ಬೆಂಗಳೂರು, ಜ.05 www.bengaluruwire.com : ಉದ್ಯಾನ ನಗರಿಯು ಸೃಜನಾತ್ಕಕ ಕಲೆಗಳಿಗೆ ವೇದಿಕೆಯಾಗಿರುವ 22ನೇ ಆವೃತ್ತಿಯ ಚಿತ್ರಸಂತೆ (Chitra Santhe)ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದ್ದಾರೆ.
ಬ್ಯಾಟರಿ ಕಾರಿನಲ್ಲಿ ಚಿತ್ರಪ್ರದರ್ಶನ ಸ್ಥಳದಲ್ಲಿ ತೆರಳಿ ವಿವಿಧ ಕಲಾವಿದರ ವರ್ಣ ಚಿತ್ರಗಳನ್ನು ಕಂಡು ಕಲಾವಿದರನ್ನು ಹುರಿದುಂಬಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ 8 ಗಂಟೆಯಿಂದಲೇ ಕುಮಾರಕೃಪ ರಸ್ತೆಯ ಉದ್ದಗಲ, ಸುತ್ತಮುತ್ತಲ ರಸ್ತೆಯಿಡೀ ವೇವಿಧ್ಯಮಯ, ಮನಮೋಹಕ ಚಿತ್ರ ಪ್ರದರ್ಶನ ಆರಂಭವಾಗಿತ್ತು. ಇದು ಸಂಜೆ 7 ಗಂಟೆಯವರೆಗೆ ಬಣ್ಣದ ಲೋಕ ಬೆಂಗಳೂರಿಗರಿಗೆ ತೆರೆದಿರುತ್ತೆ. ಚಿತ್ರಸಂತೆಯ ಕಾರಣ ಕಯಮಾರಕೃಪ ಹಾಗೂ ಅಕ್ಕಪಕ್ಕದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಈ ಬಾರಿಯ ಚಿತ್ರಸಂತೆಯಲ್ಲಿ 22 ರಾಜ್ಯಗಳ 1550 ಕಲಾವಿದರು ಸುಮಾರು 1450 ಮಳಿಗೆಗಳಲ್ಲಿ 40,000 ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ರಾಜ್ಯದಲ್ಲಿನ ಪ್ರಮುಖ ಚಿತ್ರಕಲಾ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಕಲಾಸಕ್ತರು, ಕಲಾವಿದರು, ಗಣ್ಯರೆಲ್ಲರೂ ಈ ಕಲಾತ್ಮಕತೆಯ ಹಬ್ಬದಲ್ಲಿ ಪಾಲ್ಗೊಂಡು ಅಪರೂಪದ ಪೈಂಟಿಂಗ್, ಕ್ಯಾನ್ವಾಸ್ ಮತ್ತಿತರ ರೀತಿಯ ಚಿತ್ರಕಲೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಲವರು ಮುಗಿಬಿದ್ದು ವರ್ಣಚಿತ್ರಗಳನ್ನು ಖರೀದಿಸುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.
ಸಂದರ್ಶಕರು ಸ್ಟಾಲ್‌ಗಳ ಮೂಲಕ ಹಾದುಹೋಗುವಾಗ, ಅವರು ಸಾಂಪ್ರದಾಯಿಕ ವರ್ಣಚಿತ್ರಗಳಿಂದ ಆಧುನಿಕ ಶಿಲ್ಪಗಳವರೆಗೆ ಮತ್ತು ನವೀನ ಹಾಗೂ ವೈವಿಧ್ಯಮಯ ಕಲಾ ಪ್ರಕಾರಗಳನ್ನು ಕಂಡು ಸಂತಸಗೊಳ್ಳುತ್ತಿದ್ದಾರೆ. ಈ ಉತ್ಸವವು ಕಲಾವಿದರಿಗೆ ತಮ್ಮ ಸೃಜನಾತ್ಮಕ ಕಲೆಯನ್ನು ಪ್ರದರ್ಶಿಸಲು, ಸಹವರ್ತಿ ಕಲಾ ಉತ್ಸಾಹಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಹೊಸ ಪೀಳಿಗೆಯ ಸೃಜನಶೀಲರನ್ನು ಪ್ರೇರೇಪಿಸಲು ಒಂದು ಅನನ್ಯ ವೇದಿಕೆಯನ್ನು ಒದಗಿಸುವ ಕಾರ್ಯಕ್ರಮವಾಗಿದೆ.
ಕಲಾತ್ಮಕ ಅಭಿವ್ಯಕ್ತಿಗೆ ಕೇಂದ್ರ :
ಚಿತ್ರಸಂತೆಯ ಆಯೋಜಕರಾದ ಕರ್ನಾಟಕ ಚಿತ್ರಕಲಾ ಪರಿಷತ್ತು ಉತ್ಸವದ ಯಶಸ್ಸಿಗೆ ಪ್ರೇರಕ ಶಕ್ತಿಯಾಗಿದೆ. 64 ವರ್ಷಗಳ ಪರಂಪರೆಯೊಂದಿಗೆ, ಪರಿಷತ್ತು ತನ್ನನ್ನು ಒಂದು ಪ್ರಧಾನ ಲಲಿತಕಲಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯು ಕಲಾತ್ಮಕ ಅಭಿವ್ಯಕ್ತಿಯನ್ನು ಉತ್ತೇಜಿಸುತ್ತದೆ ಮತ್ತು ಸಾವಿರಾರು ಪ್ರತಿಭೆಗಳನ್ನು ಪೋಷಿಸುತ್ತಾ ಬಂದಿದೆ.
ಬೆಂಗಳೂರಿನ ಸಾಂಸ್ಕೃತಿಕ ಅವಿಭಾಜ್ಯ ಅಂಗವಾಗಿ ಚಿತ್ರಸಂತೆ ಹಬ್ಬವು ದಿನೇ ದಿನೇ ಜನಪ್ರಿಯತೆ ಹೊಂದುತ್ತಿರುವುದಂತೂ ಸ್ಪಷ್ಟವಾಗಿದೆ. ಕಲಾಭಿಮಾನಿಯಾಗಿರಲಿ ಅಥವಾ ವಿಶಿಷ್ಟವಾದ ಅನುಭವವನ್ನು ಹುಡುಕುತ್ತಿರುವವರಿಗೆ, ಚಿತ್ರಸಂತೆ 2025 ಮಿಸ್ ಮಾಡದೆ ಭೇಟಿ ನೀಡುವ ಅವಿಸ್ಮರಣೀಯ ಕಾರ್ಯಕ್ರಮವಾಗಿದೆ.