ಬೆಂಗಳೂರು, ಡಿ.17 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(Resident Welfare Associations -RWAs), ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ 15ನೇ ಜನವರಿ 2025 ರೊಳಗೆ ಸಮುದಾಯ ಪ್ರಾಣಿಗಳ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಪಶು ಸಂಗೋಪನೆ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದ್ದಾರೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960, ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು-2023 ಮತ್ತು ಹೆಚ್ಚುವರಿ ಉಚ್ಚ ನ್ಯಾಯಾಲಯದ ಪ್ರಕಾರ ಆರ್ ಎಬ್ಲ್ಯುಎ, ಎಲ್ಲಾ ಸಂಸ್ಥೆಗಳು ಸಾರ್ವಜನಿಕ/ಖಾಸಗಿ ಕಚೇರಿಗಳು ಹಾಗೂ ಸಂಸ್ಥೆಗಳು / ಟೆಕ್ ಪಾರ್ಕ್ ಗಳು / ಶಾಲೆಗಳು ಮತ್ತು ಕಾಲೇಜುಗಳು / ಉದ್ಯಾನವನಗಳು / ಶಾಪಿಂಗ್ ಮಾಲ್‌ಗಳು / ವಸತಿ ಕಲ್ಯಾಣ ಸಂಘಗಳು ಮತ್ತು ಅಪಾರ್ಟ್ಮೆಂಟ್ ಮಾಲೀಕರ ಸಂಘಗಳಿಗೆ ಅನ್ವಯವಾಗುವ, ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳನ್ನು ಒಳಗೊಂಡಿರುವ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ (Animal Welfare Board Of India- AWBI) ಮಾರ್ಗಸೂಚಿಗಳ ಸರಳೀಕೃತ ಆವೃತ್ತಿಯನ್ನು ಪಾಲಿಕೆ ಹೊರಡಿಸಿದೆ. ಹಾಗೆಯೇ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಕೂಡ ಬಿಬಿಎಂಪಿ ಸೂಚನೆಯಲ್ಲಿ ಅಳವಡಿಸಿದೆ.
ಕೆಲವು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಅಪಾರ್ಟ್ ಮೆಂಟ್ ಮಾಲೀಕರ ಸಂಘಗಳು ಮತ್ತು ಸಂಸ್ಥೆಗಳು ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲು ಸಿದ್ದವಾಗಿವೆ. ಇನ್ನೂ ಅನೇಕ ಸಂಘಗಳು ಮತ್ತು ಸಂಸ್ಥೆಗಳು ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಬೇಕಾಗಿದೆ.
ಮಾರ್ಗಸೂಚಿಗಳಲ್ಲಿ ಈ ಪ್ರಮುಖ ಅಂಶಗಳು ಒಳಗೊಂಡಿವೆ :
• ಸಾಕುಪ್ರಾಣಿಗಳ ನಿರ್ವಹಣೆ, ಸಮುದಾಯದ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳ ನಿಯೋಜನೆ, ಪ್ರಾಣಿಗಳ ಕಾನೂನುಗಳು ಮತ್ತು ಪ್ರಾಣಿಗಳ ಹಕ್ಕುಗಳ ಬಗ್ಗೆ ಮತ್ತು ನಾಯಿ ಕಡಿತ ನಿರ್ವಹಣೆ ಬಗ್ಗೆ ನಿವಾಸಿಗಳಿಗೆ ಶಿಕ್ಷಣ ನೀಡುವುದು.
• ಕಟ್ಟುನಿಟ್ಟಾದ ಸಾಕು ಪ್ರಾಣಿ ನಿಯಮಗಳು ಮತ್ತು ನಾಯಿ ಕಡಿತ ನಿರ್ವಹಣೆಗಾಗಿ ಇತ್ತೀಚಿನ ಹೈಕೋರ್ಟ್ ಆದೇಶವು ಈ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಅಗತ್ಯವನ್ನು ಮತ್ತೊಮ್ಮೆ ಹೇಳಿದೆ.
