ಬೆಂಗಳೂರು, ಜ.13 www.bengaluruwire.com : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಇಂದಿನಿಂದ ಆರಂಭವಾಗಿರುವ ಮಹಾಕುಂಭಮೇಳದಲ್ಲಿ ನಂದಿನಿ ಹಾಲಿ (Nandini Milk)ನಿಂದ ಮಾಡಿದ ಚಹಾ ವಿತರಿಸಲು ‘ಚಾಯ್ ಪಾಯಿಂಟ್’ (Chai Point)ನೊಂದಿಗೆ ಕೆಎಂಎಫ್ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದ ಹಿನ್ನಲೆಯಲ್ಲಿ ಕುಂಭಮೇಳದಲ್ಲಿ ಒಟ್ಟು 10 ಚಾಯ್ ಪಾಯಿಂಟ್ ಮಳಿಗೆಗಳನ್ನು ಸ್ಥಾಪಿಸಲಿದ್ದು, ಸುಮಾರು 1 ಕೋಟಿ ಕಪ್ ಚಹಾ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ. ಆ ಮೂಲಕ ಒಂದೇ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಟೀ ಮಾರಿದ ಗಿನ್ನಿಸ್ ವಿಶ್ವ ದಾಖಲೆಯನ್ನೂ ಮಾಡಲಾಗುವುದು ಎಂದು ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ( B.Shivaswamy) ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಮಹಾ ಕುಂಭಮೇಳದಲ್ಲಿ ಸವಿಯುವ ಪ್ರತೀ ಕಪ್ ಟೀ ಕೂಡ ನಂದಿನಿಯ ಶ್ರೀಮಂತ ಹಾಗೂ ಉತ್ತಮ ಗುಣಮಟ್ಟದ ಹಾಲಿನಿಂದ ತಯಾರಿಸಲಾಗುತ್ತದೆ. ಚಹಾ ಪ್ರಿಯರಿಗೆ ಸಂತೋಷದ ಅನುಭವ ನೀಡಲಿದೆ. ಟೀ ಜೊತೆಗೆ ನಂದಿನಿಯ ಇತರ ಉತ್ಪನ್ನಗಳಾದ ಸಿಹಿತಿಂಡಿ ಹಾಗೂ ಮಿಲ್ಕ್‌ಶೇಕ್‌ಗಳನ್ನು ಮಾರಾಟ ಮಾಡಲಾಗುವುದು ಎಂದು ಕೆಎಂಎಫ್ ಹೇಳಿದೆ.
ಉತ್ತರ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸುವ ಸಲುವಾಗಿ ನಂದಿನಿ ಈಗಾಗಲೇ ತನ್ನ ಹಲವು ಉತ್ಪನ್ನಗಳನ್ನು ವಿವಿಧ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಕುಂಭಮೇಳದಲ್ಲೂ ತನ್ನ ಹೆಗ್ಗುರುತನ್ನು ‘ಚಾಯ್ ಪಾಯಿಂಟ್’ನೊಂದಿಗೆ ಇಟ್ಟಿದೆ. ಆ ಮೂಲಕ ರಾಷ್ಟ್ರವ್ಯಾಪ್ತಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಉತ್ಪನ್ನಗಳನ್ನು ತಲುಪಿಸುವ ಉದ್ದೇಶ ಹೊಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಾಯ್ ಪಾಯಿಂಟ್ ಕೆಎಂಎಫ್ “ನಂದಿನಿ”ಯ ದೀರ್ಘಾವಧಿ ಗ್ರಾಹಕರಾಗಿರುವುದಲ್ಲದೇ, ಭಾರತದಲ್ಲಿಯೇ ಅತಿದೊಡ್ಡ ನಂದಿನಿ ಯುಹೆಚ್ಟಿಯ ಗುಡ್ ಲೈಫ್ ಹಾಲು, ಬೆಣ್ಣೆ, ತುಪ್ಪ ಹಾಗೂ ಪನ್ನೀರ್ ಇತ್ಯಾದಿ ಉತ್ಪನ್ನಗಳ ಬಳಕೆದಾರರಲ್ಲಿ ಒಬ್ಬರಾಗಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.