ಬೆಂಗಳೂರು, ಜ.20 www.bengalruwire.com : ನಮ್ಮ ಮೆಟ್ರೋ ನಿಲ್ದಾಣದ ರೈಲ್ವೆ ಹಳಿಯ ಮೇಲೆ ಅವಘಡಗಳು ನಡೆಯುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಇಂದೂ ಕೂಡ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವಾಯುಪಡೆಯ ಮಾಜಿ ಸಿಬ್ಬಂದಿ ಮೆಟ್ರೋ ರೈಲು ಹತ್ತಿರ ಬರುತ್ತಿದ್ದಂತೆ ರೈಲ್ವೇ ಹಳಿಯ ಮೇಲೆ ಹಾರಿದರು. ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ.
ಇಂದು ಬೆಳಗ್ಗೆ 10.25 ಗಂಟೆಗೆ ಈ ಘಟನೆ ನಡೆದಿದ್ದು, ಬಿಹಾರದ 49 ವರ್ಷದ ಮಾಜಿ ವಾಯುಪಡೆಯ ಸಿಬ್ಬಂದಿ ಅನಿಲ್ ಕುಮಾರ್ ಪಾಂಡೆ ಹಳಿಗಳ ಮೇಲೆ ಹಾರಿದರು. ಅದೃಷ್ಟವಶಾತ್, ಘಟನೆ ನಡೆಯುತ್ತಿದ್ದಂತೆ ಇದನ್ನು ಕಂಡ ರೈಲ್ವೆ ನಿಲ್ದಾಣದಲ್ಲಿನ ಬಿಎಂಆರ್‌ಸಿಎಲ್ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ, ಸಂಭಾವ್ಯ ದುರಂತವನ್ನು ತಡೆಯಲು ತುರ್ತು ಟ್ರಿಪ್ ಸಿಸ್ಟಮ್ (ಇಟಿಎಸ್) ಅನ್ನು ಸಕ್ರಿಯಗೊಳಿಸಿದರು.
ಅಲ್ಲದೆ ತ್ವರಿತವಾಗಿ ಪಾಂಡೆಯವರನ್ನು ರಕ್ಷಿಸಲಾಯಿತು. ಈ ಘಟನೆಯು ಹಸಿರು ಮಾರ್ಗದ (Green Line) ಸೇವೆಗಳಲ್ಲಿ ಸ್ವಲ್ಪ ಅಡಚಣೆ ಉಂಟು ಮಾಡಿತು. ಈ ಘಟನೆಯಿಂದಾಗಿ, ನಾಲ್ಕು ರೈಲುಗಳು ಯಶವಂತಪುರ ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ನಡುವಿನ ಸಣ್ಣ ಲೂಪ್‌ನಲ್ಲಿ 10.25 ಗಂಟೆಯಿಂದ 10:50 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಸಾಮಾನ್ಯ ಸೇವೆಗಳು 10:50 ಗಂಟೆಗೆ ಪುನರಾರಂಭವಾಯಿತು. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಈ ಘಟನೆಯನ್ನು ದೃಢಪಡಿಸಿದ್ದು, ಬಿಎಂಆರ್‌ಸಿಎಲ್ ಸಿಬ್ಬಂದಿಯ ಸಮಯೋಚಿತ ಕಾರ್ಯಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.
Namma Metro Jalahalli Metro Station Ex Airforce Office Jump in To Track