ಬೆಂಗಳೂರು, ಜ.07 www.bengaluruwire.com : ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಫೆಬ್ರವರಿ 10 ರಿಂದ 14ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದ್ದು, ಈ ಬಾರಿಯ ವೈಮಾನಿಕ ಪ್ರದರ್ಶನ ‘ಶತಕೋಟಿ ಅವಕಾಶಗಳ ಪಥ’ (The Runway to a Billion Opportunities)ಎನ್ನುವ ಧ್ಯೇಯವನ್ನು ಹೊಂದಿದೆ.
ಏರೋ ಇಂಡಿಯಾ 2025 – ವಾಯು ಶಕ್ತಿಯ ಮಹಾ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. ಬೆಂಗಳೂರಲ್ಲಿ ಮುಂಬರುವ ಫೆಬ್ರವರಿ 10ರಿಂದ 14ರವರೆಗೆ ಏರೋ ಇಂಡಿಯಾ ಏರ್ ಶೋ ನಡೆಯಲಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಕಾರ್ಯಕ್ರಮ ಆರಂಭವಾಗುವ ಫೆ.10 ರಿಂದ ಮೊದಲ ಮೂರು ದಿನಗಳು ವ್ಯವಹಾರದ ದಿನಗಳಾಗಿರುತ್ತದೆ. ಫೆ.13 ಹಾಗೂ 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಅತ್ಯಾಧುನಿಕ ತಂತ್ರಜ್ಞಾನ, ವಾಯುಪಡೆ ಶಕ್ತಿ ಮತ್ತು ನಮ್ಮ ರಾಷ್ಟ್ರದ ಭದ್ರತಾ ಸಾಮರ್ಥ್ಯವನ್ನು ಪ್ರದರ್ಶಿಸುವ ವಿಸ್ಮಯಕಾರಿ ಮತ್ತು ಜಾಗತಿಕವಾಗಿ ಎಲ್ಲರನ್ನು ಆಕರ್ಷಿಸುವ ಏರ್ ಶೋಗೆ ಸಾಕ್ಷಿಯಾಗಿ! ಈ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ರಕ್ಷಣೆಯಲ್ಲಿ ಭಾರತ ಎಷ್ಟು ಮುಂದುವರಿದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ವಿಜ್ಞಾನ ಮತ್ತು ಶಾಂತಿಯ ಈ ಭವ್ಯ ಪ್ರದರ್ಶನವನ್ನು ತಪ್ಪಿಸಿಕೊಳ್ಳಬೇಡಿ ಎಂಬುದಾಗಿ ಹೇಳಿದೆ.
ಲೋಹದ ಹಕ್ಕಿದ ಪ್ರದರ್ಶನ ಒಂದೆಡೆಯಾದರೆ ರಕ್ಷಣಾ ಸಚಿವರ ಜೊತೆ ಮಿತ್ರ ರಾಷ್ಟ್ರಗಳೊಂದಿಗೆ ರಕ್ಷಣಾ ಸಹಭಾಗಿತ್ವದ ಮಾತುಕತೆ, ವಿವಿಧ ಶಸ್ತ್ರಾಸ್ತ್ರ, ಯುದ್ಧೋಪಕರಣ ಕಂಪನಿಗಳ ಸಿಇಒಗಳ ಜೊತೆ ದುಂಡುಮೇಜಿನ ಸಭೆ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಭಾರತದಲ್ಲೇ ರಕ್ಷಣಾ ಸಲಕರಣೆಗಳ ಉತ್ಪಾದನೆಗೆ ವೇದಿಕೆ ಸಿಗುವ ಹಲವು ಅವಕಾಶಗಳು ಏರ್ ಶೋ ನಲ್ಲಿ ತೆರೆದುಕೊಳ್ಳುತ್ತದೆ.
ಈ ಬಾರಿ ಮಂಥನ್ ಸ್ಟಾರ್ಟಪ್ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾರತೀಯ ನವೋದ್ಯಮಗಳ ಪ್ರಚಾರವೇ ಏರೊ ಇಂಡಿಯಾ-2025 ಪ್ರಮುಖ ಉದ್ದೇಶವಾಗಿದೆ. ಈ ನವೋದ್ಯಮಗಳು ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ತಂತ್ರಜ್ಞಾನ ಅಥವಾ ಉತ್ಪನ್ನಗಳನ್ನು ವಿಶೇಷ ಐಡೆಕ್ಸ್ ಪೆವಿಲಿಯನ್ ನಲ್ಲಿ ಪ್ರದರ್ಶಿಲಾಗುತ್ತದೆ.
1996ರಿಂದ ಬೆಂಗಳೂರಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿರುವ ಏರೋ ಇಂಡಿಯಾ 14 ಯಶಸ್ವಿ ಆವೃತ್ತಿಗಳೊಂದಿಗೆ ಈಗಾಗಲೇ ಜಾಗತಿಕವಾಗಿ ಒಂದು ಪ್ರಮುಖ ವೈಮಾನಿಕ ಪ್ರದರ್ಶನವಾಗಿ ತನ್ನದೇ ಆದ ಸ್ಥಾನ ಗಳಿಸಿದೆ. 2023ನೇ ಇಸವಿಯಲ್ಲಿ ನಡೆದ ಆವೃತ್ತಿಯಲ್ಲಿ ಹಲವು ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿತ್ತು. ಆಗ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಏಳು ಲಕ್ಷಕ್ಕೂ ಅಧಿಕ ವೀಕ್ಷಕಕರು, 98 ದೇಶಗಳ ಗಣ್ಯರು ಮತ್ತು ಉದ್ಯಮಿಗಳು, ಹೂಡಿಕೆದಾರರು, ಸ್ಟಾರ್ಟ್-ಅಪ್‌ಗಳು ಮತ್ತು ಎಂಎಸ್ ಎಂಇಗಳು ಸೇರಿ 809ಕ್ಕೂ ಅಧಿಕ ಪ್ರದರ್ಶಕರನ್ನು ಆಕರ್ಷಿಸಿತ್ತು.
ಆಗ 201 ಒಡಂಬಡಿಕೆಗಳಿಗೆ ಸಹಿ, ಪ್ರಮುಖ ಘೋಷಣೆಗಳು, ಉತ್ಪನ್ನ ಬಿಡುಗಡೆಗಳು ಮತ್ತು 75,000 ಕೋಟಿ ರೂ.ಗೂ ಅಧಿಕ ಮೌಲ್ಯದ ತಂತ್ರಜ್ಞಾನ ವರ್ಗಾವಣೆ ಸೇರಿದಂತೆ 250 ಪಾಲುದಾರಿಕೆಗಳಿಗೆ ಸಾಕ್ಷಿಯಾಯಿತು. 2025ರ ಆವೃತ್ತಿಯು ಈ ಸಾಧನೆಗಳನ್ನು ಮೀರಿ ಹೊಸ ಮೈಲಿಗಲ್ಲು ಸ್ಥಾಪಿಸುವ ಗುರಿ ಹೊಂದಿದೆ ಮತ್ತು ವೈಮಾನಿಕ ಪ್ರದರ್ಶನದ ವ್ಯಾಪ್ತಿ ಮತ್ತು ವೈಭವ ಮತ್ತಷ್ಟು ಹೆಚ್ಚಾಗಲಿದೆ ಎಂಬ ಭರವಸೆಯಿದೆ ಎಂದು ರಕ್ಷಣಾ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನೂ ಈ ಏರ್ ಶೋ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರು https://www.aeroindia.gov.in/visitor-registration ಲಿಂಕ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.