ಶ್ರೀಹರಿಕೋಟಾ, ಡಿ.30 www.bengaluruwire.com : ಭಾರತೀಯರೆಲ್ಲಾ 2024ರ ಇಸವಿಯ ಕೊನೆಯ ಭಾಗದಲ್ಲಿದ್ದು ಹೊಸ ವರ್ಷದ ಸ್ವಾಗತ ಕೋರಲು ಸಿದ್ದವಾಗಿದ್ದೇವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ಇಂದು (ಡಿ.30) ಮಹತ್ವವಾದ ದಿನವಾಗಿದೆ. ಏಕಂದರೆ ರಾತ್ರಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಪಿಎಸ್ ಎಲ್ ವಿ ಸಿ-60 (PSLV-C60) ರಾಕೆಟ್ ಮೂಲಕ ನಭದತ್ತ ಚಿಮ್ಮಲಿದೆ.
ಸ್ಪಾಡೆಕ್ಸ್ (SpaDeX mission) ಹೆಸರಿನ ಈ ಉಡಾವಣಾ ಯೋಜನೆಯು ಕಡಿಮೆ ವೆಚ್ಚದಲ್ಲಿ ರೂಪಿಸುವ ಗುರಿ ಹೊಂದಲಾಗಿದೆ. ಸ್ಪಾಡೆಕ್ಸ್ ನಲ್ಲಿ ಚೇಸರ್ (SDX01 – ಎಸ್‌ಡಿಎಕ್ಸ್01) ಮತ್ತು ಟಾರ್ಗೆಟ್ (SDX02 – ಎಸ್‌ಡಿಎಕ್ಸ್02) ಎಂಬ ಎರಡು ಉಪಗ್ರಹಗಳಿದ್ದು, ಅವುಗಳನ್ನು ಈ ರಾಕೆಟ್ ಹೊತ್ತೊಯ್ಯಲಿದೆ. ಹೀಗೆ ಹೊತ್ತೊಯ್ದ ಉಪಗ್ರಹಗಳನ್ನು ಕೆಳ ಹಂತದ ಕಕ್ಷೆಯಲ್ಲಿ ವ್ಯವಸ್ಥೆ ಮಾಡಿದ ಬಳಿಕ ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗವನ್ನು ಇಸ್ರೋ ಕೈಗೊಳ್ಳಲಿದೆ.
ಈ ಪ್ರಯೋಗದಲ್ಲಿ ಯಶಸ್ವಿಗೊಂಡರೆ, ಅಮೆರಿಕ, ರಷ್ಯಾ, ಚೀನಾದ ಬಳಿಕ ಇಂಥ ಸಾಧನೆ ಮಾಡಿದ ವಿಶ್ವದ 4ನೇ ರಾಷ್ಟ್ರವೆಂಬ ಕೀರ್ತಿ ಇಸ್ರೋ ಮುಡಿಗೇರಲಿದೆ. ಇಂದು ರಾತ್ರಿ 9:58ಕ್ಕೆ ಫಿಎಸ್ ಎಲ್ ವಿ ಸಿ-60 ರಾಕೆಟ್ ಈ ಎರಡು ಉಪಗ್ರಹಗಳನ್ನು ಹೊತ್ತು ಉಡಾವಣೆಯಾಗಲಿದೆ. ಭೂಮಿಯಿಂದ 476 ಕಿ.ಮೀ ದೂರದ ಕಕ್ಷೆಗೆ ಈ ಉಪಗ್ರಹಗಳನ್ನು ರಾಕೆಟ್ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ತನ್ನ ಡಾಕಿಂಗ್ ಪ್ರಯೋಗ ನಡೆಯಲಿದೆ.
