ಬೆಂಗಳೂರು, ಡಿ.19 www.bengaluruwire.com : ಟ್ರಾವೆಲ್ ಹಾಗೂ ಲೀಶರ್ ಇಂಡಿಯಾ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ ‘ಅತ್ಯುತ್ತಮ ದೇಶೀಯ ಏರ್‌ಪೋರ್ಟ್ ಲಾಂಜ್’ (Best domestic airport lounge) ಮನ್ನಣೆಯನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport)ದ ಟರ್ಮಿನಲ್ 2 ನಲ್ಲಿ ದೇಶೀಯ ನಿರ್ಗಮನ ಪ್ರದೇಶದಲ್ಲಿರುವ 080 ಲಾಂಜ್ ಪಡೆದುಕೊಂಡಿದೆ.
ಇದಲ್ಲದೆ, ಕಾಂಡೆ ನಾಸ್ಟ್ ರೀಡರ್ಸ್ ಚಾಯ್ಸ್ ಅವಾರ್ಡ್ಸ್ -2024 ನಲ್ಲಿ ಟರ್ಮಿನಲ್ 2 ನಲ್ಲಿನ ಅಂತಾರಾಷ್ಟ್ರೀಯ ನಿರ್ಗಮನ ಪ್ರದೇಶದಲ್ಲಿರುವ 080 ಲಾಂಜ್‌ಗೆ ‘ಮೆಚ್ಚಿನ ವಿಮಾನ ನಿಲ್ದಾಣ ಲಾಂಜ್’ ಎಂಬ ಶೀರ್ಷಿಕೆಯ ಮನ್ನಣೆಯನ್ನು ನೀಡಲಾಗಿದೆ.
ಪ್ರತಿಷ್ಠಿತ ಟ್ರಾವೆಲ್ , ಲೀಶರ್ ಮತ್ತು ಕಾಂಡೆ ನಾಸ್ಟ್ ಟ್ರಾವೆಲರ್ ನಿಯತಕಾಲಿಕೆಗಳು ಪ್ರಯಾಣ ಮತ್ತು ಆತಿಥ್ಯ ಉದ್ಯಮದಲ್ಲಿನ ಅತ್ಯುತ್ತಮ ಸಂಸ್ಥೆಗಳನ್ನು ಓದುಗರ ಆಯ್ಕೆಯ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡುತ್ತವೆ.
ಈ ಕುರಿತು ಮಾತನಾಡಿದ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (BIAL) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮರಾರ್, “ಪ್ರಯಾಣಿಕರಿಗೆ ಮೊದಲ ಆದ್ಯತೆಯಲ್ಲಿ ಉತ್ತಮ ಸೌಕರ್ಯ ಹಾಗೂ ವ್ಯವಸ್ಥೆಯೊಂದಿಗೆ ನಿರ್ಮಾಣವಾಗಿರುವ ಲಾಂಜ್‌ನ್ನು ಇನ್ನಷ್ಟು ಪ್ರಯಾಣಿಕರ ಸ್ನೇಹಿಯಂತೆ ಕಾರ್ಯನಿರ್ವಹಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಅನುಭವವನ್ನು ಇನ್ನಷ್ಟು ಉನ್ನತೀಕರಿಸಲು ಹಾಗೂ ಆತಿಥ್ಯದ ಹೊಸ ಮಾನದಂಡವನ್ನು ಹೆಚ್ಚಿಸಲು ನಮಗೆ ಪ್ರೇರಣೆ ನೀಡಿದಂತಾಗಿದೆ” ಎಂದು ತಿಳಿಸಿದರು.