ನವದೆಹಲಿ, ಜ.10 www.bengaluruwire.com : ಮೂರನೇ ತ್ರೈಮಾಸಿಕದ ಸರಕು ಮತ್ತು ಸೇವಾ ತೆರಿಗೆ (GST) ವಿವರ ಸಲ್ಲಿಸಲು ಶುಕ್ರವಾರ ಆನ್‌ಲೈನ್ ಪೋರ್ಟಲ್ ತಾತ್ಕಾಲಿಕವಾಗಿ ಸ್ಥಗಿತಗೊಂಡ ನಂತರ, ಜಿಎಸ್ ಟಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡುವ ಬಗ್ಗೆ ಪರಿಗಣಿಸುವುದಾಗಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ತಿಳಿಸಿದೆ.
“ಜಿಎಸ್ ಟಿ ಪೋರ್ಟಲ್ ಪ್ರಸ್ತುತ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ನಿರ್ವಹಣೆಯಲ್ಲಿದೆ” ಎಂದು ಸರಕು ಮತ್ತು ಸೇವಾ ತೆರಿಗೆ ನೆಟ್‌ವರ್ಕ್ (GSTN) ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದಿದೆ.
ಪೋರ್ಟಲ್ ಮಧ್ಯಾಹ್ನ 12:00 ಗಂಟೆಯೊಳಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಮತ್ತು ಫೈಲಿಂಗ್ ದಿನಾಂಕವನ್ನು ವಿಸ್ತರಿಸುವುದನ್ನು ಪರಿಗಣಿಸಲು ಸಿಬಿಐಸಿ ಗೆ ಘಟನೆಯ ವರದಿಯನ್ನು ಕಳುಹಿಸಲಾಗುತ್ತಿದೆ ಎಂದು ಅದು ಹೇಳಿದೆ. ಆದಾಗ್ಯೂ, ಈ ವಿಷಯದ ಕುರಿತು ಸಿಬಿಐಸಿ ಇನ್ನೂ ಅಧಿಸೂಚನೆಯನ್ನು ಹೊರಡಿಸಿಲ್ಲ. ಸಂಜೆ 4 ಗಂಟೆಗೆ ಈ ಬಗ್ಗೆ ಜಿಎಸ್ ಟಿ ವೆಬ್ ಸೈಟ್ ನಲ್ಲಿ ಪರಿಶೀಲಿಸಿದಾಗ ಬೆಳಗ್ಗೆ 12 ಗಂಟೆಯಿಂದ ಮಧ್ಯಾಹ್ನ 6 ಗಂಟೆಯ ತನಕ ಸೇವೆ ಲಭ್ಯವಿಲ್ಲ” ಎಂಬ ಮಾಹಿತಿ ಹಾಕಲಾಗಿದೆ.
ಜಿಎಸ್ ಟಿ ಸಲ್ಲಿಸಲು ಗಡುವು ಏನು? :
ಜಿಎಸ್ ಟಿ ಸಲ್ಲಿಸಲು ಗಡುವು ಶನಿವಾರ, ಜನವರಿ 11, 2025. ಮಾಸಿಕ ಪಾವತಿ (QRMP) ಫೈಲ್ ಮಾಡುವವರಿಗೆ, ಡಿಸೆಂಬರ್ 2024 ರ ತೆರಿಗೆ ಅವಧಿಗೆ ಗಡುವು ಜನವರಿ 13, 2025 ಆಗಿದೆ.
ತ್ರೈಮಾಸಿಕ ಜಿಎಸ್ ಟಿಆರ್-1 (GSTR-1) ಫೈಲಿಂಗ್‌ಗೆ ಯಾರು ಅರ್ಹರು?
GST ಪೋರ್ಟಲ್ ಪ್ರಕಾರ, “ಪ್ರಸ್ತುತ ಹಣಕಾಸು ವರ್ಷದಲ್ಲಿ ಮತ್ತು ಹಿಂದಿನ ಹಣಕಾಸು ವರ್ಷದಲ್ಲಿ (ಅನ್ವಯಿಸಿದರೆ) ₹ 5 ಕೋಟಿವರೆಗಿನ ಒಟ್ಟು ವಾರ್ಷಿಕ ವಹಿವಾಟು (PAN ಆಧಾರಿತ) ಹೊಂದಿರುವ ತೆರಿಗೆದಾರರು” ಮಾತ್ರ GSTR-1 ಫಾರ್ಮ್ ಅನ್ನು ತ್ರೈಮಾಸಿಕವಾಗಿ ಸಲ್ಲಿಸಬಹುದು.
ಅವರು ಈಗಾಗಲೇ ತಮ್ಮ ಕೊನೆಯ ಬಾಕಿ ಫಾರ್ಮ್ ಜಿಎಸ್ ಟಿಆರ್-3ಬಿ (GSTR-3B) ರಿಟರ್ನ್ ಅನ್ನು ಸಲ್ಲಿಸಿರಬೇಕು. ಅಂತಹವರು ಕ್ಯುಆರ್ ಎಂಪಿ (QRMP) ಯೋಜನೆಗೆ ಅರ್ಹರಾಗಿರುತ್ತಾರೆ.
2019-20 ಹಣಕಾಸು ವರ್ಷ ಮತ್ತು ಪ್ರಸ್ತುತ ಹಣಕಾಸು ವರ್ಷಕ್ಕೆ ₹ 5 ಕೋಟಿವರೆಗಿನ ಒಟ್ಟು ವಹಿವಾಟು ಹೊಂದಿರುವ ತೆರಿಗೆದಾರರು ಮತ್ತು ಅವರು ನವೆಂಬರ್ 30, 2020 ರೊಳಗೆ, ಅಕ್ಟೋಬರ್ 2020 ರ ತಿಂಗಳಿಗೆ ಜಿಎಸ್ ಟಿಆರ್-3ಬಿ ಫಾರ್ಮ್ ಅನ್ನು ಸಲ್ಲಿಸಿದ್ದರೆ, ಅವರನ್ನು ಕ್ಯುಆರ್ ಎಂಪಿ ಯೋಜನೆಗೆ ನಿಯೋಜಿಸಲಾಗುತ್ತದೆ.
ಫಾರ್ಮ್ ಜಿಎಸ್ ಟಿಆರ್-1 (GSTR-1) ಎಂದರೇನು?
ಜಿಎಸ್ ಟಿ ವೆಬ್‌ಸೈಟ್‌ನಲ್ಲಿ “ಫಾರ್ಮ್ GSTR-1 ಎನ್ನುವುದು ಸರಕು ಮತ್ತು ಸೇವೆಗಳ ಹೊರಮುಖ ಪೂರೈಕೆಗಳ ಮಾಸಿಕ/ತ್ರೈಮಾಸಿಕ ಹೇಳಿಕೆಯಾಗಿದ್ದು, ಸರಕು ಮತ್ತು ಸೇವೆಗಳ ಹೊರಮುಖ ಪೂರೈಕೆಗಳ ವಿವರಗಳನ್ನು ಒಳಗೊಂಡಿದೆ” ಎಂದು ಹೇಳಲಾಗುತ್ತದೆ.