ಬಳಸಿಕೊಳ್ಳುವುದು ಸೂಕ್ತವೆಂದ ಆರೋಗ್ಯ ಇಲಾಖೆಯ ಅಭಿಪ್ರಾಯವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಪತ್ರದಲ್ಲಿ ವಿವರಿಸಿದ್ದಾರೆ.

ಸಾಂಪ್ರಾದಾಯಿಕ ಇಂಧನಗಳಿಂದ ಚಲಿಸುವ ವಾಹನಗಳ ಬಳಕೆಯಿಂದಾಗಿ ವಾಯು ಮಾಲಿನ್ಯ ಜಗತ್ತಿನಲ್ಲಿ ಸರ್ವೇ ಸಾಮಾನ್ಯವಾಗಿದ್ದು ಇದು ಸಾರ್ವಜನಿಕರ ಆರೋಗ್ಯದ ಮೇಲೆ ನೇರ ದುಷ್ಪರಿಣಾಮ ಬೀರುವುದು ಸರ್ವೇವೇಧ್ಯವಾಗಿದೆ. ಬೆಂಗಳೂರಿನ ಬೌಗೋಳಿಕ ಸ್ಥಿತಿ ಹಾಗೂ ಹವಾಮಾನಗಳು ವಾಯು ಮಾಲಿನ್ಯಯನ್ನು ಸಂಕೀರ್ಣಗೊಳಿಸುತ್ತವೆ. ದೆಹಲಿಯಂತೆ ವಾಯು ಮಾಲಿನ್ಯಕ್ಕಾಗಿ ಬೆಂಗಳೂರು ಸಹ ಕುಖ್ಯಾತಗೊಳ್ಳುವ ಪೂರ್ವದಲ್ಲಿಯೇ ನಾವು ಎಚ್ಚೆತ್ತುಕೊಳ್ಳುವ ಅಗತ್ಯ ಕಂಡುಬರುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಸಲಹೆ ನೀಡಿದ್ದಾರೆ.
ಪರಿಸರದ ಮೇಲೆ ದೂರಗಾಮಿ ದುಷ್ಪರಿಣಾಮಗಳನ್ನು ಮಿತಿಗೊಳಿಸುವ ನಿಟ್ಟಿನಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ನಮ್ಮ ತಲೆಮಾರು ಕ್ರಮ ಕೈಗೊಳ್ಳಲೇಬೇಕಿದ್ದು ಸರ್ಕಾರ ಈ ಬಗ್ಗೆ ಉತ್ತರದಾಯಿತ್ವವನ್ನು ಕೂಡ ಹೊಂದಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿರುತ್ತದೆ ಎಂದು ಆವರು ಅಭಿಪ್ರಾಯಪಟ್ಟಿದ್ದಾರೆ.