ಸ್ಪೇಡೆಕ್ಸ್ ಪ್ರಯೋಗ ಏಕೆ ಮುಖ್ಯವಾಗಿದೆ?:

ಈ ಎರಡೂ ಉಪಗ್ರಹಗಳು ತನ್ನಲ್ಲಿರುವ ಸೆನ್ಸರ್, ವ್ಯವಸ್ಥೆಯನ್ನು ಬಳಸಿ ಒಂದಕ್ಕೊಂದು ಪರಸ್ಪರ ಜೋಡಣೆ ಆಗುವಂತೆ ಮಾಡುವುದು. ನಂತರ ಪರಸ್ಪರ ಬೇರೆಯಾಗುವಂತೆ ಮಾಡಲು ಇಸ್ರೋ ಈ ಪ್ರಯೋಗ ನಡೆಸಲಿದೆ. ಈ ಕಾರಣಕ್ಕೆ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಎಂಬ ಹೆಸರನ್ನು ಇಡಲಾಗಿದೆ.

ಮಾನವಸಹಿತ ಬಾಹ್ಯಾಕಾಶಯಾನ, ಚಂದ್ರನ ಅಂಗಳಕ್ಕೆ ಗಗನಯಾತ್ರಿಗಳನ್ನು ಕಳುಹಿಸಿ, ವಾಪಸ್ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ಕೂಡ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ (Indian Space Station) ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ. ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್, ಅನ್‌ಡಾಕಿಂಗ್ ತಂತ್ರಜ್ಞಾನ ಬಹಳ ಪ್ರಮುಖವಾಗಿದೆ.
ಬಾಹ್ಯಾಕಾಶದಲ್ಲಿ ಸಸಿ ಬೆಳೆಸುವ ಪ್ರಯೋಗ :
ಬಾಹ್ಯಾಕಾಶದಲ್ಲಿ ಸಸಿಗಳು ಚಿಗುರುವ ಬಗ್ಗೆಯೂ ಈ ಉಡ್ಡಯನದ ವೇಳೆ ಸಂಶೋಧನೆ ನಡೆಸಲಾಗುವುದು. ವಿಕ್ರಂ ಸಾರಾಬಾಯ್ ಬಾಹ್ಯಾಕಾಶ ಕೇಂದ್ರ (Vikram Sarabhai Space Center) ವು ಕ್ರಾಪ್ಸ್ ಹೆಸರಿನ ಯೋಜನೆಯಡಿ ಆಕಾಶದಲ್ಲೇ ಉಳಿಯಲಿರುವ ಕೊನೆಯ ಹಂತದ ರಾಕೆಟ್‌ನಲ್ಲಿ ಸಸಿಗಳ ಬೆಳವಣಿಗೆ ಕುರಿತ ಪ್ರಯೋಗ ನಡೆಸಲಿದೆ.
ಯೋಜನೆಯ ಭಾಗವಾಗಿ ಮುಚ್ಚಿದ ಬಾಕ್ಸ್ ಒಂದರಲ್ಲಿ ಹಲಸಂದೆ ಬೀಜಗಳನ್ನು ಇಡಲಾಗಿದ್ದು ಅದು ಮೊಳಕೆಯೊಡೆದು, 2 ಎಲೆಗಳಾಗಿ ಅರಳುವ ತನಕದ ಮಾಹಿತಿ ಸಂಗ್ರಹಿಸಿ ಸಂಶೋಧನೆ ನಡೆಸಲಿದೆ. ಇದರ ಜೊತೆಗೆ, ಪೋಮ್-4 ಮಿಷನ್ (POM-4 Mission)ನ ಅಡಿಯಲ್ಲಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ತ್ಯಾಜ್ಯವನ್ನು ಸಂಗ್ರಹಿಸುವ ರೋಬೋಟ್ (Robot) ಹಾಗೂ ನೌಕೆಗಳಿಗೆ ಇಂಧನ ತುಂಬುವ ಪರೀಕ್ಷೆ (Ship refueling test) ನಡೆಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಇಸ್ರೋ ಸ್ಪೇಡೆಕ್ಸ್ ಪ್ರಯೋಗದ ಬಗ್ಗೆ ತಿಳಿಸುವ ಗ್ರಾಫಿಕ್ ವಿಡಿಯೋ :