ಬೆಂಗಳೂರು, ಡಿ.27 www.bengaluruwire.com : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) 2025ರ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ಡಿ.31ರ ಮಧ್ಯರಾತ್ರಿವರೆಗೆ ತನ್ನ ಸೇವಾ ಅವಧಿಯನ್ನು ವಿಸ್ತರಿಸಿದೆ.
ನಮ್ಮ ಮೆಟ್ರೋ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು 2025ರಂದು ಜನವರಿ 1ರ ಮುಂಜಾನೆ 2 ಗಂಟೆಗೆ ಕೊನೆಯ ರೈಲು ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್ ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2.40ಕ್ಕೆ ಹೊರಡಲಿದೆ.
ಆದರೆ ಎಂ.ಜಿ.ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ಸುತ್ತಮುತ್ತ ಹೊಸವರ್ಷ ಸಂಭ್ರಮಾಚರಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿರುವುದರಿಂದ ಡಿ.31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನದ ದ್ವಾರಗಳನ್ನು ಮುಚ್ಚಲಾಗುತ್ತದೆ. ಆದರೆ ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ನಲ್ಲಿ ರೈಲುಗಳು ನಿಲ್ಲುತ್ತವೆ.
ಸಾರ್ವಜನಿಕರು ₹50ರ ಪೇಪರ್ ಟಿಕೆಟ್ ಗಳನ್ನು ಮುಂಗಡವಾಗಿ ಪಡೆಯಲು ನಮ್ಮ ಮೆಟ್ರೊ ವ್ಯವಸ್ಥೆ ಮಾಡಲಿದೆ. ಈ ಕಾಗದದ ಟಿಕೆಟ್ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 31ನೇ ಡಿಸೆಂಬರ್ 2024ರ ಬೆಳಗ್ಗೆ 8 ರಿಂದ ಮುಂಗಡವಾಗಿ ಖರೀದಿಸಲು ಲಭ್ಯವಿರುತ್ತದೆ. ಸಾಮಾನ್ಯ ಕ್ಯುಆರ್ ಕೋಡ್ ಟಿಕೆಟ್ಗಳು ಮತ್ತು ಕಾರ್ಡ್ಗಳು ಈ ನಿಲ್ದಾಣಗಳಿಂದ ಪ್ರಯಾಣಿಸಲು ಸಹ ಮಾನ್ಯವಾಗಿರುತ್ತವೆ ಎಂದು ನಮ್ಮ ಮೆಟ್ರೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವುದೇ ನಿರ್ದಿಷ್ಟ ನಿಲ್ದಾಣದಲ್ಲಿ ಜನಸಂದಣಿಯನ್ನು ತಪ್ಪಿಸಲು, ಪ್ರಯಾಣಿಕರು ವೈಟ್ಫೀಲ್ಡ್ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ಕಡೆಗೆ ಹೋಗುವವರು ಪ್ರಯಾಣಕ್ಕಾಗಿ ಟ್ರಿನಿಟಿ ಮೆಟ್ರೋ ನಿಲ್ದಾಣವನ್ನು ಬಳಸಬಹುದು ಮತ್ತು ಚಲ್ಲಘಟ್ಟ ಹಾಗೂ ಮಾದಾವರ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸಿಕೊಳ್ಳಬಹುದು.