ಬೆಂಗಳೂರು, ಜ.26 www.bengaluruwire.com : ಕಳೆದ ತಿಂಗಳು ಅನಾರೋಗ್ಯದ ಹಿನ್ನಲೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಹಿರಿಯ ನಟ ಶಿವರಾಜ್ ಕುಮಾರ್ (Actor Shivarajkumar) ಇಂದು (ಜ 26) ಬೆಂಗಳೂರಿಗೆ ಬಂದಿಳಿದರು.
ಮೂತ್ರಕೋಶದ ಕ್ಯಾನ್ಸರ್ (Bladder cancer) ಸಂಬಂಧ ಆಪರೇಷನ್ ಮಾಡಿಸಿಕೊಳ್ಳಲು ನಟ ಶಿವರಾಜಕುಮಾರ್ ಡಿ.18 ರಂದು ಅಮೆರಿಕ (America)ಕ್ಕೆ ಪತ್ನಿಯೊಂದಿಗೆ ತೆರಳಿದ್ದರು. ಆನಂತರ ಡಿ.24 ರಂದು ಆಪರೇಷನ್ಗೆ ಒಳಗಾಗಿದ್ದರು. ಇತ್ತೀಚಿಗಷ್ಟೇ ಶಿವಣ್ಣ ತಾಯ್ನಾಡಿಗೆ ಬರುವ ಸಿಹಿ ಸುದ್ದಿಯನ್ನು ಸ್ವತಃ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿ ತಾಯ್ನಾಡಿಗೆ ಮರಳಿದ್ದಾರೆ.
ತಮ್ಮ ನೆಚ್ಚಿನ ನಟ ಆರೋಗ್ಯದಿಂದ ಮರಳಿ ಬಂದಿರುವುದು ಶಿವಣ್ಣ ಅಭಿಮಾನಿಗಳಿಗೆ ಇನ್ನಿಲ್ಲದ ಸಂತೋಷ ಕೊಟ್ಟಿದೆ. ಅಭಿಮಾನಿಗಳು ಸಿಹಿ, ಕೇಕ್, ಹಾರ-ತುರಾಯಿಗಳನ್ನು ತಂದಿದ್ದರು. ತಮ್ಮ ನೆಚ್ಚಿನ ನಟ ಆಗಮಿಸಿದ್ದಕ್ಕೆ ಶಿವರಾಜ್ ಕುಮಾರ್ ಅಭಿಮಾನಿಗಳು ಜೈಕಾರ ಕೂಗಿದರು.
ಇದೇ ವೇಳೆ ಶಿವಣ್ಣ ಮಾಧ್ಯಮಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಅದಾದ ಬಳಿಕ ಚೇತರಿಸಿಕೊಂಡ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. ಹೋಗಬೇಕಿದ್ದರೆ ಬಹಳ ಎಮೋಷನ್ ಆಗಿದ್ದೆ. ಏನೇ ಇದ್ದರೂ ಫೇಸ್ ಮಾಡಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ. ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು. ಅಭಿಮಾನಿಗಳ ಆಶೀರ್ವಾದದಿಂದ ಹೋಗಿಬಂದೆ. ಏರ್ಪೋಟ್ ಇಳಿದು ಆಸ್ಪತ್ರೆ ಮುಂದೆ ಹೋಗಬೇಕಿದ್ದಾಗಲೇ ಧೈರ್ಯ ಬಂತು. ಒಂದು ತಿಂಗಳ ವಿಶ್ರಾಂತಿ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಎಂದು ಹ್ಯಾಟ್ರಿಕ್ ಹೀರೋ ಹೇಳಿದರು.
ಅಮೆರಿಕದಿಂದ ದುಬೈಗೆ ಬಂದಿಳಿದು, ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿನ ಏರ್ಪೋಟ್ನಲ್ಲಿ ಬೆಳಿಗ್ಗೆ 9ರ ಆಸುಪಾಸಿನಲ್ಲಿ ಬೆಂಗಳೂರಿನ ಲ್ಯಾಂಡ್ ಆಗಿದ್ದು, ವಿಮಾನ ನಿಲ್ದಾಣದ ಪ್ರಕ್ರಿಯೆಗಳನ್ನು ಮುಗಿಸಿ ಗೇಟ್ 1ರಲ್ಲಿ ಹೊರಬಂದರು.
ಇನ್ನೂ ಅವರ ನಾಗವಾರದ ಮನೆ ಬಳಿ ಶಿವಣ್ಣರನ್ನ ಸ್ವಾಗತಿಸಲು 500 ಕೆ.ಜಿ ಹೂಗಳನ್ನ ದೊಡ್ಮನೆ ಅಭಿಮಾನಿಗಳು ತಂದಿದ್ದರು. ಜೊತೆಗೆ ಮೂರು ಜೆಸಿಬಿಗಳ ಮೂಲಕ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರಿಗೆ ಹೂ ಹಾಕಿ ಸ್ವಾಗತಿಸಿದರು. ಆಗ ಅವರ ನಿವಾಸದ ಬಳಿ ಅಭಿಮಾನಿಗಳು ದಂಡು ಹರಿದು ಬಂದಿತ್ತು.
ಏರ್ಪೋರ್ಟ್ ಬಳಿಯ ಟೋಲ್ನಿಂದ ಹಿಡಿದು ನಾಗವಾರದ ಮನೆಯವರೆಗೂ ಶಿವಣ್ಣರನ್ನ ಬರಮಾಡಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದರು. ಶಿವಣ್ಣ ಅವರ ನಿವಾಸದ ಬಳಿ ಅಭಿಮಾನಿಗಳು ಬ್ಯಾನರ್, ಕಟೌಟ್ ಹಾಕಿ ಸ್ವಾಗತ ಮಾಡಿದರು. ಅಭಿಮಾನಿಗಳು ಶಿವಣ್ಣ ಆಗಮನದ ಹಿನ್ನೆಲೆಯಲ್ಲಿ ಅನ್ನ ಸಂತರ್ಪಣೆ ಆಯೋಜಿಸಿದ್ದಾರೆ. ಸೋಮವಾರ ಶಿವಣ್ಣನ ಮನೆಯಲ್ಲಿ ಹೊಸ ವರ್ಷ ಹಾಗೂ ಸಂಕ್ರಾಂತಿ ಸಂಭ್ರಮ ನಡೆಯಲಿದೆ.