ಬೆಳಗಾವಿ ಸುವರ್ಣಸೌಧ, ಡಿ.19 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ 2024ನೇ ಸಾಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ.
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಗುರುವಾರ ವಿಧಾನಸಭೆ ಕಲಾಪದಲ್ಲಿ, ವಿಧೇಯಕವನ್ನು ಪರ್ಯಾಲೋಚನೆ ಹಾಗೂ ಅಂಗೀಕಾರಕ್ಕೆ ಸದನದ ಮುಂದೆ ಮಂಡಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಪ್ರಾಧಿಕಾರಕ್ಕೆ ಹಿರಿಯ ಶ್ರೇಣಿ ಐ.ಎ.ಎಸ್ ಅಧಿಕಾರಿಯನ್ನು ಆಯಕ್ತರನ್ನಾಗಿ ನೇಮಿಸಲು ಅವಕಾಶ ನೀಡಲಾಗಿದೆ. ಪ್ರಾಧಿಕಾರ ಸದಸ್ಯತ್ವದ ನೇಮಕಕ್ಕೂ ತಿದ್ದುಪಡಿ ತಂದು ಸರ್ಕಾರಕ್ಕೆ ಸದಸ್ಯರ ನೇಮಕ ಮಾಡಲು ಅಧಿಕಾರ ನೀಡಲಾಗಿದೆ.
ಮೈಸೂರು ಪರಾಂಪರಿಕ ಮಹತ್ವ ಕಾಪಾಡಲು ಪ್ರಾಧಿಕಾರದ ಅಡಿ ಪರಾಂಪರಿಕ ಕಟ್ಟಡಗಳ ರಕ್ಷಣಾ ಸಮಿತಿ ರಚನೆ ಮಾಡಲಾಗುವುದು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಆರ್ಥಿಕ ನಿಯಂತ್ರಣ ಹಾಗೂ ಶಿಸ್ತಿಗೆ ಒಳಪಡಿಸಲಾಗುತ್ತದೆ ಎಂದು ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ಶಾಸಕರಾದ ಎಸ್.ಟಿ.ಸೋಮಶೇಖರ್ ಮಾತನಾಡಿ, ಮೂಡಾದಲ್ಲಿ ಶಾಸಕರ ಸಂಖ್ಯೆಯನ್ನು ಇಳಿಕೆ ಮಾಡುತ್ತಿರುವುದು ಸರಿಯಿದೆ. ಪ್ರಾಧಿಕಾರದಲ್ಲಿ ಇನ್ನೂ ಬಿಗಿಯಾದ ಕ್ರಮ ಕೈಗೊಳ್ಳಬೇಕು. ಅದು ಅನಿವಾರ್ಯ ಕೂಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕರಾದ ತಮ್ಮಣ್ಣ, ಭೈರತಿ ಸುರೇಶ್, ಎಸ್.ಟಿ.ಸೋಮಶೇಖರ್,ಟಿ.ಎಸ್.ಶ್ರೀವತ್ಸ, ಜಿ.ಟಿ.ದೇವೇಗೌಡ, ವಿ.ಸುನಿಲ್ ಕುಮಾರ್, ಹೆಚ್.ಡಿ.ರೇವಣ್ಣ ವಿಧೇಯಕ ಕುರಿತು ಚರ್ಚಿಸಿದರು.
ನಂತರ ವಿಧಾನ ಸಭೆಯಲ್ಲಿ ಧ್ವನಿ ಮತದ ಮೂಲಕ ಹಲವು ತಿದ್ದಪಡಿಯೊಂದಿಗೆ ವಿಧೇಯಕವನ್ನು ಅಂಗೀಕರಿಸಲಾಯಿತು.