ಬೆಂಗಳೂರು, ಜ.04 www.bengaluruwire.com : ರಾಜಧಾನಿ ಬೆಂಗಳೂರಿನ ನಗರ ಯೋಜನೆಗೆ ದಿಕ್ಸೂಚಿಯಾಗಿರಬೇಕಾದ ಸ್ಥಳೀಯಾಡಳಿತ ಸಂಸ್ಥೆ ಬಿಬಿಎಂಪಿಯ ನಗರ ಯೋಜನೆ ವಿಭಾಗದಲ್ಲಿ ಪಾಲಿಕೆಯ 2020ರ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಸಾರ ಸಗಟಾಗಿ ಉಲ್ಲಂಘಿಸಿ, ಸಂಬಂಧವೇ ಇಲ್ಲದ ಅನ್ಯ ಇಲಾಖೆಗಳ ಎಂಜಿನಿಯರ್ ಗಳನ್ನು ನಗರ ಯೋಜನೆ ವಿಭಾಗಕ್ಕೆ ನಿಯೋಜಿಸುವ “ಡೆಪ್ಯುಟೇಷನ್ ದಂಧೆ” ಜೋರಾಗಿ ನಡೆಯುತ್ತಿರುವುದು ಬಹಿರಂಗವಾಗಿದೆ.
ಬಿಬಿಎಂಪಿಯ ಪ್ರಭಾವಯುತ ಹುದ್ದೆ ಹಾಗೂ ಹೆಚ್ಚು ಕಮಾಯಿ (ಲಂಚದ ಹಣ) ಬರುವ ವಿಭಾಗಗಳಲ್ಲಿ ನಗರ ಯೋಜನೆ ವಿಭಾಗವೂ ಪ್ರಮುಖವಾದದ್ದು. ಹೀಗಾಗಿ ಈ ವಿಭಾಗಕ್ಕೆ ಯಾವಾಗಲೂ ಸಖತ್ ಡಿಮ್ಯಾಂಡ್. ಅಧಿಕಾರಿದಲ್ಲಿರುವ ಜನಪ್ರತಿನಿಧಿಗಳು ಕೇಳಿದಷ್ಟು ಲಂಚದ ಹಣ ಕೊಟ್ಟು ಪಾಲಿಕೆಯ ಈ ಆಯಕಟ್ಟಿನ ವಿಭಾಗಕ್ಕೆ ಬರುವ ಎಂಜಿನಿಯರ್ ಗಳು ಕೆಲಸಕ್ಕಿಂತ ಪ್ರತಿದಿನ ಕಮಾಯಿಗೆ ಹೆಚ್ಚು ಗಮನ ಕೊಡುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಇದಕ್ಕೆ ಕಾನೂನು ರಚಿಸಿ ಜಾರಿ ಮಾಡುವ ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಕೂಡ ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇದರಿಂದ ಪಾಲಿಕೆಯಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳಿವೆ.
ಬಿಬಿಎಂಪಿಯ ನಗರ ಯೋಜನೆ ವಿಭಾಗದಲ್ಲಿ ಕೇಂದ್ರ ಕಚೇರಿ ಹಾಗೂ ಎಂಟು ವಲಯ ಕಚೇರಿಗಳಲ್ಲಿ ಮುಖ್ಯ ನಗರ ಯೋಜಕರು, ಹೆಚ್ಚುವರಿ ನಿರ್ದೇಶಕರು, ಜಂಟಿ ನಿರ್ದೇಶಕರು, ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಸಹಾಯಕ ಅಭಿಯಂತರರು ಹಾಗೂ ನಗರ ಯೋಜನೆ ಸೇರಿದಂತೆ ಒಟ್ಟು 93 ಮಂಜೂರಾತಿ ಹುದ್ದೆಗಳಿವೆ. 2020ರ ಮಾರ್ಚ್ 17 ರಂದು ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಹಾಗೂ 2021ರ ನವೆಂಬರ್ 12 ರಂದು ಹೊರಡಿಸಿದ ಸರ್ಕಾರದ ಆದೇಶದಲ್ಲಿ ಈ ಹುದ್ದೆಗಳನ್ನು ಕಡ್ಡಾಯವಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಮಾತ್ರ ನಿಯೋಜಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದೆ.
ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿಯ ಆಡಳಿತ ವಿಭಾಗ ಮುಲಾಜಿಲ್ಲದೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಹೊರತುಪಡಿಸಿ, ಇದಕ್ಕೆ ಸಂಬಂಧವೇ ಇಲ್ಲದ ಅನ್ಯ ಇಲಾಖೆಗಳ ಎಂಜಿನಿಯರ್ ಗಳನ್ನು ಮತ್ತು ಸ್ವತಃ ಬಿಬಿಎಂಪಿಯ ಎಂಜಿನಿಯರ್ ಗಳನ್ನು ಈ ಹುದ್ದೆಗಳಿಗೆ ನಿಯೋಜಿಸುತ್ತಾ ಸರ್ಕಾರ ತಾನೇ ಮಾಡಿದ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಇದಕ್ಕೆ ಬಿಬಿಎಂಪಿ ಹಿರಿಯ ಅಧಿಕಾರಿಗಳು ಸೊಪ್ಪು ಹಾಕುತ್ತಿದ್ದಾರೆ. ನಗರ ಯೋಜನೆ ವಿಭಾಗದಲ್ಲಿ ಪ್ರಸ್ತುತ 75 ಪೋಸ್ಟ್ ಗಳನ್ನು ತುಂಬಲಾಗಿದೆ. ಆದರೆ ಆ ಪೈಕಿ ಶೇ.62ರಷ್ಟು ಅಂದರೆ 47 ಹುದ್ದೆಗಳನ್ನು ನಿಯಮಬಾಹಿರವಾಗಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯು, ಲೋಕೋಪಯೋಗಿ ಇಲಾಖೆ, ಬಿಬಿಎಂಪಿ, ಜಲಸಂಪನ್ಮೂಲ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ಗಳನ್ನು ಈ ವಿಭಾಗಕ್ಕೆ ನಿಯೋಜನೆ ಮಾಡಿದೆ. ಇದರ ಸಂಪೂರ್ಣ ದಾಖಲೆ ಬೆಂಗಳೂರು ವೈರ್ ಬಳಿಯಿದೆ.
ಬೇರೆ ವಿಭಾಗದಲ್ಲಿ ವೇತನ, ಕೆಲಸ ಮಾತ್ರ ಟೌನ್ ಪ್ಲಾನಿಂಗ್!! :
ಅಸಲಿಗೆ ನಗರ ಯೋಜನಾ ವಿಭಾಗದ ಎಂಜಿನಿಯರ್ ಗಳು ಬಿಬಿಎಂಪಿ ಕಾಯ್ದೆಯಲ್ಲಿ ತಿಳಿಸಿರುವಂತೆ ನಗರವನ್ನು ಯೋಜನಾಬದ್ಧವಾಗಿ ರೂಪಿಸುವ ಕಾರ್ಯ ಮಾಡುವ ಬದಲಾಗಿ, ಕೇವಲ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುವ ಬೃಹತ್ ಕಟ್ಟಡಗಳ ನಕ್ಷೆಗಳ ಮಂಜೂರಾತಿ ಕಾರ್ಯಕ್ಕೆ ಮಾತ್ರ ಸೀಮಿತರಾಗಿದ್ದು, ಆ ಮೂಲಕ ಅಕ್ರಮ ಗಳಿಕೆಗೆ ದಾರಿ ಮಾಡಿಕೊಳ್ಳುವುದರಲ್ಲಿಯೇ ನಿರತರಾಗಿದ್ದಾರೆ ಎಂಬ ಬಗ್ಗೆ ಸಾಕಷ್ಟು ದೂರುಗಳಿವೆ. ಈ ಹಿಂದೆ ಕೇವಲ 54 ಮಂಜೂರಾತಿ ಹುದ್ದೆಗಳಿದ್ದಾಗಲೇ ಆ ಪ್ರಭಾವಿ ಹುದ್ದೆಗಾಗಿ ಸಾಕಷ್ಟು ಲಾಭಿ ನಡೆಯುತ್ತಿತ್ತು. ಆ ನಂತರ ಸರ್ಕಾರ ಮತ್ತೆ ಹೊಸದಾಗಿ 39 ಹುದ್ದೆಗಳನ್ನು ಸೃಜಿಸಿ ಒಟ್ಟಾರೆ 93 ಹುದ್ದೆಗಳನ್ನು ಸೃಜಿಸಿತು. ಆದರೆ ಪ್ರಸ್ತುತ 75 ಹುದ್ದೆಗಳನ್ನು ಭರ್ತಿಯಾಗಿದೆ. ಆದರೆ ಪಾಲಿಕೆಯ ಹಣಕಾಸು ವಿಭಾಗದ ಮೂಲಗಳ ಪ್ರಕಾರ ನಗರ ಯೋಜನೆ ಮತ್ತು ನಿಯಂತ್ರಣ ವಿಭಾಗದಿಂದ ಒಟ್ಟು 48 ಮಂದಿಗೆ ಮಾಸಿಕ ವೇತನ ನೀಡಲು 52.60 ವೆಚ್ಚವಾಗುತ್ತಿದ್ದು, ವಾರ್ಷಿಕ 6.79 ಕೋಟಿ ರೂ. ಗಳಾಗುತ್ತಿದೆ. ಆದರೆ ಉಳಿದ 27 ಹುದ್ದೆಗಳು ಬಿಬಿಎಂಪಿಯಲ್ಲಿನ ಬೇರೆ ವಿಭಾಗದಲ್ಲಿ ಸಂಬಳ ಪಡೆಯುತ್ತಾ ನಿಯಮಬಾಹಿರವಾಗಿ ಬಿಬಿಎಂಪಿ ನಗರ ಯೋಜನೆಯ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಿಬಿಎಂಪಿ ಡೆಪ್ಯುಟೇಶನ್ ನೀತಿ ಹೀಗೆ ಹೇಳುತ್ತೆ :
ಬಿಬಿಎಂಪಿ ಕಾಯ್ದೆ 2020ರ ಅನ್ವಯ ನಿಯೋಜನಾ ನೀತಿಯ ಮಾರ್ಗಸೂಚಿ ಕ್ರಮ ಸಂಖ್ಯೆ 5ರಲ್ಲಿ “ಸರ್ಕಾರದ ಆದೇಶದ ಸಂಖ್ಯೆ : ಡಿಪಿಆರ್ 16 ಎಸ್ ಡಿಇ 83, ದಿನಾಂಕ 16-07-1983 ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 50(3) ಹಾಗೂ 419(ಬಿ) ಪ್ರಕಾರ ಎಲ್ಲಾ ಅಧಿಕಾರಿ/ನೌಕರರ ನಿಯೋಜನಾ ಅವಧಿ ಗರಿಷ್ಠ ಐದು ವರ್ಷಗಳಿಗೆ (3 ವರ್ಷಗಳು + 2 ವರ್ಷಗಳು) ಮಾತ್ರ ಕಡ್ಡಾಯವಾಗಿ ಮಿತಿಗೊಳಿಸಲಾಗಿರುತ್ತದೆ” ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೆ ಸರ್ಕಾರದ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಲ್ಲೂ ನಿಯೋಜನಾ ನೀತಿ ಬಗ್ಗೆ ಹೇಳಲಾಗಿದೆ.
