ವಿಶೇಷ ಲೇಖನ ಬರಹ : ವ್ಯೋಮಕೇಶ.ಎಂ
ಹಿಂದೂ ಸಂಸ್ಕೃತಿಯ ಆಧ್ಯಾತ್ಮ ಮತ್ತು ಧಾರ್ಮಿಕ ಆಚಾರ ವಿಚಾರಗಳು ಇಡೀ ಜಗತ್ತಿಗೇ ಮಾದರಿ. ಅಂತಹ ಸನಾತನ ಪರಂಪರೆಯ ಭಾಗವಾಗಿರುವ ನೂರಾರು ವರ್ಷಗಳ ಇತಿಹಾಸವಿರುವ 2025ರ ಪ್ರಯಾಗರಾಜ್ ನ ಮಹಾ ಕುಂಭಮೇಳ ಇದೇ ಜ.13ರಿಂದ ಫೆ.26ರ ತನಕ ನಡೆಯಲಿದೆ.
ಈ ಬಾರಿಯ ಕುಂಭಮೇಳ ನಡೆಯುವ ಪ್ರಯಾಗ್ ರಾಜ್ ನಗರ ಹಾಗೂ ಅಲ್ಲಿನ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿಯ ಸಂಗಮಸ್ಥಳದ ಪರಿಸರ ಹತ್ತು ಹಲವು ವಿಶೇಷ ಆಕರ್ಷಣೆಗಳಿಂದ ಕೂಡಿದ್ದು ದೇಶ ವಿದೇಶಗಳಿಂದ ಕೋಟ್ಯಂತರ ಜನರನ್ನು ಸೆಳೆಯುತ್ತಿದೆ. ಪುರಾಣ ಪ್ರಸಿದ್ಧ ದೇವಸ್ಥಾನ, ಆಶ್ರಮ, ಕಲೆ- ಸಂಸ್ಕೃತಿ ಗ್ರಾಮ, ಲೇಸರ್ ಶೋ, ಡ್ರೋಣ್ ಶೋ, ಸತ್ಸಂಗ, ಅಖಾಡ ಶಿಬಿರಗಳು ಸೇರಿದಂತೆ ಹಲವು ಕಾರಗಯಕ್ರಮಗಳನ್ನು ಆಯೋಜಿಸಲಾಗಿದೆ.
ಶಯನ ಹನುಮಾನ್ ದೇಗುಲ :
ಮೊದಲನೆಯದಾಗಿ ಪ್ರಯಾಗದ ದಾರಾಗಂಜ್ ಬಡಾವಣೆ ವ್ಯಾಪ್ತಿಯಲ್ಲಿ ಗಂಗಾ ನದಿಯ ದಂಡೆಯ ಮೇಲಿರುವ ಪ್ರಸಿದ್ಧ ಸಂಕಟ ಮೋಚನ ಹನುಮಾನ್ ದೇಗುಲದಲ್ಲಿ ಮಲಗಿದಂತೆ ಕಾಣುವ ಈ ಮೂರ್ತಿಯನ್ನು ಸಂತ ಸಮರ್ಥ ರಾಮದಾಸರು ಸ್ಥಾಪಿಸಿದರೆಂದು ಹೇಳಲಾಗುತ್ತದೆ. ಇಲ್ಲಿ ಮಾರುತಿಯ ಜೊತೆಗೆ ಶಿವ-ಪಾರ್ವತಿ, ಗಣೇಶ, ಭೈರವ, ದುರ್ಗೆ ಮತ್ತು ನವಗ್ರಹಗಳ ವಿಗ್ರಹಗಳೂ ಇವೆ. ಅಲ್ಲೇ ಹತ್ತಿರದಲ್ಲಿ ಶ್ರೀ ರಾಮ, ಜಾನಕಿ ಮತ್ತು ಹರಿತ್ ಮಾಧವನ ದೇಗುಲಗಳೂ ಇವೆ.
