ಬೆಳಗಾವಿ, ಜ.21 www.bengaluruwire.com : ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ಇಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳು, ಅಧ್ಯಕ್ಷೀಯ ಭಾಷಣ ಮತ್ತಿತರ ಮಾಹಿತಿಗಳು ಹಾಗೂ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಪುಸ್ತಕಗಳು ಇಂದು ಬಿಡುಗಡೆಯಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ “ಗಾಂಧಿ ಭಾರತ ಮರು ನಿರ್ಮಾಣ” ಹಾಗೂ ರಿಕ್ಲೈಮಿಂಗ್ ಗಾಂಧಿ ಭಾರತ್ (Reclaiming Gandhi Bharath) ಕನ್ನಡ ಹಾಗೂ ಆಂಗ್ಲ ಪುಸ್ತಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.
ಸುವರ್ಣ ಸೌಧದ ಆವರಣದಲ್ಲಿ ಸ್ಥಾಪಿಸಿರುವ ಬೃಹತ್ ಗಾಂಧಿ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಈ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. 1924 ರ ಕಾಂಗ್ರೆಸ್ ಅಧಿವೇಶನದ ನಿರ್ಣಯಗಳು, ಕೊಲ್ಕತ್ತಾ ಒಪ್ಪಂದ ಮತ್ತು ನೇಯ್ಗೆಯ ಮತಾಧಿಕಾರ, ಸರೋಜಿನಿ ನಾಯ್ಡು ಅವರ ವಿದೇಶಾಂಗ ಸೇವೆ,ಅಕಾಲಿಗಳಿಗೆ ಅಭಿನಂದನೆ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು, ಬರ್ಮಾದ ಜನರಿಗೆ ಸಹಾನುಭೂತಿ, ಕೋಹತ್ ಹಾಗೂ ಗುಲಬರ್ಗ ಗಲಭೆಗಳು, ಅಸ್ಪೃಶ್ಯತೆ ನಿವಾರಣೆ, ಅಧಿವೇಶನದ ಲೆಕ್ಕಪರಿಶೋಧನೆ ಸೇರಿದಂತೆ ಐತಿಹಾಸಿಕ ಮಾಹಿತಿಗಳು ಹಾಗೂ ಛಾಯಾಚಿತ್ರಗಳನ್ನು ಈ ಪುಸ್ತಕಗಳು ಒಳಗೊಂಡಿವೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದರಾದ ಪ್ರಿಯಾಂಕಾಗಾಂಧಿ, ಕೆ.ಸಿ.ವೇಣುಗೋಪಾಲ, ರಣದೀಪ್‌ಸಿಂಗ್ ಸುರ್ಜೇವಾಲಾ,ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ,ಸಚಿವರಾದ ಎಚ್.ಕೆ.ಪಾಟೀಲ,ಡಾ.ಜಿ.ಪರಮೇಶ್ವರ, ಸತೀಶ ಜಾರಕಿಹೊಳಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.