ವಾರಣಾಸಿ (ಉತ್ತರಪ್ರದೇಶ) ಫೆ.03 www.bengaluruwire.com : ಪ್ರಯಾಗ್ ರಾಜ್ (Prayagraj) ನಲ್ಲಿ ಜ.13 ರಿಂದ ಫೆ.26 ತನಕ ಮಹಾಕುಂಭ ಮೇಳ (Mahakumbh mela-2025)ನಡೆಯುತ್ತಿರುವ ಕಾರಣ ಈ ತೀರ್ಥಸ್ಥಳಕ್ಕೆ ಬಂದವರು ಸುತ್ತಮುತ್ತಲಿರುವ ಕಾಶಿ (Kashi), ಅಯೋಧ್ಯೆ (Ayodhya), ವಿಂಧ್ಯಾಂಚಲ (Vindhyanchala), ಚಿತ್ರಕೂಟ (Chithrakoota) ಎಲ್ಲಾ ಕಡೆಯೂ ದಿನೇ ದಿನೇ ಲಕ್ಷಾಂತರ ಭಕ್ತರಿಂದ ತುಂಬಿ ಹೋಗುತ್ತಿದೆ.
ಅದರಲ್ಲೂ ಕಾಶಿ, ಅಯೋಧ್ಯೆಯಲ್ಲಿ ರಾತ್ರಿ ಹಗಲ್ಲನ್ನದೆ ರೈಲು, ಬಸ್, ಖಾಸಗಿ ವಾಹನಗಳಲ್ಲಿ ಭಕ್ತರ ಜನಸಾಗರವೇ ಹರಿದುಬರುತ್ತಿದೆ. ನಿಮ್ಮಲ್ಲಿ ಹಲವರು ಪ್ರಯಾಗರಾಜದ ಕುಂಭ ಮೇಳಕ್ಕೆ ಬಂದು ನಂತರ ಕಾಶಿ, ಅಯೋಧ್ಯೆಗೂ ಹೋಗಿ ಬರೋಣ ಅಂದುಕೊಂಡಿರಬಹುದು ಅಲ್ಲವೇ? ಹಾಗಿದ್ರೆ ಸ್ವಲ್ಪ ತಾಳಿ… !!
ಸದ್ಯ ಕೋಟ್ಯಾಂತರ ಜನರು ಪ್ರಯಾಗ, ಅಯೋಧ್ಯೆ ಮತ್ತು ಕಾಶಿಗೆ ಬಂದು ಹೋಗುತ್ತಿದ್ದಾರೆ. ಇನ್ನು ಕಾಶಿಯ ವಿಶ್ವನಾಥ ಮಂದಿರಕ್ಕೆ ಸಂಪರ್ಕ ನೀಡುವ ಎಲ್ಲ ರಸ್ತೆಗಳಲ್ಲೂ ಜನರು ಸುನಾಮಿಯೋಪಾದಿಯಲ್ಲಿ ಉಕ್ಕಿ ಉಕ್ಕಿ ಹರಿಯುತ್ತಿದ್ದಾರೆ. ಮಂದಿರದ ಸುತ್ತಲಿನ ಎಲ್ಲ ರಸ್ತೆಗಳಲ್ಲಿ ಸುಮಾರು 3 ಕಿ.ಮೀ ವರೆಗೆ ಯಾವುದೇ ರೀತಿಯ ಆಟೋ, ಎಲೆಕ್ಟ್ರಿಕ್ ಆಟೋ ಅಥವ ಸೈಕಲ್ ರಿಕ್ಷಾವನ್ನೂ ಬಿಡುತ್ತಿಲ್ಲ. ಏಕೆಂದರೆ ಅಲ್ಲಿ ಹೆಜ್ಜೆಯಿಡಲು ಆಗದಷ್ಟು ಭಕ್ತರು ಬರುತ್ತಿದ್ದಾರೆ. ಬೆಳಗಿನ ಜಾವದಿಂದ ಮಧ್ಯರಾತ್ರಿವರೆಗೂ ಕಿಲೋಮೀಟರ್ ಗಟ್ಟಲೆ ಕ್ಯೂ ಸಾಮಾನ್ಯವಾಗಿದೆ. ಕಾಶಿಯ ಶ್ರೀ ವಿಶ್ವನಾಥನ ದರ್ಶನಕ್ಕೆ ಕನಿಷ್ಠ 5-6 ಗಂಟೆ ಹಿಡಿಯುತ್ತಿದೆ.