2013ರಿಂದಲೂ ಪಾಲಿಕೆಯಲ್ಲಿದ್ದಾರೆ ಅನ್ಯ ಇಲಾಖೆ ಎಂಜಿನಿಯರ್ಸ್ :
ಅನ್ಯ ಇಲಾಖೆಯಿಂದ 2013 ರಿಂದ 2015, 2017, 2018 ಹೀಗೆ ಬಹಳ ಹಿಂದೆಯೇ ಬಿಬಿಎಂಪಿಯ ನಗರ ಯೋಜನೆ ವಿಭಾಗಕ್ಕೆ ಬಂದವರೂ, ಈಗಲೂ ಇಲ್ಲೇ ಮುಂದುವರೆದಿದ್ದಾರೆ. ಕೆಲವೊಮ್ಮೆ ಕಣ್ಣೊರೆಸಲು ತಮ್ಮ ನಿಯೋಜನಾ ಅವಧಿ ಮುಗಿದ ನಂತರವೂ ಸರ್ಕಾರ ಮತ್ತು ಬಿಬಿಎಂಪಿ ಡೆಪ್ಯುಟೇಷನ್ ರೂಲ್ಸ್ ಉಲ್ಲಂಘಿಸಿ ಕಾಲ ಕಾಲಕ್ಕೆ ಹೀಗೆ ಮಾತೃ ಇಲಾಖೆಗೆ ಹೋಗಿ ಬೇರೆಡೆ ಕೆಲಸ ಮಾಡಿಯೋ ಅಥವಾ ಧೀರ್ಘ ರಜೆ ಹಾಕಿ ಪುನಃ ಪ್ರಭಾವಿ ಮಂತ್ರಿಗಳು, ಮುಖ್ಯಮಂತ್ರಿಗಳ ಶಿಫಾರಸ್ಸು ಮೇಲೆ ಬಿಬಿಎಂಪಿಗೆ ಎಡತಾಕುತ್ತಲೇ ಇದ್ದಾರೆ. ಇದಕ್ಕೆ ಬಿಬಿಎಂಪಿ ಆಡಳಿತ ಸೊಪ್ಪು ಹಾಕುತ್ತಿರುವುದು ನಾಚಿಕೆಗೇಡಿನ ವಿಷಯ.BBMP
ಒಂದೆಡೆ ಬೆಂಗಳೂರಿನಲ್ಲಿ 2025ನೇ ಇಸವಿ ಬಂದರೂ ಇನ್ನೂ ಕೂಡ 2015ರ ಹಳೆಯ ಪರಿಷ್ಕೃತ ಮಹಾ ಯೋಜನೆ (2015 Revised Master Plan)ಯನ್ನು ನಗರದ ಯೋಜಿತ ಅಭಿವೃದ್ಧಿಗೆ ಸೂಕ್ತ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾಡಿಲ್ಲ. ಇನ್ನು ಕೂಡ ಬಿಬಿಎಂಪಿಯ ನಗರ ಯೋಜನೆ ವಿಭಾಗವು ಕಟ್ಟಡ 2003ರ ಕಟ್ಟಡ ಉಪವಿಧಿಯ (2003 Building Bylaw)ನ್ನೇ ಅನುಸರಿಸುತ್ತಿದೆ. ಹೊಸ ಕಟ್ಟಡ ಉಪವಿಧಿಯನ್ನು ಪಾಲಿಕೆ ಸಿದ್ಧಪಡಿಸಿದರೂ ರಾಜ್ಯ ಸರ್ಕಾರದಿಂದ ಇನ್ನೂ ಒಪ್ಪಿಗೆ ಪಡೆಯಲು ಪ್ರಯತ್ನಪಟ್ಟಿಲ್ಲ. ಬಿಬಿಎಂಪಿಯ ನಗರ ಯೋಜನೆ ವಿಭಾಗದ ಎಂಜಿನಿಯರ್ ಗಳು ಕೇವಲ ಕಟ್ಟಡ ಕಟ್ಟಲು ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ, ಕಟ್ಟಡ ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರ, ಸ್ವಾಧೀನ ಪ್ರಮಾಣಪತ್ರ ವಿತರಿಸೋದು, ದಂಡ ಹಾಕುವುದು ಮಾತ್ರವಲ್ಲ. ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 376ರ ಮೊದಲನೇ ಅನುಸೂಚಿ ಪ್ರಮುಖ ಕರ್ತವ್ಯಗಳು (ಎ) ಹಾಗೂ ವಲಯವಾರು ಕರ್ತವ್ಯಗಳು (ಸಿ) ಅನ್ವಯ ಕೈಗೊಳ್ಳಬೇಕಾದ ಕಾರ್ಯಗಳನ್ನು ಮಾಡುವಲ್ಲಿ ನಿರ್ಲಕ್ಷ್ಯವಹಿಸಿದೆ.
ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 376 (ಎ) ಮತ್ತು (ಸಿ) ಏನು ಹೇಳುತ್ತೆ? :
ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 376ರ ಮೊದಲನೇ ಅನುಸೂಚಿ (107ನೇ ಪ್ರಕರಣವನ್ನು ನೋಡಿ) (ಎ) ಪ್ರಮುಖ ಕರ್ತವ್ಯಗಳು : “ಪಟ್ಟಣ ಯೋಜನೆ ಸಿದ್ಧಪಡಿಸುವುದೂ ಸೇರಿದಂತೆ ನಗರ ಯೋಜನೆ ಸಿದ್ಧಪಡಿಸುವುದು” ಮತ್ತು (ಸಿ) ವಲಯವಾರು ಕರ್ತವ್ಯಗಳು : “(i) ಪಟ್ಟಣ ಯೋಜನೆ ಸಿದ್ದಪಡಿಸುವುದೂ ಸೇರಿದಂತೆ ನಗರ ಯೋಜನೆ ಸಿದ್ದಪಡಿಸುವುದು. (ಎ) ಮಾನವ ವಾಸಸ್ಥಾನಕ್ಕಾಗಿ ಹೊಸ ಪ್ರದೇಶಗಳ ಯೋಜಿತ ಅಭಿವೃದ್ಧಿ, ನಿರ್ಧರಿಸಿರುವ ಮಿತಿಗಳಲ್ಲಿ ಗಡಿ ಗುರುತುಗಳನ್ನು ನಿರ್ಮಿಸುವುದು ಅಥವಾ ಅಂಥ ಮಿತಿಗಳಲ್ಲಿ ಯಾವುದೇ ಮಾರ್ಪಾಟು ಮಾಡುವುದು.”
“(ಬಿ) ನೀರಿನ ಬಣ್ಣದ ಕಾರಂಜಿಗಳನ್ನು ಸ್ಥಾಪಿಸುವ, ಮನರಂಜನಾ ಪ್ರದೇಶಗಳಿಗೆ ಅವಕಾಶ ಕಲ್ಪಿಸುವ, ನದಿ ದಂಡೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಭೂಭಾಗವನ್ನು ಅಂದಚೆಂದಗೊಳಿಸುವ ಮೂಲಕ ಪಾಲಿಕೆ ಪ್ರದೇಶವನ್ನು ಸೌಂದರ್ಯೀಕರಣಗೊಳಿಸುವುದಕ್ಕೆ ಕ್ರಮಗಳನ್ನು ಕೈಗೊಳ್ಳುವುದು. (ಸಿ) ಜಿಲ್ಲೆ ಅಥವಾ ವಲಯ ಅಭಿವೃದ್ಧಿ ನಕ್ಷೆಯೊಂದಿಗೆ ಪಾಲಿಕೆ ಪ್ರದೇಶದ ಅಭಿವೃದ್ಧಿ ನಕ್ಷೆಗಳು ಮತ್ತು ಯೋಜನೆಗಳನ್ನು ಸಂಯೋಜನೆಗೊಳಿಸುವುದು. (ಡಿ) ಪಾಲಿಕೆ ವ್ಯಾಪ್ತಿಯಲ್ಲಿನ ಯುಕ್ತ ನಕ್ಷೆಗಳನ್ನು, ಭೂಮಿಗಳ ದತ್ತಾಂಶವನ್ನು ಮತ್ತು ದಾಖಲೆಗಳನ್ನು ಮತ್ತು ಕಾಲ ಕಾಲಕ್ಕೆ ಅಂಥ ಜಮೀನುಗಳ ಉಪಯುಕ್ತತೆಯನ್ನು ಸಿದ್ಧಪಡಿಸುವುದು ಮತ್ತು ಅದನ್ನು ರಕ್ಷಿಸಿ ಇಟ್ಟುಕೊಳ್ಳುವುದು” ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.
