ಕಲ್ಬುರ್ಗಿ, ಡಿ.20 www.bengaluruwire.com : ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆ ಸಾಕಾರಗೊಳ್ಳುವ ದಿನ ಸಮೀಪಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಕಲ್ಬುರ್ಗಿಯಲ್ಲಿ ನೂತನವಾಗಿ ನಿರ್ಮಿಸಿರುವ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ (Jayadeva Heart Hospital) ಇದೇ ಭಾನುವಾರ ಲೋಕಾರ್ಪಣೆಯಾಗಲಿದೆ.
ಕಲ್ಬುರ್ಗಿಯ ಧರ್ಮಾಪುರ ಗ್ರಾಮದಲ್ಲಿ 7.15 ಎಕರೆ ಜಾಗದಲ್ಲಿ ನೂತನ ಆಸ್ಪತ್ರೆ ಸಂಕೀರ್ಣದಲ್ಲಿ ಒಟ್ಟು 262.20 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಿದೆ. ಇದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಸಹಯೋಗದಲ್ಲಿ ಆಸ್ಪತ್ರೆಯು ತಲೆಎತ್ತಿ ನಿಂತಿದೆ.
ಆಗ್ನೇಯ ಏಷ್ಯಾದ ಅತಿದೊಡ್ಡ ಹೃದ್ರೋಗ ಆಸ್ಪತ್ರೆ (Heart Hospital) ಎಂಬ ಹೆಗ್ಗಳಿಕೆಗೆ ಈ ಜನಸ್ನೇಹಿ ಹಾಸ್ಪಿಟಲ್ ಪಾತ್ರವಾಗಿದೆ. ನೂತನ ಆಸ್ಪತ್ರೆ ಉದ್ಘಾಟನೆಯದ ಬಳಿಕ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ 1050 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಶಾಖೆಗಳು ಸೇರಿದಂತೆ ಸದ್ಯ 1750 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ. ಕಲ್ಬುರ್ಗಿಯ ನೂತನ 371 ಹಾಸಿಗೆಗಳ ಆಸ್ಪತ್ರೆ ಸೇರ್ಪಡೆಯಾದರೆ ಒಟ್ಟಾರೆ ದಕ್ಷಿಣ ಭಾರತದಲ್ಲೇ 2000ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯ ಹೊಂದಿರುವ ಹೃದ್ರೋಗ ಚಿಕಿತ್ಸಾ ಕೇಂದ್ರವಾಗಲಿದೆ.
ಕಲ್ಬುರ್ಗಿ ಶಾಖೆಯ ನೂತನ ಆಸ್ಪತ್ರೆ ಸೌಲಭ್ಯಗಳು ಹೀಗಿವೆ :
* 3 ಕ್ಯಾಥ್ ಲ್ಯಾಬ್
* 3 ಆಪರೇಷನ್ ಥಿಯೇಟರ್
* 1 ಹೈಬ್ರಿಡ್ ಆಪರೇಷನ್ ಥಿಯೇಟರ್
* 105 ಐಸಿಸಿಯು ಬೆಡ್‌ಗಳು
* 120 ಜನರಲ್ ವಾರ್ಡ್ ಬೆಡ್‌ಗಳು (ಸೆಮಿ ಸ್ಪೆಷಲ್ ವಾರ್ಡ್, ಸ್ಪೆಷಲ್ ವಾರ್ಡ್, ಡೀಲಕ್ಸ್ ವಾರ್ಡ್‌ಗಳ ಸೌಲಭ್ಯ ಸೇರಿದಂತೆ)
* 12 ರಿಕವರಿ ಬೆಡ್‌ಗಳು, 12 ಪೋಸ್ಟ್ ಆಪರೇಟಿವ್ ಹಾಸಿಗೆ ವ್ಯವಸ್ಥೆ ಇದೆ.
* ಕಾರ್ಡಿಯಾಲಜಿ, ಕಾರ್ಡಿಯೋ ಥೋರಾಸಿಕ್ ಸರ್ಜರಿ.
* ವಾಸ್ಕ್ಯುಲರ್ ಸರ್ಜರಿ, ಮಕ್ಕಳ ಹೃದ್ರೋಗ ವಿಭಾಗ.
