ಪ್ರಯಾಗ್ ರಾಜ್ (ಉತ್ತರಪ್ರದೇಶ), ಜ.19 www.bengaluruwire.com : ಇಂದು ಸಂಜೆ ಮಹಾಕುಂಭ 2025 ಮೇಳದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 18 ಡೇರೆಗಳಲ್ಲಿ ಬೆಂಕಿ ಆವರಿಸಿದ್ದು, ಆ ಪ್ರದೇಶದಾದ್ಯಂತ ದಟ್ಟವಾದ ಹೊಗೆ ಆವರಿಸಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್ ಡಿಆರ್ ಎಫ್ ತಂಡ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ, ಡೇರೆಯಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಸೆಕ್ಟರ್ 19 ರಲ್ಲಿ ಇಂದು ಸಂಜೆ 4.30 ಕ್ಕೆ ಗೀತಾ ಪ್ರೆಸ್ ಟೆಂಟ್‌ನಲ್ಲಿ ಎರಡು ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡ ಕಾರಣ ಪ್ರಾರಂಭವಾದ ಬೆಂಕಿಯು ಎಲ್ಲೆಡೆ ವ್ಯಾಪಿಸಿ 18 ಡೇರೆಗಳು ಸುಟ್ಟುಹೋಗಿವೆ ಎಂದು ವರದಿಯಾಗಿದೆ.
ಅದೃಷ್ಟವಶಾತ್, ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ ಮತ್ತು ಭಕ್ತರನ್ನು ಅಗ್ನಿ ಪೀಡಿತ ಪ್ರದೇಶದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. 15 ಅಗ್ನಿಶಾಮಕ ದಳದ ತಂಡ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡವು ಬೆಂಕಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಲು ಕ್ರಮ ಕೈಗೊಂಡಿದೆ. ವ್ಯಾಪಕವಾಗಿ ಬೆಂಕಿ ಹೊತ್ತಿದ್ದರಿಂದ ಹೊಗೆಯು ಆಕಾಶದೆತ್ತರದ ತನಕ ತಲುಪಿದ್ದರಿಂದ ದೂರದ ಪ್ರದೇಶದ ತನಕ ಅಗ್ನಿ ಅವಘಡದ ಬಗ್ಗೆ ಮಾಹಿತಿ ಕಾಡ್ಗಿಚ್ಚಿನಂತೆ ಹರಡಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಂಕಿಯ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಬೆಂಕಿಯಿಂದ ಉಂಟಾದ ಹಾನಿ ಪ್ರಮಾಣವನ್ನು ಅಧಿಕಾರಿಗಳು ಅಂದಾಜಿಸುವ ಹಾಗೂ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸ್ಥಳದಲ್ಲೇ ಪ್ರತ್ಯಕ್ಷದರ್ಶಿ ಹಾಗೂ ಕಾಶ್ಮೀರದ ಶಾರದಾ ಸಂರಕ್ಷಣಾ ಸಮಿತಿ ಮಾಧ್ಯಮ ಸಂಯೋಜಕರಾದ ಮಂಜುನಾಥ್ ಶರ್ಮ ಬೆಂಗಳೂರು ವೈರ್ ಜೊತೆ ಮಾತನಾಡಿ, “19ನೇ ಸೆಕ್ಟರ್ ನಲ್ಲಿ ಟೆಂಟ್ ಗಳಿಗೆ ಸಿಲಿಂಡರ್ ಅನಿಲ ಸೋರಿಕೆ ಅಥವಾ ಗ್ಯಾಸ್ ಕಟ್ಟರ್ ಸ್ಪೋಟದಿಂದ ಅಗ್ನಿ ಅವಘಡದ ಘಟನೆ ಸಂಭವಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ನಾವು ಘಟನಾ ಸ್ಥಳಕ್ಕೆ ಬಂದಾಗ ಬ್ಯಾರಿಕೇಡ್ ಹಾಕಿ ಟೆಂಟ್ ನಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಬೆಂಕಿ ನಂದಿಸುತ್ತಿದ್ದರು. ಈಗ ಅಗ್ನಿ ನಿಯಂತ್ರಸಲಾಗಿದ್ದು, ಯಾವುದೇ ಪ್ರಾಣಾಪಾಯ, ಗಾಯವಾಗಲಿ ಆಗಿಲ್ಲ” ಎಂದು ಅವರು ತಿಳಿಸಿದ್ದಾರೆ.
ಪ್ರಮುಖ ಮುಖ್ಯಾಂಶಗಳು:
ಬೆಂಕಿ ಅವಘಡ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ 2025 ಮೇಳದಲ್ಲಿ 18 ಡೇರೆಗಳು ಭಾರಿ ಬೆಂಕಿಗೆ ಆಹುತಿಯಾಗಿವೆ.
ಬೆಂಕಿಗೆ ಕಾರಣ: ಗೀತಾ ಪ್ರೆಸ್ ಟೆಂಟ್‌ನಲ್ಲಿ ಎರಡು ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಯಾವುದೇ ಸಾವುನೋವುಗಳು ಸಂಭವಿಸಿಲ್ಲ: ಅದೃಷ್ಟವಶಾತ್, ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ.
ತನಿಖೆ ಪ್ರಗತಿಯಲ್ಲಿದೆ: ಬೆಂಕಿಯಿಂದ ಉಂಟಾದ ಹಾನಿಯ ಪ್ರಮಾಣವನ್ನು ಕಂಡುಹಿಡಿಯಲು ಘಟನೆಯ ಬಗ್ಗೆ ತನಿಖೆ ಮುಂದುವರೆದಿದೆ.