ಬೆಂಗಳೂರು, ಜ.09 www.bengaluruwire.com : ಬಿಬಿಎಂಪಿ ಮುಖ್ಯ ಆಯುಕ್ತರು ಖಾತಾ ವಿಭಜನೆ ಕಾರ್ಯಕ್ಕೆ ಸಂಬಂಧಿಸಿದಂತೆ ಜ.07 ರಂದು ಹೊರಡಿಸಿರುವ ಪರಿಷ್ಕೃತ ಸುತ್ತೋಲೆಯಿಂದ ಮತ್ತಷ್ಟು ಭ್ರಷ್ಟಾಚಾರ, ಸಾಮಾನ್ಯ ನಾಗರೀಕರು ಪಾಲಿಕೆ- ಬಿಡಿಎ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗು ಸಾಧ್ಯತೆಯಿದೆ.
ಈ ಪರಿಷ್ಕೃತ ಸುತ್ತೋಲೆಯಿಂದ ಪಾಲಿಕೆಯ ವ್ಯಾಪ್ತಿಯಲ್ಲಿರುವ ಸ್ವತ್ತುಗಳಿಗೆ ಖಾತಾ ನೊಂದಣಿ ಮತ್ತು ವಿಭಜನೆ ಮಾಡುವ ಕಾರ್ಯ ಮತ್ತಷ್ಟು ಸಂಕೀರ್ಣವಾಗಲಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಪ್ರಕರಣ 17 ಕ್ಕೆ 2021 ರಲ್ಲಿ ತಿದ್ದುಪಡಿ ಮಾಡಿರುವ ವಿಷಯವನ್ನು ನಮೂದಿಸಿ “ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳಿಗೆ ಸಂಬಂಧಿಸಿದ ಖಾತೆಗಳನ್ನು ವಿಭಜನೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅವಕಾಶವಿರುವುದಿಲ್ಲ ಮತ್ತು ಈ ಅಧಿಕಾರವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ಮಾತ್ರ ಇರುತ್ತದೆ” ಎಂಬುದಾಗಿ ಮುಖ್ಯ ಆಯುಕ್ತರು ತಮ್ಮ ಸುತ್ತೋಲೆಯಲ್ಲಿ ತಿಳಿಸಿರುತ್ತಾರೆ.
ಇಲ್ಲಿಯವರೆಗೂ ಸುಗಮವಾಗಿ ನಡೆದುಕೊಂಡು ಬರುತ್ತಿದ್ದ ಖಾತಾ ವಿಭಜನೆ ಕಾರ್ಯವು ಮುಖ್ಯ ಆಯುಕ್ತರ ಪರಿಷ್ಕೃತ ಸುತ್ತೋಲೆ ಆದೇಶದಿಂದ ಬೆಂಗಳೂರು ಮಹಾನಗರದ ನಾಗರಿಕರು ಬಿಬಿಎಂಪಿ ಮತ್ತು ಬಿಡಿಎ ಕಚೇರಿಗಳಿಗೆ ಅಲೆದಾಡಬೇಕಾದಂತಹ ಸ್ಥಿತಿ ಬರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಈ ಆದೇಶದಿಂದ ಪರಿಸ್ಥಿತಿ ಸುಧಾರಿಸಬಹುದು ಎಂದು ಭಾವಿಸಿದ್ದರೆ ಅದು ಖಂಡಿತ ಸುಳ್ಳಾಗುತ್ತದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್ ಹೇಳಿದ್ದಾರೆ.
ಈ ಬಗ್ಗೆ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದು, ಆಯುಕ್ತರ ಈ ಆದೇಶದಿಂದಾಗಿ ಭ್ರಷ್ಟಾಚಾರದ ಪ್ರಮಾಣವು ಮತ್ತಷ್ಟು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಂತೂ ಆಗುವುದಿಲ್ಲ ಎಂದಿದ್ದಾರೆ.
ಪ್ರತಿಯೊಂದು ವಾರ್ಡ್ ಗಳಲ್ಲಿ ಕಂದಾಯ ಇಲಾಖೆಯ ಕಛೇರಿಗಳನ್ನು ಹೊಂದಿರುವಂತಹ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಲ್ಲಿಯವರೆಗೆ ಖಾತಾ ವಿಭಜನೆ, ಖಾತಾ ಒಂದುಗೂಡಿಸುವಿಕೆ ಸೇರಿದಂತೆ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುತ್ತಿತ್ತು. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಂದಾಯ ಇಲಾಖೆಗೆ ಸಂಬಂಧಿಸಿದ ಆರೇಳು ಕಚೇರಿಗಳು ಮಾತ್ರವೇ ಇದ್ದು, ಪ್ರತಿಯೊಂದು ವಾರ್ಡ್ ನ ನಾಗರಿಕರು ತಮ್ಮ ಖಾತಾ ವಿಭಜನೆ ಕಾರ್ಯಕ್ಕೆ ಹತ್ತಾರು ಕಿ.ಮೀ. ದೂರವನ್ನು ಕ್ರಮಿಸಿ ಹೋಗಬೇಕಾದಂತಹ ಪರಿಸ್ಥಿತಿ ಉದ್ಭವವಾಗುತ್ತದೆ.
