ವಿಜಯಪುರ/ಬಾಗಲಕೋಟೆ, ಜ.23 www.bengaluruwire.com : ಹೊಸ ವಿದ್ಯುತ್ ಸಂಪರ್ಕಗಳಿಗೆ ಗೃಹಜೋತಿ ಯೋಜನೆಯಡಡಿ 58 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಒಂದು ವರ್ಷದ ನಂತರ ಹೊಸ ಸರಾಸರಿ ಯೂನಿಟ್ ನಿಗದಿ ಮಾಡಲು ಸಾಧ್ಯವಿಲ್ಲವೆಂದು ಇಂಧನ ಸಚಿವ ಕೆ.ಜೆ. ಚಾರ್ಜ್ ತಿಳಿಸಿದ್ದಾರೆ.
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹೊಸ ಕಟ್ಟಡಗಳಿಗೆ 58 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು, ಒಂದು ವರ್ಷದ ನಂತರ ಪರಿಷ್ಕರಿಸಲಾಗುವುದೇ ಎಂಬ ಪ್ರಶ್ನೆಗೆ ಕುರಿತು ಈ ಪ್ರತಿಕ್ರಿಯೆ ನೀಡಿದ್ದಾರೆ.
58 ಯೂನಿಟ್ ಉಚಿತ ವಿದ್ಯುತ್ ನೀಡುವುದೇ ಜಾಸ್ತಿಯಾಗಿದೆ. ಹೊಸ ಗ್ರಾಹಕರಿಗೆ ಸರಾಸರಿ ಇರುವುದೇ 50 ಯುನಿಟ್ ಆಗಿದ್ದು, ವರ್ಷದ ನಂತರ ಪರಿಷ್ಕರಣೆ ಸಾಧ್ಯವಿಲ್ಲ. ಒಂದೇ ವೇಳೆ ಪರಿಷ್ಕರಿಸಬೇಕಿದ್ದರೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 2.62 ಕೋಟಿ ಗೃಹಜ್ಯೋತಿ ಗ್ರಾಹಕರು ಈಗಾಗಲೇ ಸರಾಸರಿ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, ಅದರಲ್ಲಿಯೂ ಶೇ. 10 ರಷ್ಟು ಹೆಚ್ಚುವರಿ ವಿದ್ಯುತ್ ನೀಡಲಾಗುತ್ತಿದೆ ಎಂದು ಸಚಿವ ಜಾರ್ಜ್ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ, ಅವಶ್ಯಕತೆ ಬಿದ್ದರೆ ವಿದ್ಯುತ್ ಖರೀದಿಸುತ್ತೇವೆ. ರಾಜ್ಯದಲ್ಲಿ ಸದ್ಯ ಪ್ರತಿ ದಿನಕ್ಕೆ 17 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದೆ, ಕೊರತೆ ಉಂಟಾದರೆ ಬೇರೆ ರಾಜ್ಯಗಳಿಂದ ಖರೀದಿಸುತ್ತೇವೆ. ಕಳೆದ ವರ್ಷವೂ ಲೋಡ್ ಶೆಡ್ಡಿಂಗ್ ಇರಲಿಲ್ಲ. ಈ ವರ್ಷವೂ ಇರುವುದಿಲ್ಲ ಎಂದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು.
ಕುಸುಮ್-ಸಿ ಯೋಜನೆಯಡಿ ಪಂಪ್ಸೆಟ್ಗಳಿಗೆ ಸೋಲಾರ್ ಸೌಲಭ್ಯ ಕಲ್ಪಿಸಲಾಗುತ್ತಿದೆ. 3 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದ್ದು, ಬಾಕಿ ಇರುವ 2 ಲಕ್ಷ ಪಂಪ್ ಸೆಟ್ ಗಳನ್ನು ಇನ್ನೊಂದು ವರ್ಷದಲ್ಲಿ ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಯೋಜನೆ 2004ರಿಂದಲೇ ಜಾರಿಯಲ್ಲಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಯೋಜನೆಯಡಿ 4.5 ಲಕ್ಷ ಅರ್ಜಿಗಳು ಬಾಕಿ ಇದ್ದವು. ಪ್ರಸ್ತುತ 2.5 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಇತ್ಯರ್ಥಗೊಳಿಸಿದ ಬಳಿಕ ಹೊಸದಾಗಿ ಬಂದ ಅರ್ಜಿಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.
ರೈತರಿಗೆ ನಿರಂತರ 7 ಗಂಟೆ ಸೇರಿದಂತೆ ರಾಜ್ಯದ ಜನರಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುತ್ತಿದೆ. ಎಂದು ಸಚಿವರು ಮಾಹಿತಿ ನೀಡಿದರು.