ಬೆಂಗಳೂರು, ಜ.07 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಏಳು ಇಡಿ ಅಧಿಕಾರಿಗಳ ತಂಡ ಬೆಳಗ್ಗೆ 11 ಗಂಟೆಗೆ ಕೇಂದ್ರ ಕಚೇರಿಯಲ್ಲಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರ ಕಚೇರಿಯಲ್ಲಿ ಶೋಧ ಕೈಗೊಂಡಿದ್ದವು. 2016ರಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್‌ವೆಲ್‌ನಲ್ಲಿ 900 ಕೋಟಿ ಹಗರಣ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಈ ದಾಳಿ ನಡೆಸಿದೆ. ಇದೇ ಅವಧಿಯಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಎಇ, ಎಇಇಗಳನ್ನೂ ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಈ ಸಂಬಂಧ ಜಾರಿ ನಿರ್ದೇಶನಾಲಯದಲ್ಲಿ ದೂರು ಕೂಡ ದಾಖಲಿಸಿದ್ದು, ಅದರ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್, “ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಮುಖವಾಗಿ ಬಿಬಿಎಂಪಿಯ ವ್ಯಾಪ್ತಿಯಲ್ಲಿ 2016 ರಿಂದ 2019ರ ಅವಧಿಯಲ್ಲಿ ನಡೆದ ಬೋರ್ ವೆಲ್ ಕೊರೆಸುವಿಕೆ ಹಾಗೂ ಆರ್ ಒ ಪ್ಲಾಂಟ್ ನಿರ್ಮಾಣ ಕಾಮಗಾರಿ ಸೇರಿದಂತೆ ಬಿಬಿಎಂಪಿಯ ವಿವಿಧ ಇಲಾಖೆಗಳಲ್ಲಿನ ಕಾಮಗಾರಿಗೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ಮುಖ್ಯ ಲೆಕ್ಕಾಧಿಕಾರಿ ಬೀನಾ, ಕೇಂದ್ರ ಯೋಜನಾ ವಿಭಾಗ ಚೀಫ್ ಎಂಜಿನಿಯರ್ ಲೋಕೇಶ್ ಹಾಗೂ ತಮ್ಮ ಬಳಿ ಅಧಿಕಾರಿಗಳು ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ”
“ಕಳೆದ ಎರಡು ವರ್ಷಗಳಿಂದಲೂ ಬೋರ್ ವೆಲ್ ಕಾಮಗಾರಿ ದೂರಿನ ಸಂಬಂಧ ನಡೆಯುತ್ತಿರುವ ಇಡಿ ತನಿಖೆಗೆ ಬಿಬಿಎಂಪಿಯಿಂದ ಹಲವು ದಾಖಲೆಗಳನ್ನು, ಮಾಹಿತಿಗಳನ್ನು ಪಾಲಿಕೆಯಿಂದ ಒದಗಿಸಿದ್ದೇವೆ. ನಾವು ಕೊಟ್ಟಿರುವ ದಾಖಲೆಗಳು ಸಮರ್ಪಕವಾಗಿದೆಯಾ ಎಂದು ಇಡಿ ಅಧಿಕಾರಿಗಳು ಖುದ್ದಾಗಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಹಲವು ವಿಭಾಗಗಳ ಮುಖ್ಯಸ್ಥರನ್ನು ಕರೆಸಿ ಇಡಿ ಅಧಿಕಾರಿಗಳು ಪ್ರಾಥಮಿಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿನ ಒಂದು ಕೊಠಡಿಯನ್ನು ಈ ಪ್ರಕರಣದ ವಿಚಾರಣೆಗಾಗಿ ಇಡಿಗೆ ಕೊಠಡಿ ವ್ಯವಸ್ಥೆ ಕಲ್ಪಿಸಿದ್ದೇವೆ” ಎಂದು ಮಾಧ್ಯಮಗಳಿಗೆ ತಿಳಿಸಿದರು.
ಕೊಳವೆ ಬಾವಿಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಹೆಸರಿನಲ್ಲಿ 400 ಕೋಟಿಗಳಿಗೂ ಹೆಚ್ಚು ಹಣ ಲೂಟಿ ಮಾಡಿರುವ ಹಗರಣ ನಡೆದಿದೆ. ರಾಜರಾಜೇಶ್ವರಿ ನಗರ, ಯಶವಂತಪುರ, ಬೆಂಗಳೂರು ದಕ್ಷಿಣ, ಕೆ. ಆರ್. ಪುರ, ಬ್ಯಾಟರಾಯನಪುರ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಲೂಟಿ ಮಾಡಲಾಗಿದೆ. ಕೊಳವೆ ಬಾವಿಗಳು ಮತ್ತು ಆರ್ ಒ ಘಟಕಗಳ ಹೆಸರಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಶೇ.80 ಕ್ಕೂ ಹೆಚ್ಚು ಅನುದಾನವನ್ನು ಲೂಟಿ ಮಾಡಲಾಗಿದೆ. ಕೇವಲ ಶೇ. 20 ಕ್ಕೂ ಕಡಿಮೆಯಷ್ಟು ಕಾರ್ಯಗಳನ್ನು ಮಾತ್ರವೇ ಮಾಡಿರುವುದು ಪರಿಶೀಲನಾ ಕಾರ್ಯದಲ್ಲಿ ಬಹಿರಂಗವಾಗಿದೆ ಎಂದು ಈ ಹಿಂದೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ದಾಖಲೆ ಸಮೇತ ಗಂಭೀರ ಆರೋಪ ಮಾಡಿದ್ದರು.