ಅಲ್ಲದೇ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಂದಾಯ ಇಲಾಖೆ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ / ನೌಕರರುಗಳ ಪ್ರಮಾಣ ಬಹಳ ಕಡಿಮೆಯಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯ ಖಾತಾ ವಿಭಜನೆ ಕಾರ್ಯಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಧ್ಯವಾಗುವುದಿಲ್ಲ ಹಾಗೂ ಬೆಂಗಳೂರಿನ ನಾಗರಿಕರು ಒಂದು ಸಣ್ಣ ಕೆಲಸಕ್ಕೆ ಹತ್ತಾರು ದಿನಗಳು ಅಲೆದಾಡಬೇಕಾಗುವಂತಹ ಪರಿಸ್ಥಿತಿ ಉದ್ಭವಿಸುತ್ತದೆ.
ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜೊತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು “ಭ್ರಷ್ಟಾಚಾರಿಗಳ ಅಭಿವೃದ್ಧಿ ಪ್ರಾಧಿಕಾರ”ಎಂಬ ಕುಖ್ಯಾತಿಯನ್ನು ಪಡೆದಿರುವ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತರ ಈ ಆದೇಶದಿಂದ ನಗರದ ನಾಗರಿಕರು ಪ್ರಸ್ತುತ ಚಾಲ್ತಿಯಲ್ಲಿರುವ ಲಂಚದ ಪ್ರಮಾಣಕ್ಕಿಂತಲೂ ಶೇ.10 ರಿಂದ ಶೇ.25ರಷ್ಟು ಹೆಚ್ಚಿನ ಪ್ರಮಾಣದ ಲಂಚವನ್ನು ಪಾವತಿಸಲೇಬೇಕಾದ ಹೀನಾಯ ಸ್ಥಿತಿಗೆ ತಲುಪುತ್ತಾರೆ ಎಂಬುದು ನಿಸ್ಸಂಶಯವಾಗಿ ಸತ್ಯ ಎಂದು ಎಚ್ಚರಿಸಿದ್ದಾರೆ.
ಆದ್ದರಿಂದ ಭ್ರಷ್ಟಾಚಾರದ ಪ್ರಮಾಣವನ್ನು ಹೆಚ್ಚಿಸುವ ತಮ್ಮ ಬೆಂಗಳೂರು ನಾಗರಿಕರ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆದು ಈ ಹಿಂದಿನಂತೆಯೇ ಪಾಲಿಕೆ ವ್ಯಾಪ್ತಿಯ ಸ್ವತ್ತುಗಳ ಖಾತಾ ವಿಭಜನೆ ಕಾರ್ಯವನ್ನು ಬಿಬಿಎಂಪಿಯ ಕಂದಾಯ ಇಲಾಖೆಯ ಅಧಿಕಾರಿಗಳೇ ನಿರ್ವಹಿಸುವ ಬಗ್ಗೆ ಆದೇಶ ಹೊರಡಿಸಬೇಕೆಂದು ಮುಖ್ಯ ಆಯುಕ್ತರನ್ನು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಭೂಪರಿವರ್ತನೆಯಾದ ಭೂಮಿಗೂ ಬಿಡಿಎ ಅನುಮೋದನೆ ಅಗತ್ಯ :
ಬಿಬಿಎಂಪಿ ಮುಖ್ಯ ಆಯುಕ್ತರ ಪರಿಷ್ಕೃತ ಸುತ್ತೋಲೆಯಲ್ಲಿ ಕೃಷಿ ಭೂಮಿಯಿಂದ ಕೃಷಿಯೇತರ ಭೂಮಿಗೆ ಭೂಪರಿವರ್ತನೆಯಾದ ಸ್ವತ್ತುಗಳಿಗೆ ಈ ಹಿಂದಿನಂತೆ ಎ ಖಾತೆ ಅಥವಾ ಬಿ ಖಾತಾ ವಹಿಗೆ ದಾಖಲಿಸುವಂತಿಲ್ಲ. ಸಕ್ಷಮ ಯೋಜನಾ ಪ್ರಾಧಿಕಾರದ ಅನುಮೋದನೆಯ ನಂತರವಷ್ಟೇ ಎ ಖಾತೆ ಅಥವಾ ಬಿ ಖಾತಾ ವಹಿಯಲ್ಲಿ ದಾಖಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬಿಬಿಎಂಪಿಯಲ್ಲಿ ಈಗಾಗಲೇ ಎ ಖಾತೆಯ ಸ್ವತ್ತುಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಆನುಮೋದನೆ ಪಡೆದು, ಬಿಬಿಎಂಪಿಯಿಂದ ಸ್ವಾಧೀನ ಪತ್ರ (OC) ಪಡೆದ ಏಕ ಘಟಕ ಅಥವಾ ಬಹು ಘಟಕದಲ್ಲಿನ ಪ್ರತಿ ಘಟಕಗಳನ್ನು ಎ ರಿಜಿಸ್ಟರ್ ನಲ್ಲಿ ದಾಖಲಿಸಿ ಎ ಖಾತಾ ಮಾಡಬಹುದು. ಆದರೆ 2024ರ ಸೆ.29ಕ್ಕಿಂತ ಮುಂಚೆ ಬಿಡಿಎ ಅನುಮೋದನೆ ಪಡೆಯದೆ ಎ ಅಥವಾ ಬಿ ಖಾತೆಯಲ್ಲಿನ ಸ್ವತ್ತುಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಬೆಸ್ಕಾಂ ಹಾಗೂ ಬಿಡ್ಲ್ಯುಎಸ್ ಎಸ್ ಬಿಯಿಂದ ವಿದ್ಯುತ್ ಹಾಗೂ ನೀರು ಸಂಪರ್ಕ ಪಡೆದ ಏಕ ಘಟಕ ಅಥವಾ ಬಹು ಘಟಕದ ಕಟ್ಟಡಗಳಿಗೆ ಬಿ ಖಾತಾ ನೀಡಬಹುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.