ನವದೆಹಲಿ, ಫೆ.05 www.bengaluruwire.com : ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಇಂದು ಭೇಟಿ ನೀಡಿ ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಿದರು. ಇನ್ನೊಂದೆಡೆ ದೆಹಲಿ ವಿಧಾನಸಭೆಗೆ ಬುಧವಾರ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಮತದಾನ ನಡೆಯುವ ದಿನವೇ ಪ್ರಧಾನಿ ಮೋದಿ ತೀರ್ಥಯಾತ್ರೆ, ದೇವಸ್ಥಾನಕ್ಕೆ ಹೋಗುತ್ತಿರುವುದು ಮತ್ತು ಅಮೃತ ಸ್ನಾನದಂಥ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಇದೇ ಮೊದಲಲ್ಲ. 11ನೇ ಸಲವಾಗಿದೆ. 2014ರ ನಂತರ ನರೇಂದ್ರ ಮೋದಿ ಈ ರೀತಿಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯ ಮತದಾನದ ದಿನದಂದು ಮೋದಿ ಮಂದಿರ ಅಥವಾ ತೀರ್ಥಯಾತ್ರೆಯಲ್ಲಿ ಭಾಗಿಯಾಗುವುದು ಮತದಾರರ ಒಲವನ್ನು ಗಳಿಸಲು ಈ ತಂತ್ರ ಬಳಸುತ್ತಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ರಾಜನೀತಿ ವಲಯದಲ್ಲಿ ಮತದಾನದ ದಿನ ಪ್ರಧಾನಿ ಮೋದಿ ಮಂದಿರಕ್ಕೆ ಭೇಟಿ ನೀಡುವ ಪರಿಪಾಠವು, ಗೊಂದಲದಲ್ಲಿರುವ ಮತದಾರರ ಮೇಲೆ ಪರಿಣಾಮ ಬೀರುತ್ತದೆ. ಮತದಾನದ ದಿನವೇ ಅವರು ಮಹಾಕುಂಭ ಮೇಳಕ್ಕೆ ಹೋಗುವುದು ದೆಹಲಿ ಚುನಾವಣೆಯ ದಿನ ಪರಿಣಾಮ ಬೀರುತ್ತದೆ. ಇದು ಬಿಜೆಪಿಯ ಮತ ಗಳಿಕೆ ಪ್ರಮಾಣ ಏರಿಕೆಯಲ್ಲಿ ಕಾರಣವಾಗುತ್ತದೆ ಎನ್ನಲಾಗಿದೆ.
2019 ಮೇ 19: ಲೋಕಸಭೆ ಚುನಾವಣೆಯ ಅಂತಿಮ ಹಂತ.8 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಿಗದಿಯಾಗಿದ್ದ ದಿನದಂದೇ ಪ್ರಧಾನಿ ಮೋದಿ ಕೇಸರಿ ವಸ್ತ್ರ ಧರಿಸಿದ್ದ ಪ್ರಧಾನಿ ಮೋದಿ ಕೇದಾರನಾಥ ಮಂದಿರದಲ್ಲಿ ದರ್ಶನ ಮಾಡಿದ್ದರು. ಆ ಬಳಿಕ ಕೇದಾರನಾಥನ ಸಮೀಪದ ಗುಹೆಯಲ್ಲಿ ಧ್ಯಾನ ಮಾಡಿದ್ದರು. ಈ ಫೋಟೋಗಳು ಭಾರೀ ವೈರಲ್ ಆಗಿದ್ದವು. ನಾಲ್ಕು ದಿನಗಳ ಬಳಿಕ ಅಂದರೆ ಮೇ 23 ರಂದು ನಡೆದ ಮತ ಎಣಿಕೆಯಲ್ಲಿ ಮೋದಿ ಸರ್ಕಾರ 303 ಸೀಟ್‌ಗಳಲ್ಲಿ ಜಯ ಸಾಧಿಸಿ 2ನೇ ಬಾರಿಗೆ ಅಧಿಕಾರಕ್ಕೆ ಏರಿದ್ದರು.

ಐದು ವರ್ಷಗಳ ಬಳಿಕ ಅಂದರೆ 2024ರ ಜೂನ್ 1 ರಂದು ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್‌ನಲ್ಲಿ ಧ್ಯಾನ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆದವು. ಅದೇ ದಿನ ಲೋಕಸಭೆ ಚುನಾವಣೆಯ ಕೊನೇ ಹಂತದ ಮತದಾನ ನಡೆಯುತ್ತಿತ್ತು. ಈ ವೇಳೆ ಅವರು ರುದ್ರಾಕ್ಷಿ ಜಪಮಾಲೆಯನ್ನು ಹಿಡಿದುಕೊಂಡಿದ್ದರು.

ಇದರಿಂದಾಗಿ ಕೊನೇ ಹಂತದ ಚುನಾವಣೆಯಲ್ಲಿ 57 ಸೀಟ್‌ಗಳಲ್ಲಿ ಚುನಾವಣೆ ನಡೆಯಬೇಕಿತ್ತು. ಇದರಲ್ಲಿ 18 ಸೀಟ್‌ಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರ 240 ಸೀಟ್‌ಗಳಲ್ಲಿ ಗೆಲುವು ಕಂಡಿತ್ತು. ಇತರ ಪಕ್ಷಗಳ ಬೆಂಬಲದೊಂದಿಗೆ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಮತ್ತೆ ಅಧಿಕಾರ ಗಳಿಸುವಲ್ಲಿ ಯಶಸ್ವಿಯಾದರು.
2023ರ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಮೋದಿಯ ದೇವಸ್ಥಾನ ಭೇಟಿ ಯಾವುದೇ ಪರಿಣಾಮ ಬೀರಲಿಲ್ಲ. ಕರ್ನಾಟಕ ಚುನಾವಣೆಯಲ್ಲಿ 224 ಸೀಟ್‌ಗಳ ಪೈಕಿ ಬಿಜೆಪಿ 66ರಲ್ಲಿ ಮಾತ್ರವೇ ಗೆಲುವು ಕಂಡಿತ್ತು. ಹಿಂದಿನ ಚುನಾವಣೆಗಿಂತ 38 ಸ್ಥಾನ ಕಡಿಮೆಯಾಗಿತ್ತು. 135 ಅಭ್ಯರ್ಥಿಗಳು ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಗದ್ದುಗೆ ಹಿಡಿದಿತ್ತು.