ಸಾಲಿಗ್ರಾಮ, ಜ.16 www.bengaluruwire.com : ಪ್ರತಿ ವರ್ಷದಂತೆ ಈ ಬಾರಿಯೂ ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದಲ್ಲಿ ಶ್ರೀ ಗುರುನರಸಿಂಹ ದೇವಸ್ಥಾನದ ಮುಂಭಾಗ ಇಂದು ಬೆಳಗ್ಗೆ 10:30ಕ್ಕೆ ವಾರ್ಷಿಕ ಬ್ರಹ್ಮರಥೋತ್ಸವ ಆರಂಭವಾಗಲಿದೆ.
ಪೌಷ ಮಾಸ ಬಹುಳ ತದಿಗೆ ಪೂರ್ವಾಹ್ನ 10.30ಕ್ಕೆ ಸಲುವ ಕುಂಭ ಲಗ್ನದಲ್ಲಿ ಶ್ರೀ ಗುರು ನರಸಿಂಹ ದೇವರ ವಾರ್ಷಿಕ ಬ್ರಹ್ಮರಥೋತ್ಸವ ನಡೆಯಲಿದೆ. ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಈಗಾಗಲೇ ದೇಶ ವಿದೇಶಗಳಿಂದ, ಸುತ್ತಮುತ್ತಲ ಊರುಗಳಿಂದ ಭಕ್ತಗಣ ದೇವಸ್ಥಾನದತ್ತ ಆಗಮಿಸುತ್ತಿದ್ದಾರೆ.
ರಥಬೀದಿಯಲ್ಲಿ ಗುರುವಾರ ಶ್ರೀ ಗುರುನರಸಿಂಹ ದೇವರ ವಾರ್ಷಿಕ ಬ್ರಹ್ಮರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ದೇವರ ಉತ್ಸವಮೂರ್ತಿಯನ್ನು ಹೊತ್ತ ರಥ ಗುರುನರಸಿಂಹ ದೇವಸ್ಥಾನದ ಎದುರಿನ ಶ್ರೀ ಆಂಜನೇಯ ದೇವಸ್ಥಾನದ ವರೆಗೆ ರಥೋರೋಹಣ ನಡೆಯಲಿದೆ.
ಸಂಜೆ 6ಕ್ಕೆ ರಥಾವರೋಹಣ, ಓಲಗಮಂಟಪ ಸೇವೆ, ಅಷ್ಟಾವಧಾನ ಸೇವೆ, ದಿ|| ಪಾರಂಪಳ್ಳಿ ರಾಮಚಂದ್ರ ಐತಾಳರ ಶಿಷ್ಯ ವೃಂದದವರಿಂದ`ಸಂಗೀತ ಸೇವೆ, ಮಹಾಮಂಗಳಾರತಿ, ಭೂತಬಲಿ, ಶಯನೋತ್ಸವ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪಾನಕ ವಿತರಣೆ ನಡೆಯಲಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಸೇವೆ ಹಮ್ಮಿಕೊಳ್ಳಲಾಗಿದೆ. ಜ.18ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಜ.19ರ ತನಕ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. Youtube Live ಕೃಪೆ : CoastalLive.com