ಬೆಂಗಳೂರು, ಜ.08 www.bengaluruwire.com : ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಕಳೆದ ಎರಡೂವರೆ ದಶಕಗಳಿಂದ ಅರಣ್ಯವಾಸಿಗಳು ಹಾಗೂ ದಲಿತರ ಸಂವಿಧಾನ ಬದ್ದ ಹಕ್ಕುಗಳಿಗಾಗಿ, ಭೂ ಮಾಲೀಕರ ಶೋಷಣೆ ವಿರುದ್ಧ ಸಮಾನತೆಗೆ ಶಸ್ತ್ರಾಸ್ತ್ರಗಳ ಮೂಲಕ ಹೋರಾಟ ನಡೆಸುವ ಮೂಲಕ ಭೂಗತರಾಗಿದ್ದ ಆರು ಮಂದಿ ನಕ್ಸಲೀಯರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾದರು.
ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ. ಮತ್ತು ರಾಯಚೂರಿನ ಮಾರಪ್ಪ ಅರೋಲಿ ಶರಣಾಗತಿ ಆಗಿರುವ ನಕ್ಸಲರಾಗಿದ್ದಾರೆ. ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಒಳಗೊಂಡ ಮಾವೋವಾದಿ ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾದರು. ಇದರಿಂದಾಗಿ ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂತಹದೊಂದು ಘಟನೆಗೆ ಸಿಎಂ ಕಚೇರಿ ಸಾಕ್ಷಿಯಾಯಿತು. ಸಿಎಂ ಸಿದ್ದರಾಮಯ್ಯ ಶರಣಾದ ಆರು ನಕ್ಸಲೀಯರಿಗೆ ಗುಲಾಬಿ ಹೂವ ಹಾಗೂ ಸಂವಿಧಾನ ಪುಸ್ತಕ ನೀಡಿದರು.
ದಶಕಗಳ ಕಾಲ ಮೂರು ರಾಜ್ಯಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಈ ನಕ್ಸಲೀಯರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಪೊಲೀಸ್ ಮಹಾ ನಿದೇರ್ಶಕ ಅಲೋಕ್ ಮೋಹನ್, ಎಡಿಜಿಪಿ ಹೇಮಂತ್ ನಿಂಬಾಳ್ಕರ್, ನಕ್ಸಲೀಯರ ಸಂಬಂಧಿಕರು ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ಸಿ.ಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಬುಧವಾರ ಶರಣಾಗುವುದರೊಂದಿಗೆ ನಕ್ಸಲೀಯರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದರೊಂದಿಗೆ ತಾವು ಕೂಡ ಸಮಾಜದಲ್ಲಿ ಸಾಮಾನ್ಯರಂತೆ ಜೀವನ ಸಾಧಿಸುತ್ತೇವೆ ಎಂಬ ಸಂದೇಶವನ್ನು ಸಾರಿದರು. ರಾಜ್ಯದ ಮುಖ್ಯಮಂತ್ರಿಯೊಬ್ಬರ ಸಮ್ಮುಖದಲ್ಲಿ ನಕ್ಸಲೀಯರು ಹಿಂಸೆ ಮಾರ್ಗವನ್ನು ತೊರೆದು, ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಶರಣಾಗಿದ್ದು ಇದೇ ಮೊದಲು ಎನ್ನಲಾಗಿದೆ.
ಶರಣಾದ ಇಬ್ಬರು ನಕ್ಸಲೀಯರಲ್ಲೇ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದರು. ಇವರ ಪತ್ತೆಗಾಗಿ ಕರ್ನಾಟಕ ಮತ್ತು ಕೇರಳ ಸರ್ಕಾರ ತಲಾ 5 ಹಾಗೂ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾಗುತ್ತಿದ್ದಂತೆ ಪೊಲೀಸರು ಆರು ಮಂದಿ ನಕ್ಸಲೀಯರನ್ನು ವಶಕ್ಕೆ ಪಡೆದು ನಂತರ ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಎಲ್ಲರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶಿಸಿದ್ದು, ಶರಣಾಗಿರುವ ನಕ್ಸಲೀಯರನ್ನು ಸದ್ಯ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಯಿತು.
ಇದಕ್ಕೂ ಮುನ್ನ ಬೆಳಗ್ಗೆ ಶೃಂಗೇರಿಯಿಂದ ಹೊರಟ ನಕ್ಸಲರ ತಂಡ ಕಣತಿ ಸಮೀಪ ಬರುತ್ತಿದ್ದಂತೆ ಬೆಂಗಳೂರಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅವರ ಸಮ್ಮುಖದಲ್ಲೇ ಶರಣಾಗತಿ ಆಗಬೇಕು ಎಂಬ ಸಂದೇಶದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಯಿತು. ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಆಶ್ರಯದಲ್ಲಿ ಆರು ಮಂದಿ ನಕ್ಸಲರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಶರಣಾಗುತ್ತಾರೆ ಎಂದು ಮೊದಲು ಹೇಳಲಾಗಿತ್ತು.
ಆದರೆ ಸರ್ಕಾರದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಮುಂದೆ ಶರಣಾಗತಿ ಪ್ರಕ್ರಿಯೆ ನಡೆಯಬೇಕೆಂಬ ಉದ್ದೇಶದಿಂದ ಅಂತಿಮ ಕ್ಷಣದಲ್ಲಿ ಶರಣಾಗತಿ ಪ್ರಕ್ರಿಯೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆಯಾಗಿದೆ. ಆನಂತರವಷ್ಟೇ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಯಿತು.