* ರೆಡಿಯೋಲಾಜಿ, 128 ಸ್ಲೈಸ್ ಸಿಟಿ ಸ್ಕ್ಯಾನ್, 1.5ಟಿ ಎಂಆರ್‌ಐ
* ಅಲ್ಟ್ರಾಸೋನಾಗ್ರಫಿ, ಹೈಟೆಕ್ ಪೆಥಾಲಜಿ ಮತ್ತು ಬ್ಲಡ್ ಬ್ಯಾಂಕ್ ಸೇವೆಗಳು ಲಭ್ಯವಿದೆ.
2016ರಲ್ಲಿ ಇಲ್ಲಿನ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಕಲಬುರಗಿ, ಕೊಪ್ಪಳ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು ಸೇರಿದಂತೆ ಹೈದರಾಬಾದ್ ಕರ್ನಾಟಕ ಪ್ರದೇಶದ ಜನರಿಗೆ ಹೃದ್ರೋಗ ಚಿಕಿತ್ಸಾ ಸೌಲಭ್ಯ ಒದಗಿಸಲು 130 ಹಾಸಿಗೆ ಸಾಮರ್ಥ್ಯದ ಶಾಖೆಯನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆರಂಭಿಸಿತ್ತು.
ಈ ಕಲ್ಬುರ್ಗಿ ಶಾಖಾ ಆಸ್ಪತ್ರೆಗೆ ಈತನಕ 5.75ಲಕ್ಷ ಹೊರರೋಗಿಗಳು ಭೇಟಿ ನೀಡಿದ್ದಾರೆ, 47500 ಒಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 25000 ಆಂಜಿಯೋಗ್ರಾಂ ಪ್ರಕ್ರಿಯೆ ಕೈಗೊಳ್ಳಲಾಗಿದೆ. 13000 ಆಂಜಿಯೋಪ್ಲಾಸ್ಟೀ, 300 ಪೇಸ್ ಮೇಕರ್ ಅಳವಡಿಕೆ, 1300 ಓಪನ್ ಹಾರ್ಟ್ ಸರ್ಜರಿ ಹಾಗೂ 18550 ಮಕ್ಕಳು ಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಜಯದೇವ ಆಸ್ಪತ್ರೆ ಸಮೂಹ ಬೃಹತ್ ವೈದ್ಯಕೀಯ ಸಾಮರ್ಥ್ಯ :
ಮೊದಲು ಚಿಕಿತ್ಸೆ, ನಂತರ ಹಣ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜಯದೇವ ಆಸ್ಪತ್ರೆ ಲಾಭರಹಿತ ಅತ್ಯಾಧುನಿಕ ಕಾರ್ಡಿಯಾಕ್ ಕೇರ್ ಸಂಸ್ಥೆ (Cardiac Care Institute) ಆಗಿದೆ. ಸಮಾಜದ ಎಲ್ಲಾ ವರ್ಗದ ಬಡ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಹಾಗೂ ನಿರ್ಗತಿಕರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವ ರಾಜ್ಯದ ಏಕೈಕ ಸರ್ಕಾರಿ ಸ್ವಾಯತ್ತ ಸಂಸ್ಥೆ ಆಗಿದೆ. ಇದನ್ನೂ ಓದಿ : 2025 Technology | 2025ನೇ ಇಸವಿಯಲ್ಲಿ ದಾಂಗುಡಿಯಿಡಲಿದೆ 5G, ಎಲ್ಲೆಡೆ ಹೆಚ್ಚಾಗಲಿದೆ AI ಬಳಕೆ
ಒಟ್ಟಾರೆ ಜಯದೇವ ಆಸ್ಪತ್ರೆ ಸಮೂಹದಲ್ಲಿ 19 ಕ್ಯಾಥ್‌ಲ್ಯಾಬ್‌ಗಳು, 16 ಆಪರೇಷನ್ ಥಿಯೇಟರ್‌ಗಳು, 400 ಐಸಿಸಿಯು ಹಾಸಿಗೆಗಳು, ನಾನ್-ಇನ್ವೇಸೀವ್ ಲ್ಯಾಬ್‌ಗಳು, 24 ಗಂಟೆಯ ತುರ್ತು ಚಿಕಿತ್ಸಾ ವ್ಯವಸ್ಥೆಯ ಜೊತೆಗೆ ಅತ್ಯಾಧುನಿಕ ಸಿಟಿ ಹಾಗೂ ಎಂಆರ್‌ಐ ವ್ಯವಸ್ಥೆಯನ್ನು ಹೊಂದಿದೆ.
