ನವದೆಹಲಿ, ಡಿ.24 www.bengaluruwire.com : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO -ಇಸ್ರೋ) 2035ರ ವೇಳೆಗೆ ಭಾರತದ ಸ್ವಂತ ಬಾಹ್ಯಾಕಾಶ ಕೇಂದ್ರ ಸ್ಥಾಪನೆ ಗುರಿ ಹೊಂದಿದೆ. ಈ ಹಿನ್ನಲೆಯಲ್ಲಿ ಪೂರಕವಾಗಿ ಬಾಹ್ಯಾಕಾಶ ನೌಕೆ ಡಾಕಿಂಗ್ (ತಂಗುವ) ಪ್ರಯೋಗಕ್ಕೆ ಸಿದ್ಧವಾಗಿದೆ. ಹೀಗಾಗಿ ಇದೇ ಡಿ.30ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಎರಡು ನೌಕೆ (ಉಪಗ್ರಹ)ಗಳನ್ನು ಪಿಎಸ್ ಎಲ್ ವಿಸಿ60 (PSLV-C60) ರಾಕೆಟ್ ಮೂಲಕ ಉಡಾವಣೆ ಮಾಡಲಿದೆ.
ಸ್ಪಾಡೆಕ್ಸ್ (SpaDeX mission) ಹೆಸರಿನ ಈ ಉಡಾವಣಾ ಯೋಜನೆಯು ಕಡಿಮೆ ವೆಚ್ಚದಲ್ಲಿ ರೂಪಿಸುವ ಗುರಿ ಹೊಂದಲಾಗಿದೆ. ಸ್ಪಾಡೆಕ್ಸ್ ನಲ್ಲಿ ಚೇಸರ್ (SDX01 – ಎಸ್‌ಡಿಎಕ್ಸ್01) ಮತ್ತು ಟಾರ್ಗೆಟ್ (SDX02 – ಎಸ್‌ಡಿಎಕ್ಸ್02) ಎಂಬ ಎರಡು ಉಪಗ್ರಹಗಳಿದ್ದು, ಅವುಗಳನ್ನು ಈ ರಾಕೆಟ್ ಹೊತ್ತೊಯ್ಯಲಿದೆ. ಹೀಗೆ ಹೊತ್ತೊಯ್ದ ಉಪಗ್ರಹಗಳನ್ನು ಕೆಳ ಹಂತದ ಕಕ್ಷೆಯಲ್ಲಿ ವ್ಯವಸ್ಥೆ ಮಾಡಿದ ಬಳಿಕ ಒಂದರಲ್ಲಿ ಇನ್ನೊಂದು ತಂಗುವಂಥ ಪ್ರಯೋಗವನ್ನು ಇಸ್ರೋ ಕೈಗೊಳ್ಳಲಿದೆ.
ಈ ಪ್ರಯೋಗದಲ್ಲಿ ಯಶಸ್ವಿಗೊಂಡರೆ, ಅಮೆರಿಕ, ರಷ್ಯಾ, ಚೀನಾದ ಬಳಿಕ ಇಂಥ ಸಾಧನೆ ಮಾಡಿದ ವಿಶ್ವದ 4ನೇ ರಾಷ್ಟ್ರವೆಂಬ ಕೀರ್ತಿಗೆ ಇಸ್ರೋ ಮುಡಿಗೇರಲಿದೆ. ಡಿ.30ಕ್ಕೆ ರಾಕೆಟ್ ಹಾರಿಬಿಡಲು ದಿನಾಂಕ ನಿಗದಿಯಾಗಿದೆ. ಒಂದೊಮ್ಮೆ ವಾತಾವರಣ ಅಥವಾ ತಾಂತ್ರಿಕ ಸಮಸ್ಯೆ ಎದುರಾದರೆ 2025ರ ಜ.13ರವರೆಗೆ ಇತರೆ ಹಲವು ದಿನಾಂಕಗಳನ್ನೂ ಇಸ್ರೋ ಪರ್ಯಾಯ ವ್ಯವಸ್ಥೆಯಾಗಿಟ್ಟುಕೊಂಡಿದೆ.
ಈ ಬಗ್ಗೆ ಇಸ್ರೋ, ‘ಸ್ಪಾಡೆಕ್ಸ್‌ನ ಜೋಡಣೆ, ಪರೀಕ್ಷೆಗಳು ಮುಗಿದಿದ್ದು, ಬಾಹ್ಯಾಕಾಶ ನೌಕೆಯನ್ನು ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಕಳಿಸಲಾಗಿದೆ. ಈಗ ಉಡಾವಣೆಯ ತಯಾರಿ ನಡೆಯುತ್ತಿದೆ’ ಎಂದು ಪೋಸ್ಟ್ ನಲ್ಲಿ ತಿಳಿಸಿದೆ.
ಬಾಹ್ಯಾಕಾಶದಲ್ಲಿ ಸಸಿ ಬೆಳೆಸುವ ಪ್ರಯೋಗ :
ಬಾಹ್ಯಾಕಾಶದಲ್ಲಿ ಸಸಿಗಳು ಚಿಗುರುವ ಬಗ್ಗೆಯೂ ಈ ಉಡ್ಡಯನದ ವೇಳೆ ಸಂಶೋಧನೆ ನಡೆಸಲಾಗುವುದು. ವಿಕ್ರಂ ಸಾರಾಬಾಯ್ ಬಾಹ್ಯಾಕಾಶ ಕೇಂದ್ರ (Vikram Sarabhai Space Center) ವು ಕ್ರಾಪ್ಸ್ ಹೆಸರಿನ ಯೋಜನೆಯಡಿ ಆಕಾಶದಲ್ಲೇ ಉಳಿಯಲಿರುವ ಕೊನೆಯ ಹಂತದ ರಾಕೆಟ್‌ನಲ್ಲಿ ಸಸಿಗಳ ಬೆಳವಣಿಗೆ ಕುರಿತ ಪ್ರಯೋಗ ನಡೆಸಲು ನಿರ್ಧರಿಸಿದೆ.
ಯೋಜನೆಯ ಭಾಗವಾಗಿ ಮುಚ್ಚಿದ ಬಾಕ್ಸ್ ಒಂದರಲ್ಲಿ ಹಲಸಂದೆ ಬೀಜಗಳನ್ನು ಇಡಲಾಗಿದ್ದು ಅದು ಮೊಳಕೆಯೊಡೆದು, 2 ಎಲೆಗಳಾಗಿ ಅರಳುವ ತನಕದ ಮಾಹಿತಿ ಸಂಗ್ರಹಿಸಿ ಸಂಶೋಧನೆ ನಡೆಸಲಿದೆ. ಇದರ ಜೊತೆಗೆ, ಪೋಮ್-4 ಮಿಷನ್ (POM-4 Mission)ನ ಅಡಿಯಲ್ಲಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ತ್ಯಾಜ್ಯವನ್ನು ಸಂಗ್ರಹಿಸುವ ರೋಬೋಟ್ (Robot) ಹಾಗೂ ನೌಕೆಗಳಿಗೆ ಇಂಧನ ತುಂಬುವ ಪರೀಕ್ಷೆ (Ship refueling test) ನಡೆಸಲಾಗುವುದು.