ಅಕ್ಷಯ ವಟಿ ಮತ್ತು ಪಾತಾಳ್ ಪುರಿ ದೇವಸ್ಥಾನ :
ಅಕ್ಷಯ ವಟಿ ಅನ್ನುವುದು ಎಂದಿಗೂ ನಶಿಸಿಹೋಗದ ಆಲದ ಮರ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ರಾಮ, ಸೀತೆ ಮತ್ತು ಲಕ್ಷ್ಮಣರು ತಮ್ಮ ವನವಾಸದ ವೇಳೆ ಇಲ್ಲಿ ವಿಶ್ರಾಂತಿ ಪಡೆದಿದ್ದರಂತೆ.
ಅಕ್ಷಯ ವಟಿಗೆ ಹತ್ತಿರದಲ್ಲೇ ಇರುವ ಪಾತಾಳ ಪುರಿ ದೇವಸ್ಥಾನ ಅತ್ಯಂತ ಹಳೆಯ ದೇಗುಲಗಳಲ್ಲಿ ಒಂದಾಗಿದ್ದು, ಇದೂ ಕೂಡ ಅಲಹಾಬಾದ್ ಕೋಟೆಯ ಆವರಣದಲ್ಲೇ ಇದೆ.
ಪ್ರಸಿದ್ಧ ಸರಸ್ವತಿ ಬಾವಿ :
ಸರಸ್ವತಿ ಕೂಪ್ ಅಥವ ಸರಸ್ವತಿ ಬಾವಿ ಅನ್ನುವುದು ಒಂದು ಪವಿತ್ರ ಬಾವಿಯಾಗಿದ್ದು ಪ್ರಯಾಗ್ ರಾಜದ ಆಧ್ಯಾತ್ಮಿಕ ಮಹತ್ವವನ್ನು ಎತ್ತಿ ತೋರುತ್ತದೆ.
ಮನಕಾಮೇಶ್ವರ್ ದೇಗುಲ :
ಇದೂ ಕೂಡ ಅಲಹಾಬಾದ್ ಕೋಟೆಯ ಪಶ್ಚಿಮ ಭಾಗದಲ್ಲಿರುವ ಮಿಂಟೊ ಪಾರ್ಕ್ ಬಳಿಯ ಯಮುನಾ ನದಿಯ ದಂಡೆಯಲ್ಲಿದೆ. ಇಲ್ಲಿ ನಂದಿ ಮತ್ತು ಗಣೇಶನ ಸಹಿತವಾಗಿರುವ ಕಪ್ಪು ಕಲ್ಲಿನ ಶಿವಲಿಂಗ ಇಲ್ಲಿನ ಆಕರ್ಷಣೆ.
ಮಹರ್ಷಿ ಭಾರದ್ವಾಜ ಆಶ್ರಮ :
ಮಹರ್ಷಿ ಭಾರದ್ವಾಜ ಆಶ್ರಮವೂ ಕೂಡ ಪ್ರಯಾಗ ರಾಜದಲ್ಲಿ ಧಾರ್ಮಿಕ ಮಹತ್ವ ಪಡೆದಿರುವ ಸ್ಥಳ. ಭಾರದ್ವಾಜರ ಕಾಲದಲ್ಲಿ ಇದು ವಿದ್ಯಾರ್ಜನೆಯ ಕೇಂದ್ರವಾಗಿತ್ತು. ಶ್ರೀರಾಮಚಂದ್ರನು ತನ್ನ ವನವಾಸದ ವೇಳೆ ಚಿತ್ರಕೂಟಕ್ಕೆ ತೆರಳುವ ಮುನ್ನ ಈ ಸ್ಥಳಕ್ಕೆ ಭೇಟಿ ನೀಡಿದ್ದನೆಂಬ ಪ್ರತೀತಿ ಇದೆ. ಇಲ್ಲಿ ಭಾರದ್ವಾಜೇಶ್ವರ ಮಹಾದೇವನ ದೇಗಲವಿದೆ. ಹತ್ತಿರದಲ್ಲ ಸುಂದರ ಉದ್ಯಾನವನವೂ ಇದೆ.