ಜಯದೇವ ಆಸ್ಪತ್ರೆಯಲ್ಲಿದ್ದಾರೆ 125 ಜನ ಹೃದ್ರೋಗ ತಜ್ಞರು :
125 ಜನ ಹೃದ್ರೋಗ ತಜ್ಞರು(Cardiologist), 65 ಜನ ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸಕರು (Cardiothoracic surgeons), 45 ಜನ ಹೃದಯ ಅರಿವಳಿಕೆ ತಜ್ಞರು (Anesthesiologist), 6 ಜನ ವ್ಯಾಸ್ಕ್ಯುಲರ್ ತಜ್ಞರು (Vascular specialists) ಹಾಗೂ ಇತರೆ ವಿಭಾಗದ ಸಿಬ್ಬಂದಿಗಳನ್ನು ಒಳಗೊಂಡಿದೆ.
2023-24ರಲ್ಲಿ 8 ಲಕ್ಷಕ್ಕೂ ಹೆಚ್ಚು ಹೊರ ರೋಗಿಗಳಿಗೆ ಚಿಕಿತ್ಸೆ :
2023-24ರಲ್ಲಿ 8 ಲಕ್ಷಕ್ಕೂ ಹೆಚ್ಚು ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 82000 ರೋಗಿಗಳು ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. 66000 ಜನ ಓಪನ್ ಹಾರ್ಟ್ ಸರ್ಜರಿಗೆ ಒಳಪಟ್ಟಿದ್ದಾರೆ. 38900 ಜನರಿಗೆ ಕೊರೊನರಿ ಆಂಜಿಯೋಗ್ರಾಂ ಪ್ರಕ್ರಿಯೆ ನಡೆಸಲಾಗಿದೆ. 67500 ಕ್ಯಾತ್‌ಲ್ಯಾಬ್ ಕಾರ್ಯವಿಧಾನ ಸೇರಿದಂತೆ 21700 ಆಂಜಿಯೋಪ್ಲ್ಯಾಸ್ಟೀ ಮತ್ತು ವಾಲ್ವೋಪ್ಲಾಸ್ಟಿಗಳನ್ನು ಮಾಡಲಾಗಿದೆ.
ನೂತನ ಕಲ್ಬುರ್ಗಿ ಜಯದೇವ ಆಸ್ಪತ್ರೆಲ್ಲಿ ಕೈಗೆಟಕುವ ಚಿಕಿತ್ಸಾದರ :
“ದಿನೇ ದಿನೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೃದಯ ಸಮಸ್ಯೆ ಹೆಚ್ಚಾಗುತ್ತಿದ್ದು ಜಿಮ್ಸ್ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆ ಕಾರ್ಯಾಚರಣೆಗೆ ಜಾಗದ ಸಮಸ್ಯೆಯಾಗುತ್ತಿತ್ತು. ನೂತನ 371 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತಜ್ಞಾನದ ಸಿಟಿ ಸ್ಕ್ಯಾನ್, ಎಂಆರ್ ಐ, ವಾಸ್ಕ್ಯುಲರ್ ಸರ್ಜರಿ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನೂತನ ಆಸ್ಪತ್ರೆ ಆರಂಭವಾದ ಬಳಿಕ ಆ ಭಾಗದ ರೋಗಿಗಳು ಬೆಂಗಳೂರಿಗೆ ಚಿಕಿತ್ಸೆಗಾಗಿ ಬರುವ ಅವಶ್ಯಕತೆಯಿರದು. ಇಲ್ಲಿನ ಚಿಕಿತ್ಸಾ ದರವು ಖಾಸಗಿ ಆಸ್ಪತ್ರೆಗಿಂತ ಮೂರ್ನಾಲ್ಕು ಪಟ್ಟು ಕಡಿಮೆಯಿರಲಿದೆ”.
– ಡಾ. ಕೆ. ಎಸ್ ರವೀಂದ್ರನಾಥ್, ನಿರ್ದೇಶಕರು, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.