25 ವರ್ಷಗಳಿಂದ ಮಾವೋವಾದಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಇವರಲ್ಲಿ ಬಹುತೇಕರಿಗೆ ವಯೋ ಸಹಜ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ಇತ್ತೀಚೆಗೆ ಮಲೆನಾಡು ಭಾಗದಲ್ಲಿ ನಕ್ಸಲರ ಹೆಜ್ಜೆಗುರುತುಗಳು ಕಾಣಿಸಿಕೊಂಡ ಕಾರಣಕ್ಕೆ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ವಿಕ್ರಂಗೌಡ ಇತ್ತೀಚೆಗೆ ಎನ್‌ಕೌಂಟರ್‌ಗೆ ತುತ್ತಾಗಿ ಸಾವನಪ್ಪಿದ್ದ.
ವಿಕ್ರಂಗೌಡ ಬಲಿಯಾದ ನಂತರ ಉಳಿದ ನಕ್ಸಲರನ್ನು ಶರಣಾಗಿಸುವ ಪ್ರಕ್ರಿಯೆಗೆ ವೇಗ ಸಿಕ್ಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರು ನಕ್ಸಲರಿಗೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದ್ದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಸೇರಿದಂತೆ ಅಧಿಕಾರಿಗಳು, ಶರಣಾಗತಿ/ಪುನರ್ವಸತಿ ಸಮಿತಿ, ಶಾಂತಿಗಾಗಿ ನಾಗರಿಕರ ವೇದಿಕೆ ಸದಸ್ಯರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ, ಕೇರಳ, ತಮಿಳುನಾಡಿನ 6 ಜನ ಸಮಾಜದ ಮುಖ್ಯವಾಹಿನಿಗೆ ಬರಲು ಒಪ್ಪಿದ್ದೇವೆ. ನಮ್ಮ ಕೊನೆ ಉಸಿರು ಇರುವವರೆಗೂ ಜನಪರ ಹೋರಾಟಕ್ಕೆ ಹಿಂಜರಿಯುವುದಿಲ್ಲ. ಶರಣಾಗತಿ/ಪುನರ್ವಸತಿ ಸಮಿತಿ, ಶಾಂತಿಗಾಗಿ ನಾಗರಿಕರ ವೇದಿಕೆಯವರು ಸರಕಾರ ನೀಡಿದ ಎಲ್ಲ ಭರವಸೆಗಳನ್ನು ಅರ್ಥ ಮಾಡಿಸಿದ್ದಾರೆ. ಸರ್ಕಾರ ಕೂಡ ನಮ್ಮ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದು ಮುಂಡಗಾರು ಲತಾ (ವಿಡಿಯೊ ಸಂದೇಶ) ಹೇಳಿದ್ದಾರೆ.
ಬೆಳಗ್ಗೆ 7 ಗಂಟೆಗೆ ಶೃಂಗೇರಿಯಿಂದ ನಕ್ಸಲೀಯರು ಹಾಗೂ ಸಮಿತಿಯ ಕೆಲವು ಸದಸ್ಯರನ್ನು ಮುಖ್ಯಮಂತ್ರಿಗಳ ಕಚೇರಿಗೆ ಒದಗಿಸಿದ್ದ ವಿಶೇಷ ವಾಹನ ಹಾಗೂ ಭದ್ರತೆಯೊಂದಿಗೆ ಕೊಪ್ಪ, ಎನ್.ಆರ್.ಪುರ, ಬೇಲೂರು, ಹಾಸನದ ಮೂಲಕ ಬೆಂಗಳೂರಿಗೆ ಕರೆದು ತರಲಾಗಿತ್ತು. ನಂತರ ಕೃಷ್ಣಾದಲ್ಲಿ ನಡೆದ ಶರಣಾಗತಿ ಕಾರ್ಯಕ್ರಮದಲ್ಲಿ ನಕ್ಸಲೀಯರು ಶರಣಾಗುವ ಮೂಲಕ ಹಿಂಸಾ ಮಾರ್ಗ ತೊರೆದು ಅಹಿಂಸಾ ಮಾರ್ಗದ ಮೂಲಕವೇ ಹೋರಾಟ ಮಾಡುತ್ತೇವೆ ಎಂದು ಶಪಥ ಮಾಡಿದರು.
ಶರಣಾಗಲು ಬಾಕಿಯಿರುವ ಏಕೈಕ ನಕ್ಸಲೀಯ :
ಶೃಂಗೇರಿ ತಾಲೂಕು ಕಿಗ್ಗಾ ಮೂಲದ ರವಿ ಎಂಬಾತ ಮಾತ್ರ ಶರಣಾಗುವುದು ಬಾಕಿ ಇದ್ದು, ಆ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಹೊಸ ಪೀಳಿಗೆ ಮಾವೋವಾದಿ ಚಳವಳಿಗೆ ಧುಮುಕದೇ ಇದ್ದರೆ ಅಥವಾ ಬೇರೆಬೇರೆ ರಾಜ್ಯಗಳ ನಕ್ಸಲೀಯರು ಮಲೆನಾಡು ಭಾಗಕ್ಕೆ ಕಾಲಿಡದೇ ಇದ್ದರೆ ಕರ್ನಾಟಕ ಬಹುತೇಕ ನಕ್ಸಲ್ ಮುಕ್ತವಾಗುವ ಅವಕಾಶವಿದೆ.