ಬೆಂಗಳೂರು, ಜ.16 www.bengaluruwire.com : ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ ಜ.16ರಿಂದ 27ರ ವರೆಗೆ ನಡೆಯುವ 217ನೇ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು.
ನಂತರ ರಾಮಾಯಣದ ಚರಿತ್ರೆಯನ್ನು ಹೂವುಗಳಲ್ಲಿ ಅನಾವರಣ ಮಾಡಲಾಗಿರುವ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಸ್ವಾಮೀಜಿಗಳು, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ವಸತಿ ಸಚಿವ ಜಮೀರ್ ಅಹಮದ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರುಗಳು ಮುಖ್ಯಮಂತ್ರಿಗಳ ಜೊತೆ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು.
ಈ ಬಾರಿ “ಆದಿಕವಿ ಮಹರ್ಷಿ ವಾಲ್ಮೀಕಿ” ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 2.75 ಕೋಟಿ ರೂ. ವೆಚ್ಚವಾಗಿದೆ. ವಾಲ್ಮೀಕಿ ಅವರ ಜೀವನ, ಸಾಧನೆ, ರಾಮಾಯಣದ ಚರಿತ್ರೆಯನ್ನು ಹೂವುಗಳಲ್ಲಿ ಅನಾವರಣ ಮಾಡಲಾಗಿದೆ. 217ನೇಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ.
ಭದ್ರತೆಗಾಗಿ ಉದ್ಯಾನವನದಲ್ಲಿ 136 ಸಿಸಿಟಿವಿ ಕ್ಯಾಮರಾ, 400 ಪೊಲೀಸರನ್ನು ನಿಯೋಜಿಸಲಾಗಿದೆ. ಒಟ್ಟು 30 ಲಕ್ಷ ಹೂಕುಂಡಗಳನ್ನು ಹಾಗೂ ಪ್ರತ್ಯೇಕಿಸಿದ ಹೂವುಗಳನ್ನು ಬಳಸಲಾಗಿದೆ.
ಲಾಲ್ ಬಾಗಿನ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. https://hasiru.karnataka.gov.in/flowershow/login.aspx ಲಿಂಕ್ ಬಳಸಿ ಟಿಕೆಟ್ ಬುಕಿಂಗ್ ಮಾಡಬಹುದು. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80ರೂ., ರಜಾ ದಿನಗಳಲ್ಲಿ 100 ರೂ., ಮಕ್ಕಳಿಗೆ 30 ರೂ., ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಫಲಪುಷ್ಪ ಪ್ರದರ್ಶನ ಬೆಳಗ್ಗೆ 6 ರಿಂದ ಸಂಜೆ 6.30ರ ತನಕ ಇರಲಿದೆ.
ಲಾಲ್‌ಬಾಗ್ ಸುತ್ತಮುತ್ತಲ ರಸ್ತೆಗಳ ಬದಿಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ. ಅಲ್ಲದೇ ವಾಹನ ನಿಲುಗಡೆಗೆ ಕೆಲವು ಸ್ಥಳಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು :
* ಎಂ.ಎಚ್.ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ದ್ವಿಚಕ್ರ ವಾಹನಗಳು
* ಕೆ.ಎಚ್.ರಸ್ತೆ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನಗಳು
* ಮರಿಗೌಡ ರಸ್ತೆ- ಹಾಪ್‌ಕಾಮ್ಸ್‌ನಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು
*ಜೆ.ಸಿ.ರಸ್ತೆಯ ಬಿಬಿಎಂಪಿ ಪಾರ್ಕಿಂಗ್ ಸ್ಥಳದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು
ವಾಹನಗಳ ನಿಲುಗಡೆ ನಿಷೇಧಿಸಿರುವ ರಸ್ತೆಗಳು
* ಮರಿಗೌಡ ರಸ್ತೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್‌ವರೆಗೆ ರಸ್ತೆಯ ಎರಡೂ ಬದಿ
* ಕೆ.ಎಚ್.ರಸ್ತೆ, ಕೆ.ಎಚ್.ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿ
* ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮುಖ್ಯದ್ವಾರದವರೆಗೆ
* ಸಿದ್ದಯ್ಯ ರಸ್ತೆ, ಊರ್ವಶಿ ಚಿತ್ರಮಂದಿರದ ಜಂಕ್ಷನ್‌ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್‌ವರೆಗೆ
* ಲಾಲ್‌ಬಾಗ್ ವೆಸ್ಟ್‌ಗೇಟ್‌ನಿಂದ ಆರ್.ವಿ.ಟೀಚರ್ಸ್ ಕಾಲೇಜುವರೆಗೆ
* ಅರ್‌ವಿ ಟೇಚರ್ಸ್ ಕಾಲೇಜ್‌ನಿಂದ ಅಶೋಕ ಪಿಲ್ಲರ್‌ವರೆಗೆ
* ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್‌ವರೆಗೆ