• ಸಮುದಾಯದ ನಾಯಿಗಳು ಮತ್ತು ಬೆಕ್ಕುಗಳನ್ನು ಬೇರೆಡೆ ಸ್ಥಳಾಂತರಿಸುವುದು, ಸಾಕು ಪ್ರಾಣಿಗಳನ್ನು ನಿಷೇಧಿಸುವುದು, ಸಮುದಾಯದ ಫೀಡರ್‌ಗಳಿಗೆ ಕಿರುಕುಳ ನೀಡುವ ಮೂಲಕ ಪ್ರಾಣಿಗಳ ಆಹಾರ ಮತ್ತು ನೀರನ್ನು ಕಸಿದುಕೊಳ್ಳುವುದು. ಸುಳ್ಳು ನಾಯಿ ಕಡಿತದ ಪ್ರಕರಣಗಳನ್ನು ದಾಖಲಿಸುವುದು. ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಮಾರ್ಗಸೂಚಿಗಳ ಹೊರತಾಗಿಯೂ ಪ್ರಾಣಿ ಕೌರ್ಯ ಸಂಬಧಿಸಿದ ವಿರಳ ಸಮಸ್ಯೆಗಳ ಮೇಲೆ ಬಿಬಿಎಂಪಿ ಹೆಚ್ಚು ಗಮನ ಹರಿಸುತ್ತಿದೆ.
ಜನವರಿ 15, 2025ರ ನಂತರ, ಬಿಬಿಎಂಪಿ ಪಶುಸಂಗೋಪನಾ ಇಲಾಖೆ ತಂಡಗಳು ಪಾಲಿಕೆ ನಿರ್ದೇಶನಗಳ ಅನುಷ್ಠಾನದ ಸ್ಥಿತಿಯನ್ನು ಪರಿಶೀಲಿಸಲು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಈ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ವಿಫಲವಾದ ಸಂಘ ಸಂಸ್ಥೆಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಕಾನೂನು ಕ್ರಮಗಳನ್ನು ಪ್ರಾರಂಭಿಸುವ ಮೂಲಕ ಪ್ರಾಣಿಗಳ ಸ್ಥಳಾಂತರ ಮತ್ತು ಪ್ರಾಣಿ ಪಾಲಕರ ಕಿರುಕುಳದ ಘಟನೆಗಳನ್ನು ಗಂಭೀರವಾಗಿ ನಿರ್ವಹಿಸಲು ನಮ್ಮ ವಲಯದ ಸಹಾಯ ನಿರ್ದೇಶಕರುಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
ಪ್ರಾಣಿಗಳ ಕಾನೂನುಗಳ ಅನುಷ್ಠಾನ ಮತ್ತು ಅನುಸರಣೆಯನ್ನು ತಪ್ಪಿಸಲು ಯಾವುದೇ ಅಡ್ಡದಾರಿಯಲ್ಲಿ ಕುತಂತ್ರ ವಿಧಾನಗಳನ್ನು ತೆಗೆದುಕೊಳ್ಳದಂತೆ ನಾವು ನಾಗರೀಕರಲ್ಲಿ ಮನವಿ ಮಾಡುತ್ತೇವೆ. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿಸರ್ಗದಲ್ಲಿರುವ ಪ್ರತಿಯೊಂದು ಪ್ರಭೇದಕ್ಕೂ ವಿಶಿಷ್ಟವಾದ ಪಾತ್ರವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಪಶು ಸಂಗೋಪನೆ ವಿಭಾಗದ ಇನ್ ಸ್ಟಾಗ್ರಾಮ್ (Instagram) ಹ್ಯಾಂಡಲ್ @bbmp_animalhusbandry ನಲ್ಲಿ ಪಟ್ಟಿ ಮಾಡಲಾದ ಮಾರ್ಗಸೂಚಿಗಳನ್ನು ಹಾಗೂ ದಾಖಲೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಯಾವುದೇ ಹೆಚ್ಚಿನ ಸ್ಪಷ್ಟೀಕರಣಗಳಿಗಾಗಿ ಪಾಲಿಕೆಯ 1533 ಸಹಾಯವಾಣಿಗೆ ಕರೆ ಮಾಡಿ.