ಬೆಂಗಳೂರು, ಡಿ.15 www.bengaluruwire.com : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber Of Commerce)ಯ ನೂತನ ಅಧ್ಯಕ್ಷರಾಗಿ ಎಂ. ನರಸಿಂಹಲು ಆಯ್ಕೆಯಾಗಿದ್ದಾರೆ. 2024 -25ರ ಸಾಲಿನ ಚುನಾವಣೆ ಕೆ.ಎಫ್.ಸಿ.ಸಿ ಕಚೇರಿಯ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ಬಹಳ ಆಯೋಜನೆಗೊಂಡಿತ್ತು.
ನಿರ್ಮಾಪಕ , ವಿತರಕ ಹಾಗೂ ಪ್ರದರ್ಶಕ ವಲಯಗಳಿಂದ ಒಟ್ಟು 128 ಆಕಾಂಕ್ಷಿಗಳು ಸ್ಪರ್ಧೆಯ ಕಣದಲ್ಲಿದ್ದು, ಇದರಲ್ಲಿ ಈಗಾಗಲೇ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಪ್ರದರ್ಶಕ ವಲಯದಲ್ಲಿ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು, ವಜೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್ ರಾಜ್. ಆರ್ ವಿರುದ್ಧ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು.ಎಂ ಅವರ ನಡುವೆ ನೇರ ಪೈಪೋಟಿ ನಡೆದಿದ್ದು ಉತ್ತಮ ಅಂತರದಿಂದ ಅಧ್ಯಕ್ಷ ಸ್ಥಾನಕ್ಕೆ ನರಸಿಂಹಲು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನಿರ್ಮಾಪಕ ವಲಯದಿಂದ ಸಫೈರ್ ವೆಂಕಟೇಶ್, ಪ್ರದರ್ಶಕ ವಲಯದಿಂದ ರಂಗಪ್ಪ ಕೆ.ಓ, ವಿತರಕ ವಲಯದಿಂದ ಶಿಲ್ಪಾ ಶ್ರೀನಿವಾಸ್ ಆಯ್ಕೆಗೊಂಡರು. ಗೌರವ ಕಾರ್ಯದರ್ಶಿಯಾಗಿ ಪ್ರದರ್ಶಕ ವಲಯದಿಂದ ವೀರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್ ಎಲ್.ಸಿ, ನಿರ್ಮಾಪಕ ವಲಯದಿಂದ ಪ್ರವೀಣ್ ಕುಮಾರ್, ವಿತರಕ ವಲಯದಿಂದ ಎಂ.ಎನ್.ಕುಮಾರ್, ಖಜಾಂಚಿಯಾಗಿ ಚಿಂಗಾರಿ ಮಾದೇವ್ ಆಯ್ಕೆಗೊಂಡಿದ್ದಾರೆ.
ವಾಣಿಜ್ಯ ಮಂಡಳಿಯ ಒಟ್ಟು ಮತದಾರರ ಸಂಖ್ಯೆ 1409 ಇದ್ದು, ನಿರ್ಮಾಪಕ , ವಿತರಕ ಹಾಗೂ ಪ್ರದರ್ಶಕ ವಲಯದ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ಚುನಾವಣೆಯ ಕಣದಲ್ಲಿ ಯುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದ್ದು , ತುಂಬಾ ಉತ್ಸುಕದಿಂದ ಎಲ್ಲರೂ ಬಂದು ಮತ ಚಲಾಯಿಸಿ ನೂತನ ಪದಾಧಿಕಾರಿಗಳ ತಂಡವನ್ನು ಆಯ್ಕೆ ಮಾಡಿದೆ.