ಬ್ಯಾಗು ಇತ್ಯಾದಿಗಳನ್ನು ಹಿಡಿದುಕೊಂಡು ಜನರಿಂದ ತುಂಬಿ ತುಳುಕುತ್ತಿರುವ ರಸ್ತೆಯಲ್ಲಿ ಹರಸಾಹಸ ಪಟ್ಟು ನಡೆಯುವಂತಾಗಿದೆ. ವಸಂತ ಪಂಚಮಿ ಹಬ್ಬ ಇಂದು ಉತ್ತರ ಭಾರತದವರಿಗೆ ಬಹಳ ಪ್ರಮುಖ ದಿನ. ಹೀಗಾಗಿ ಭಕ್ತರ ದಂಡು ತುಸು ಹೆಚ್ಚೇ ಇದೆ. ಇಂತಹ ಪರಿಸ್ಥಿತಿಯಲ್ಲಿ ವಯಸ್ಸಾದವರು, ಮಕ್ಕಳ ಜೊತೆ ಬಂದರೆ ಕಷ್ಟವೇ.

ಕಾಲ ಭೈರವನ ದೇಗುಲಕ್ಕೂ ಮೈಲುದ್ದದ ಸಾಲುಗಳಿವೆ. ಇದಲ್ಲದೆ ವಿಪರೀತ ಜನದಟ್ಟಣೆಯ ಕಾರಣಕ್ಕಾಗಿ ದಶಾಶ್ವಮೇಧ ಘಾಟ್ ನಲ್ಲಿ ಪ್ರತಿದಿನ ಸಂಜೆ ನಡೆಯುವ ಗಂಗಾ ಆರತಿ ಕಾರ್ಯಕ್ರಮಕ್ಕೆ ಇರುವ ಅಲ್ಪ ಸ್ಥಳದಲ್ಲೇ ಜನ ಕಿಕ್ಕಿರಿದು ತುಂಬುತ್ತಿರುವುದರಿಂದ ಇದನ್ನು ನಿರ್ವಹಿಸುವುದು ಜಿಲ್ಲಾಡಳಿತ, ಪೊಲೀಸರಿಗೂ ತುಸು ಕಷ್ಟವೇ. ಕಾಶಿಯ ಶ್ರೀ ವಿಶ್ವನಾಥ ದೇವಸ್ಥಾನದ 2-3 ಕಿ.ಮೀ ಸುತ್ತಳತೆಯ ರಸ್ತೆಗಳಲ್ಲಿ ಜನ ಜಂಗಳಿಯನ್ನು ನಿರ್ವಹಿಸಲು ಬ್ಯಾರಿಕೇಡ್ ಹಾಕಲಾಗಿದೆ.


ಕಾಶಿ ಶ್ರಿ ವಿಶ್ವನಾಥ ದೇವರ ದರ್ಶನಕ್ಕಾಗಿ ಜನವರಿ 11 ರಿಂದ 28ರ ತಾರೀಖಿನ 17 ದಿನಗಳಲ್ಲಿ ಬರೋಬ್ಬರಿ 6,55,878 ಭಕ್ತರು ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದರು. ಜನವರಿ 27ರಂದು ಒಂದೇ ದಿನ 6,55,878 ಯಾತ್ರಾರ್ಥಿಗಳು ದೇವರ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಯೋಧ್ಯೆ ರಾಮಜನ್ಮ ಭೂಮಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು, “ಅಯೋಧ್ಯೆಯಲ್ಲಿನ ರಾಮಲಲ್ಲಾನ ಸುಗಮ ದರ್ಶನಕ್ಕಾಗಿ 10-15 ದಿನಗಳ ಕಾಲ ಯಾತ್ರೆಯನ್ನು ಮುಂದೂಡಿ” ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಹೀಗಾಗಿ ಕರ್ನಾಟಕದಿಂದ ಬರುವ ಭಕ್ತರು ಸೂಕ್ತ ರೈಲು, ವಿಮಾನ, ವಾಹನಗಳ ವ್ಯವಸ್ಥೆ ಜೊತೆಗೆ ಪ್ರಯಾಗ ನಗರ/ಕುಂಭಮೇಳದ ಟೆಂಟ್ ಪ್ರದೇಶ/ ಸಂಘ ಸಂಸ್ಥೆ/ ಮಠಗಳು ಇತ್ಯಾದಿಗಳಲ್ಲಿ ವಸತಿ ಖಚಿತವಾಗಿ ಸಿಗುವುದಾದರೆ ಮಾತ್ರ ಕುಂಭಮೇಳದಲ್ಲಿ ಪಾಲ್ಗೊಂಡು ಕಾಶಿ, ಅಯೋಧ್ಯೆಗೆ ಭೇಟಿ ನೀಡಿ. ಇಲ್ಲವಾದಲ್ಲಿ ಮಹಾಕುಂಭ ಮೇಳದ ನಂತರವೇ ಈ ತೀರ್ಥಯಾತ್ರಾ ಸ್ಥಳಗಳಿಗೆ ಭೇಟಿಕೊಟ್ಟರೆ ಒಳಿತು ಎಂಬುದು ಈ ಸ್ಥಳಗಳಿಗೆ ಭೇಟಿಕೊಟ್ಟವರ ಸಲಹೆ ಹಾಗೂ ಅಭಿಪ್ರಾಯವಾಗಿದೆ.