ಬೆಂಗಳೂರು, ಜ.03 www.bengaluruwire.com : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಯೋಗ ಮತ್ತು ಆಯುರ್ವೇದವನ್ನು ಮಾನಸಿಕ ಆರೋಗ್ಯ ರಕ್ಷಣೆಗೆ ಸಂಯೋಜಿಸಿ ನೀಡುತ್ತಿರುವ ಚಿಕಿತ್ಸೆ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಶುಕ್ರವಾರ ಶ್ಲಾಘಿಸಿದರು. ಮನೋವೈದ್ಯಕೀಯ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳನ್ನು ಪರಿಹರಿಸುವಲ್ಲಿ ನಿಮ್ಹಾನ್ಸ್ ಕಾರ್ಯ ವಿಧಾನವು ಇತರರು ಅನುಸರಿಸಲು ಒಂದು ಮಾದರಿಯಾಗಿದೆ ಎಂದು ಬಣ್ಣಿಸಿದರು.
ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ ಮುರ್ಮು ಅವರು, ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಸಾಂಪ್ರದಾಯಿಕ ವಿಧಾನಗಳ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸಿದರು. ನಿಮ್ಹಾನ್ಸ್ ಸೇವೆಗಳು ಮಾನಸಿಕ ಆರೋಗ್ಯ ರಕ್ಷಣೆಗಾಗಿ ಸಮಗ್ರ ಮಾದರಿಯನ್ನು ನೀಡುತ್ತವೆ ಎಂದು ಒತ್ತಿ ಹೇಳಿದರು. “ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಪ್ರಚಾರದಲ್ಲಿ ಯೋಗ ಮತ್ತು ಆಯುರ್ವೇದದ ಅನ್ವಯಗಳನ್ನು ಪರೀಕ್ಷಿಸಲು ನಿಮ್ಹಾನ್ಸ್‌ನ ಸಮಗ್ರ ಔಷಧ ಸೇವೆಗಳು ಎಲ್ಲರಿಗೂ ಮಾದರಿಯಾಗಿದೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿಮ್ಹಾನ್ಸ್‌ನಲ್ಲಿ ಸೈಕಿಯಾಟ್ರಿ ಸ್ಪೆಷಾಲಿಟಿ ಬ್ಲಾಕ್, ಸೆಂಟ್ರಲ್ ಲ್ಯಾಬೋರೇಟರಿ ಕಾಂಪ್ಲೆಕ್ಸ್ ಮತ್ತು ಭೀಮಾ ಹಾಸ್ಟೆಲ್ ಸೇರಿದಂತೆ ಹಲವು ಪ್ರಮುಖ ಸೌಲಭ್ಯಗಳನ್ನು ಉದ್ಘಾಟಿಸಿದರು. ಅವರು ಸುಧಾರಿತ 3ಟಿ ಎಂಆರ್ ಐ (3T MRI) ಸ್ಕ್ಯಾನರ್ ಮತ್ತು ಡಿಎಸ್ಎ ಸಿಸ್ಟಮ್ (DSA System)ನಂತಹ ಅತ್ಯಾಧುನಿಕ ರೋಗನಿರ್ಣಯ ಸಾಧನಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಜಾಗತಿಕವಾಗಿ ಬೆಳೆಯುತ್ತಿರುವ ಮಾನಸಿಕ ಆರೋಗ್ಯ (Mental Health) ಕಾಳಜಿಗಳನ್ನು ಉದ್ದೇಶಿಸಿ ಹೇಳಿದ ಮುರ್ಮು ಅವರು, ನಕಾರಾತ್ಮಕ ಮಾನಸಿಕ ಸ್ಥಿತಿಯನ್ನು ಎದುರಿಸಲು ವಿವಿಧ ರೀತಿಯ ಧ್ಯಾನಗಳು ಸಹ ಉಪಯುಕ್ತವಾಗಿವೆ. ಅವುಗಳನ್ನು ಮಾನಸಿಕ ಆರೋಗ್ಯ ರಕ್ಷಣೆ ಮಾದರಿಗಳಲ್ಲಿ ಸಂಯೋಜಿಸಲಾಗುತ್ತಿದೆ. ಎಲ್ಲರಿಗೂ ಪ್ರಯೋಜನಕಾರಿಯಾದ ಸಾಂಪ್ರದಾಯಿಕ ವಿಧಾನಗಳನ್ನು ಬಳಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಹಿಂದಿನ ಕಾಲದಲ್ಲಿ ಸಮಾಜಗಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಮತ್ತು ಕಾಳಜಿಗಳು ಸಾಕಷ್ಟು ಗಮನವನ್ನು ಪಡೆದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತಿದೆ ಎಂದು ಹೇಳಿದರು.
ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳು ಸಾಂಕ್ರಾಮಿಕ ರೂಪ :
ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳು ಪ್ರಪಂಚದಾದ್ಯಂತ ಸಾಂಕ್ರಾಮಿಕ ಪ್ರಮಾಣವನ್ನು ತೆಗೆದುಕೊಳ್ಳುತ್ತಿವೆ. ನಿರ್ದಿಷ್ಟವಾಗಿ ಕೋವಿಡ್ 19 ಸಾಂಕ್ರಾಮಿಕವು ಅಂತಹ ಕಾಳಜಿಗಳ ಹೆಚ್ಚಳಕ್ಕೆ ಕಾರಣವಾಯಿತು. ಕೆಲಸ ಮಾಡುವ ವೃತ್ತಿಪರರು, ವೃದ್ಧರು ಮತ್ತು ಮನೆಯ ಜವಾಬ್ದಾರಿಗಳ ಭಾರವನ್ನು ಹೊರುವ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಕುರಿತು ಅವರು ಮತ್ತಷ್ಟು ಚರ್ಚಿಸಿದರು. “ಮನೆಯ ಜವಾಬ್ದಾರಿಗಳ ಭಾರವನ್ನು ಹೊರುವ ಮತ್ತು ಕುಟುಂಬವನ್ನು ನೋಡಿಕೊಳ್ಳುವ ಮಹಿಳೆಯರು ಸಾಮಾನ್ಯವಾಗಿ ಗಮನಿಸದೇ ಇರುವ ಹಲವಾರು ಮಾನಸಿಕ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ಆದಾಗ್ಯೂ, ಹೆಚ್ಚುತ್ತಿರುವ ಜಾಗೃತಿಯು ರೋಗಿಗಳಿಗೆ ತೆರೆದುಕೊಳ್ಳಲು ಮತ್ತು ಹಂಚಿಕೊಳ್ಳಲು ಸಾಧ್ಯವಾಗುವಂತೆ ಮಾಡಿದೆ ಎಂಬುದನ್ನು ಗಮನಿಸುವುದು ನಿಜವಾಗಿಯೂ ಹರ್ಷದಾಯಕವಾಗಿದೆ” ಎಂದು ಮುರ್ಮು ವಿವರಿಸಿದರು.
ಭಾರತದಾದ್ಯಂತ ಮಾನಸಿಕ ಆರೋಗ್ಯ ಸಮಾಲೋಚನೆಯನ್ನು ಒದಗಿಸುವ ಟೆಲಿ-ಮಾನಸ್ ಮತ್ತು ಮಕ್ಕಳ ಮತ್ತು ವಯಸ್ಕರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಸಂವಾದ್ (SAMVAD) ವೇದಿಕೆಯ ಬಗ್ಗೆ ನಿಮ್ಹಾನ್ಸ್ ಅನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು. ಸಮಾಜದಲ್ಲಿ ಆರೋಗ್ಯಕರ ದಾಂಪತ್ಯದ ಬಗ್ಗೆ ಒತ್ತಿ ಹೇಳಿದರು, ಇದು ಆರೋಗ್ಯಕರ ಸಮಾಜದ ಅಡಿಪಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಮ್ಹಾನ್ಸ್‌ನಲ್ಲಿ ಲಿಂಗ ಸಮತೋಲನ :
ತನ್ನ ಭಾಷಣದಲ್ಲಿ, ಮುರ್ಮು ನಿಮ್ಹಾನ್ಸ್‌ನಲ್ಲಿ ಲಿಂಗ ಸಮತೋಲನದ ಬಗ್ಗೆ ಮಾತನಾಡುತ್ತಾ, ಸ್ನಾತಕಪೂರ್ವ ವಿದ್ಯಾರ್ಥಿಗಳಲ್ಲಿ ಶೇಕಡಾ 79.7 ರಷ್ಟು ಮಹಿಳೆಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಶೇಕಡಾ 61.4 ರಷ್ಟು ಮಹಿಳೆಯರು ಇದ್ದಾರೆ. “ಮಾನಸಿಕ ಆರೋಗ್ಯ ರಕ್ಷಣೆ, ಆರೈಕೆ ಮತ್ತು ಸಂಶೋಧನೆಯಲ್ಲಿ ಮಹಿಳೆಯರು ಅನನ್ಯ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದರು.
ನಂತರ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ ಆದ ನಿಮ್ಹಾನ್ಸ್ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಜಗತ್ತಿನ ಅತ್ಯುತ್ತಮ 200 ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ ಕೂಡ ಒಂದಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವಾರ್ಷಿಕ 7 ಲಕ್ಷ ಜನ ಚಿಕಿತ್ಸೆ ಪಡೆಯುತ್ತಾರೆ. ಹೊಸದಾಗಿ ಸಹ ಕೆಲವು ಸೇವೆಗಳನ್ನು ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಆರೋಗ್ಯ ಸೇವೆಗಳಲ್ಲಿ ನಿಮ್ಹಾನ್ಸ್ ಸಂಸ್ಥೆ ತನಗೆ ತಾನೇ ಸಾಟಿಯಾಗಿದೆ. 50 ವರ್ಷದ ಈ ಸುದೀರ್ಘ ಯಾನ, ತ್ಯಾಗ, ಸೇವೆ ಸ್ಮರಣೀಯವಾಗಿದೆ. ಮುಂದಿನ 25 ವರ್ಷಕ್ಕೆ ನಿಮ್ಹಾನ್ಸ್ ಅಭಿವೃದ್ಧಿಯ ನಕ್ಷೆ ತಯಾರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಿಮ್ಹಾನ್ಸ್‌ನ ಟೆಲಿ ಕನ್ಸಲ್ಟೇಷನ್ ಸೇವೆಗೆ ಅಭಿನಂದನೆ ಸಲ್ಲಿಸಿದ ಸಚಿವರು, ವಾರ್ಷಿಕ 1000 ಕ್ಕೂ ಹೆಚ್ಚು ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಆರೋಗ್ಯ ಸೇವೆಗೆ ನಿಮ್ಹಾನ್ಸ್ ಕಳುಹಿಸುತ್ತಿದೆ. ಸೀಮಿತ ಸಂಪನ್ಮೂಲಗಳನ್ನು ಇನ್ನಷ್ಟು ಹೆಚ್ಚಿಸಬೇಕಿದೆ ಎಂದು ತಿಳಿಸಿದರು.
ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಂಸದರಾದ ಡಾ.ಸಿ.ಎನ್. ಮಂಜುನಾಥ್, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ನಿಮ್ಹಾನ್ಸ್ ನಿರ್ದೇಶಕರಾದ ಡಾ.ಪ್ರತಿಮಾ ಮೂರ್ತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.