ವಿವಿಧ ರಾಜ್ಯಗಳ ವಿಶೇಷ ಪೆವಿಲಿಯನ್ :
ಭಾರತ ದೇಶ ವಿವಿಧತೆಯಲ್ಲಿ ಏಕತೆ ಮೆರೆಯುವ ರಾಷ್ಟ್ರ. ಈ ಮಹಾಕುಂಭ ಮೇಳದ ಪ್ರಯುಕ್ತ ಭಾರತದ ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳನ್ನು ಸ್ವದೇಶ ಮತ್ತು ವಿದೇಶಿ ಪ್ರವಾಸಿಗರಿಗೆ ಪರಿಚಯಿಸುವ ಸಲುವಾಗಿ 35 ವಿಶೇಷ ಪೆವಿಲಿಯನ್ ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿ, ಪಾರಂಪರಿಕ ಕೈ ಮಗ್ಗದ ವಸ್ತುಗಳು ಇತ್ಯಾದಿಗಳ ತಯಾರಿಕೆ ಮತ್ತು ಮಾರಾಟಕ್ಕೂ ಏರ್ಪಾಡುಮಾಡಲಾಗಿದೆ. ಇದರ ಜೊತೆಗೆ ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತದೆ.
ಸಂಸ್ಕೃತಿ ಗ್ರಾಮ :
ಈ ಬಾರಿಯ ಮಹಾಕುಂಭದ ಮತ್ತೊಂದು ವಿಶೇಷವೇ ಸಂಸ್ಕೃತಿ ಗ್ರಾಮ. 6 ವಿವಿಧ ವಲಯಗಳಾಗಿ ವಿಂಗಡಿಸಲಾಗಿರುವ ಸಂಸ್ಕೃತಿ ಗ್ರಾಮದಲ್ಲಿ ವಿವಿಧ ಪ್ರದರ್ಶನಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ದೇಶ ಮತ್ತು ಜಗತ್ತಿನ ಜನರಿಗೆ ತೋರಿಸುವ ವ್ಯವಸ್ಥೆ ಮಾಡಲಾಗಿದೆ. ಭಾರತದ ಪ್ರಾಚೀನ ಪರಂಪರೆ, ದಂತಕತೆಗಳು, ಪುರಾಣಗಳು ಮತ್ತು ಮಹಾಕುಂಭದ ಬಗೆಗಿನ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ಇಲ್ಲಿ ಬಿಂಬಿಸಲಾಗುತ್ತದೆ.
ಇದರ ಜೊತೆಗೆ ಭಾರತದ ಆಹಾರ ಕ್ರಮ ಮತ್ತು ಸಾಂಪ್ರದಾಯಕ ತಿಂಡಿ ತಿನಿಸುಗಳು ಬಗ್ಗೆಯೂ ಜನರಿಗೆ ಮಾಹಿತಿ ಸಿಗುತ್ತದೆ.
ಭಾರತೀಯ ಕಲೆಯ ಕಲಾ ಗ್ರಾಮ :
ಕುಂಭಮೇಳಕ್ಕೆ ಬರುವ ಪ್ರವಾಸಿಗಳಿಗೆ ಸುಂದರ ಅನುಭವವನ್ನು ಕಟ್ಟಿಕೊಡುವ ಸಲುವಾಗಿ ಕಲಾ ಗ್ರಾಮವನ್ನು ನಿರ್ಮಿಸಲಾಗಿದ್ದು, ಇಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯ ವಿಶೇಷಗಳನ್ನು, ವೈವಿಧ್ಯತೆಗಳನ್ನು ಪರಿಚಯಿಸಲಾಗುತ್ತದೆ.
ಕಾಳಿಘಾಟ್ ಬಳಿ ಜಲ ಲೇಸರ್ ಶೋ :
ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಆಯೋಜಿಸಲಾಗಿರುವ ಜಲ ಲೇಸರ್ ಶೋ ಕೂಡ ಕುಂಭ ಮೇಳದ ಮತ್ತೊಂದು ವಿಶೇಷ ಆಕರ್ಷಣೆ. ಯಮುನಾ ನದಿಯ ಕಾಳಿಘಾಟ್ ಬಳಿಯ ಬೋಟ್ ಕ್ಲಬ್ ನಲ್ಲಿ ನಡೆಯಲಿರುವ ವಾಟರ್ ಲೇಸರ್ ಶೋನಲ್ಲಿ ದೃಶ್ಯ ವೈಭವವೇ ಅನಾವರಣಗೊಳ್ಳಲಿದೆ.