ಕಾಯ್ದೆಯಲ್ಲಿ ಸೂಚಿಸಿದ ಕರ್ತವ್ಯಗಳನ್ನು ಮರೆತ ಎಂಜಿನಿಯರ್ಸ್ :
ಬಿಬಿಎಂಪಿಯ ನಗರ ಯೋಜನೆ ವಿಭಾಗವು ಈ ಮೇಲಿನ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಹಲವು ಸಂದರ್ಭಗಳಲ್ಲಿ ನಗರದ ನಾಗರೀಕರು, ಪ್ರಜ್ಞಾವಂತರ ಅನುಭವಕ್ಕೆ ಬಂದಿದೆ. ನಕ್ಷೆ ಮಂಜೂರಾತಿ ಪಡೆಯದೆ ಅಕ್ರಮವಾಗಿ ಕಟ್ಟಡ ಕಟ್ಟುವ ಹಾಗೂ ಮಂಜೂರಾತಿ ನಕ್ಷೆಗಿಂತ ಹೆಚ್ಚುವರಿ ಕಟ್ಟಡ ಭಾಗಗಳನ್ನು ಪತ್ತೆ ಹಚ್ಚಿ ತೆಗೆದು ಹಾಕುವ ಮತ್ತಿತರ ಕಾರ್ಯಗಳನ್ನು ಸೂಕ್ತ ರೀತಿ ಮಾಡುತ್ತಿಲ್ಲ.
ಹಳೆಯ ಮಾಸ್ಟರ್ ಪ್ಲಾನ್, ಸವೆದು ಹೋದ ಬಿಲ್ಡಿಂಗ್ ಬೈಲಾ
ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿದೆ ಬೆಂದಕಾಳೂರು
ಈಗಿನ ಪರಿಸ್ಥಿತಿಗೆ ಸೂಕ್ತವಾದ ನೂತನ ಪರಿಷ್ಕೃತ ಮಹಾ ಯೋಜನೆ, ಕಟ್ಟಡ ಉಪವಿಧಿ ಇದ್ಯಾವುದೇ ಇಲ್ಲದೆ ಹಳೆಯ ಮಾಸ್ಟರ್ ಪ್ಲಾನ್, ಬಿಲ್ಡಿಂಗ್ ಬೈಲಾ, ಜೊತೆಗೆ ಎಂಜಿನಿಯರ್ ಗಳು ತಮ್ಮ ಕರ್ತವ್ಯವನ್ನು ಸೂಕ್ತ ರೀತಿ ನಿರ್ವಹಿಸದಿರುವುದರಿಂದ, ಬೆಂಗಳೂರಿನ ಅಭಿವೃದ್ಧಿ ಅಡ್ಡಾದಿಡ್ಡಿಯಾಗಿ ಆಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್, ಪರಿಸರ ಮಾಲಿನ್ಯ, ಮಳೆ ಬಂದಾಗ ನೆರ ಪರಿಸ್ಥಿತಿ, ರಾಜಕಾಲುವೆಯಲ್ಲಿ, ಕೆರೆಯಲ್ಲಿ ನೀರು ಸರಾಗವಾಗಿ ಹರಿಯದಿರುವ ಮುಂತಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. ಕೇವಲ ಕೈತುಂಬಾ ಹಣ ಬರುವ ನಕ್ಷೆ ಮಂಜೂರಾತಿ, ಸಿಸಿ ಮತ್ತು ಒಸಿ ನೀಡುವುದಷ್ಟೆಕ್ಕೇ ಪಾಲಿಕೆ ಟೌನ್ ಪ್ಲಾನಿಂಗ್ ಎಂಜಿನಿಯರ್ ಗಳು ನಿರತರಾಗಿದ್ದಾರೆ ಎಂಬ ಅಪವಾದ ಸರ್ವೇ ಸಾಮಾನ್ಯವಾಗಿದೆ. ಇನ್ನಾದರೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತ ವಿಭಾಗದವರು ಈ ಲೋಪದೋಷಗಳನ್ನು ಸರಪಡಿಸಿ, ಬಿಬಿಎಂಪಿಯ ವೃಂದ ಮತ್ತು ನೇಮಕಾತಿ ನಿಯಮವಾಳಿ, ನಿಯೋಜನಾ ನೀತಿಯ ಅನ್ವಯ ಎಂಜಿನಿಯರ್ ಗಳನ್ನು ನಿಯೋಜಿಸುವ ಹಾಗೂ ಅವರಿಗೆ ಸೂಕ್ತ ರೀತಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.