ಹೊಸ 05 ವಲಯಗಳ 66 ವಾರ್ಡ್ ಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, 5 ವಲಯಗಳ ಎಲ್ಲ ಮುಖ್ಯ ಅಭಿಯಂತರರು, ಜಂಟಿ ಆಯುಕ್ತರು ಮತ್ತು ಕಾರ್ಯಪಾಲಕ ಅಭಿಯಂತರರುಗಳ ವಿರುದ್ಧ ಈ ಹಿಂದೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಇಡಿ ಈ ಪ್ರಕರಣ ಸಂಬಂಧ 2022ರಲ್ಲಿ ಎನ್.ಆರ್.ರಮೇಶ್ ಅವರಿಗೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಸಮನ್ಸ್ ಕೂಡ ಜಾರಿ ಮಾಡಿತ್ತು.
ಪಾಲಿಕೆ ವೈಟ್ ಟಾಪಿಂಗ್ ರಸ್ತೆ ಅಕ್ರಮದ ಬಗ್ಗೆಯೂ ವಿಚಾರಣೆ :
ಬೋರ್ ವೆಲ್ ಕಾಮಗಾರಿ ಅಕ್ರಮದ ಜೊತೆಗೆ ವೈಟ್ ಟಾಪಿಂಗ್ ನಲ್ಲಿ ಬಹುಕೋಟಿ ಹಗರಣದ ಬಗ್ಗೆಯೂ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಈ ಎರಡು ಕಾಮಗಾರಿಗಳ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. 2018-19ರಲ್ಲಿ ಬೆಂಗಳೂರಲ್ಲಿ ಕೋಟ್ಯಾಂತರ ರೂ. ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿದ್ದ ಬಗ್ಗೆ ಗಂಭೀರ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ 2019ರಲ್ಲಿ ಬೆಂಗಳೂರು ಬಿಜೆಪಿ ಶಾಸಕರ ನಿಯೋಗ ಲೋಕಾಯುಕ್ತಕ್ಕೆ ದೂರು ನೀಡಿತ್ತು.
ಮೊದಲ ಹಂತದಲ್ಲಿ 93.37 ಕಿ.ಮೀ ಗೆ 1147.76 ಕೋಟಿ ರೂ. ವೆಚ್ಚ. ಎರಡನೇ ಹಂತದಲ್ಲಿ 62.80 ಕಿ.ಮೀ ಗೆ 758.56 ಕೋಟಿ ರೂ. ವೆಚ್ಚ ಹಾಗೂ ಮೂರನೇ ಹಂತದಲ್ಲಿ 123 ಕಿ.ಮೀ ಗೆ 1139 ಕೋಟಿ ರೂ. ಹಣವನ್ನು ಬಿಬಿಎಂಪಿ ವೆಚ್ಚ ಮಾಡಿತ್ತು. ಒಟ್ಟು 279 ಕಿ.ಮೀ ಉದ್ದದ ವೈಟ್ ಟಾಪಿಂಗ್ ಹಾಗೂ ರಸ್ತೆ ದುರಸ್ಥಿಗೆ ಪಾಲಿಕೆ ಬರೋಬ್ಬರಿ 3046 ಕೋಟಿ ರೂ. ವೆಚ್ಚ ಮಾಡಿತ್ತು. ಪ್ರತಿ ಕಿಲೋ ಮೀಟರ್ ಗೆ 12 ರಿಂದ 18 ಕೋಟಿವರೆಗೆ ವೆಚ್ಚ ಮಾಡಿರುವುದಾಗಿ ಪಾಲಿಕೆ ಲೆಕ್ಕ ನೀಡಿತ್ತು.
ಈ ಅವಧಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಹೈದರಾಬಾದ್ ಮೂಲದ ಮಧುಕಾನ್ ಕಂಪೆನಿಗೆ ಪಾಲಿಕೆ ಗುತ್ತಿಗೆ ನೀಡಿತ್ತು. ದೇಶದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಸ್ಥಳೀಯ ಪಾಲಿಕೆಗೆಳ ಜೊತೆ ಗುತ್ತಿಗೆಹೊಂದಿರುವ ಮಧುಕಾನ್ ಸಂಸ್ಥೆಯು 2022ರಲ್ಲಿ ಗ್ರೇಟರ್ ಡೆಲ್ಲಿ ಅಥಾರಿಟಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಅಕ್ರಮ ಎಸಗಿದ ಆರೋಪ ಸಂಬಂಧ ಮಧುಕಾನ್ ಹಾಗೂ ಡೆಲ್ಲಿ ಅಥಾರಿಟಿ ಮೇಲೆ ದಾಳಿ ಇಡಿ ದಾಳಿ ಮಾಡಿದ ವೇಳೆ ಅಂದಾಜು 93 ಕೋಟಿ ರೂ.ನಷ್ಟು ಬೃಹತ್ ಮೊತ್ತದ ಹಗರಣ ಬೆಳಕಿಗೆ ಬಂದಿತ್ತು ಎಂದು ವರದಿಯಾಗಿತ್ತು. ಇದೀಗ ಇದೇ ಮಾದರಿಯಲ್ಲಿ ಬಿಬಿಎಂಪಿಯಲ್ಲೂ ಅಕ್ರಮ ನಡೆದಿರುವ ಶಂಕೆ ಹಿನ್ನಲೆಯಲ್ಲಿ ಇಡಿ ದಾಳಿ ಮಾಡಿದೆ ಎನ್ನಲಾಗಿದೆ.