ಕುಂಭಮೇಳದಲ್ಲಿ ಡ್ರೋನ್ ಶೋ :
ಜನವರಿ 20 ಮತ್ತು ಫೆಬ್ರವರಿ 5 ರಂದು ಆಯೋಜಿಸಲಾಗುವ ಡ್ರೋನ್ ಶೋ ಕುಂಭಮೇಳದಲ್ಲಿ ಸೇರುವ ಕೋಟ್ಯಂತರ ಜನರನ್ನು ಮಂತ್ರಮುಗ್ಧರನ್ನಾಗಿಸದೇ ಇರದು. ಅತ್ಯಾಧುನಿಕ ತಂತ್ರಜ್ಞಾನ ಬಳಕೆಮಾಡಿಕೊಂಡು ಹಲವಾರು ದೈವಿಕ ದೃಶ್ಯಾವಳಿಯನ್ನು ಸೃಷ್ಟಿಸುವ ಮೂಲಕ ಮೇಳದಲ್ಲಿ ಪಾಲ್ಗೊಳ್ಳುವ ಎಲ್ಲರಲ್ಲಿ ಪಾರಮಾರ್ಥಿಕ ಅನುಭೂತಿ ಮೂಡಿಸುವುದೇ ಇದರ ಉದ್ದೇಶ.
ಅಖಾಡ ಶಿಬಿರಗಳು :
ಮಹಾಕುಂಭದ ಪ್ರಯುಕ್ತ ಪ್ರಯಾಗರಾಜಕ್ಕೆ ಆಗಮಿಸಿರುವ ಸಾವಿರಾರು ನಾಗಾ ಸಾಧುಗಳು, ಅಘೋರಿಗಳು, ಸಂತರು, ಹಠಯೋಗಿಗಳು, ತಪಸ್ವಿಗಳು ಇತ್ಯಾದಿ ಸಾಧಕರು ಉಳಿದುಕೊಳ್ಳುವ ಅಖಾಡಗಳಿಗೆ ಜನಸಾಮಾನ್ಯರಿಗೂ ಕೂಡ ಪ್ರವೇಶ ಸಿಗುವಂತೆ ಮಾಡಿ, ಅವರನ್ನು ಹತ್ತಿರದಿಂದ ಕಂಡು, ಅವರೊಂದಿಗೆ ಸಂವಾದ ನಡೆಸುವ ವಿಶೇಷ ವ್ಯವಸ್ಥೆಯೇ ಆಖಾಡ ಶಿಬಿರಗಳು.
ಸತ್ಸಂಗ ಮತ್ತು ಕಥಾಕಾಲಕ್ಷೇಪಗಳು :
ಕುಂಭಮೇಳದ ವಿವಿಧ ಕಡೆಗಳಲ್ಲಿ ಪ್ರತಿನಿತ್ಯ ಸತ್ಸಂಗ ಮತ್ತು ಕಥಾಕಾಲಕ್ಷೇಪಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿ ಹೆಸರಾಂತ ದಾಸರು, ಪ್ರವಚನಕಾರರು ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರಕೂಡ ಏರ್ಪಡಿಸಲಾಗಿದೆ. ವಿವಿಧ ರೀತಿಯ ಮನೋದೈಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಯೋಗ ಮತ್ತು ಆಧ್ಯಾತ್ಮಿಕ ಶಿಬಿರಗಳು ನೆರವಾಗಲಿವೆ.
ದೇಶದ ಕೋಟ್ಯಂತರ ಜನರ ನಂಬಿಕೆಯ ಈ ಬೃಹತ್ ಮಹಾ ಕುಂಭಮೇಳವನ್ನು ಯಶಸ್ವಿಗೊಳಿಸಲು ಭಾರತ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಸಕಲ ಸಿದ್ಧತೆಗಳನ್ನು ನಡೆಸಿವೆ. ಹೀಗಾಗಿ, ಈ ಬಾರಿಯ ಮಹಾ ಕುಂಭ ಮೇಳ ಶ್ರದ್ಧೆ, ಭಕ್ತಿ, ವಿಶ್ವಾಸ ಮತ್ತು ಉತ್ಸಾಹಗಳ ಮಹಾ ಸಂಗಮವೇ ಆಗಲಿದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.